
ಬೆಂಗಳೂರು, 24 ಆಗಸ್ಟ್ (ಹಿ.ಸ.):
ಆ್ಯಂಕರ್:
ರಾಜಧಾನಿಯಲ್ಲಿ ಟ್ರಾಫಿಕ್ ದಟ್ಟಣೆಯಿಂದ ತಪ್ಪಿಸಿಕೊಳ್ಳಲು ಕಾಲುದಾರಿಗಳ ಮೇಲೆ ವಾಹನ ಚಲಾಯಿಸುವ ಸವಾರರಿಗೆ ಶಾಕ್ ನೀಡಲು ಸಾರಿಗೆ ಇಲಾಖೆ ಮುಂದಾಗಿದೆ. ಫುಟ್ಪಾತ್ಗಳ ಮೇಲೆ ದ್ವಿಚಕ್ರ ವಾಹನಗಳನ್ನು ಚಲಾಯಿಸುವವರ ವಿರುದ್ಧ ವಿಧಿಸಲಾಗುವ ದಂಡದ ಮೊತ್ತವನ್ನು ಪ್ರಸ್ತುತ ಇರುವ 500 ರೂಪಾಯಿಗಳಿಂದ ಬರೋಬ್ಬರಿ 5,000 ರೂಪಾಯಿಗೆ ಹೆಚ್ಚಿಸುವಂತೆ ರಾಜ್ಯ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ.
ನಗರದಲ್ಲಿ ಪೀಕ್ ಅವರ್ಗಳಲ್ಲಿ ಟ್ರಾಫಿಕ್ ಸಮಸ್ಯೆ ಹೆಚ್ಚಾದಾಗ, ಕೆಲ ಸವಾರರು ನಿಯಮಗಳನ್ನು ಉಲ್ಲಂಘಿಸಿ ಫುಟ್ಪಾತ್ಗಳ ಮೇಲೆಯೇ ವಾಹನಗಳನ್ನು ನುಗ್ಗಿಸುತ್ತಿದ್ದಾರೆ. ಇದರಿಂದ ಪಾದಚಾರಿಗಳು ಜೀವಭಯದಿಂದ ಓಡಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಸಾರ್ವಜನಿಕರ ಸುರಕ್ಷತೆಯನ್ನು ಖಾತರಿಪಡಿಸುವ ದೃಷ್ಟಿಯಿಂದ ಬೆಂಗಳೂರು ನಗರಾಭಿವೃದ್ಧಿ ಸಚಿವ ಕೃಷ್ಣ ಬೈರೇಗೌಡ ಅವರು ಸಾರಿಗೆ ಸಚಿವ ಭೈರತಿ ಸುರೇಶ್ ಅವರಿಗೆ ಪತ್ರ ಬರೆದು, ದಂಡದ ಮೊತ್ತವನ್ನು 10 ಪಟ್ಟು ಹೆಚ್ಚಿಸುವಂತೆ ಮನವಿ ಮಾಡಿದ್ದರು.
ಈ ಮನವಿಯ ಹಿನ್ನೆಲೆಯಲ್ಲಿ ಸಾರಿಗೆ ಇಲಾಖೆಯು 500 ರೂ. ಇದ್ದ ದಂಡವನ್ನು 5,000 ರೂ.ಗೆ ಪರಿಷ್ಕರಿಸಲು ಪ್ರಸ್ತಾವನೆ ಸಿದ್ಧಪಡಿಸಿದ್ದು, ಶೀಘ್ರದಲ್ಲೇ ಇದಕ್ಕೆ ಅಧಿಕೃತ ಮುದ್ರೆ ಬೀಳುವ ಸಾಧ್ಯತೆಯಿದೆ. ಟ್ರಾಫಿಕ್ ತಪ್ಪಿಸುವ ಭರದಲ್ಲಿ ಪಾದಚಾರಿಗಳ ಹಕ್ಕನ್ನು ಕಸಿದುಕೊಂಡು ಫುಟ್ಪಾತ್ಗಳ ಮೇಲೆ ವಾಹನ ಓಡಿಸುವವರಿಗೆ ಈ ಕಠಿಣ ಕ್ರಮದಿಂದ ಕಡಿವಾಣ ಬೀಳಲಿದೆ ಎಂದು ನಿರೀಕ್ಷಿಸಲಾಗಿದೆ.
---------------
ಹಿಂದೂಸ್ತಾನ್ ಸಮಾಚಾರ್ / BHARGAVI G R