
ಕೋಲಾರ, ಆಗಸ್ಟ್ ೨೪ (ಹಿ.ಸ.)
ಆ್ಯಂಕರ್: ಗ್ರಾಮೀಣ ಸೊಗಡಿನ ಜಾನಪದ ಕಲೆಗಳನ್ನು ಉಳಿಸಿ ಬೆಳೆಸುವಲ್ಲಿ ಇಂತಹ ಸಾಂಸ್ಕೃತಿಕ ಸಂಸ್ಥೆಗಳ ಪಾತ್ರ ಅಗತ್ಯವಿದೆ. ಸರ್ಕಾರ ಸಹ ಜಾನಪದ ಕಾರ್ಯಕ್ರಮಗಳಿಗೆ ನೆರವು ನೀಡುತ್ತಿದೆ. ಜಾನಪದ ನಮ್ಮ ಸಂಸ್ಕೃತಿಯು ತಾಯಿಬೇರು ಆಗಿದೆ. ಇಂದಿನ ಯುವ ಜನತೆ ಜಾನಪದದ ಕಡೆಗೆ ಹೆಚ್ಚು ಒಲವು ತೋರಬೇಕು ಎಂದು ಖ್ಯಾತ ಜಾನಪದ ಗಾಯಕ ಹಾಗೂ ಆಕಾಶವಾಣಿ ಮತ್ತು ದೂರದರ್ಶನದ ನಿವೃತ್ತ ನಿರ್ದೇಶಕರಾದ ಡಾ. ಬಾನಂದೂರು ಕೆಂಪಯ್ಯ ಕರೆ ನೀಡಿದರು.
ಕೋಲಾರ ತಾಲ್ಲೂಕು ಕಲ್ಲಂಡೂರು ಗ್ರಾಮದಲ್ಲಿ ಈನಲ ಈಜಲ ಕಲೆ ಮತ್ತು ಸಾಂಸ್ಕೃತಿಕ ಸಂಸ್ಥೆಯ ೨೦ನೇ ವರ್ಷಾಚರಣೆ ಹಾಗೂ 'ತಿಂಗಳ ಬೆಳದಿಂಗಳ ಅಂಗಳದಲ್ಲೊಂದು ಜಾನಪದ ಹಾಡು' ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಜ್ಞಾನ ವಿಜ್ಞಾನ ಸಮಿತಿಯ ಜಿಲ್ಲಾಧ್ಯಕ್ಷರಾದ ಜಿ. ಶ್ರೀನಿವಾಸ್ ಮಾತನಾಡಿ, ಸಾಹಿತ್ಯ, ಕಲೆ ಹಾಗೂ ಜಾನಪದದ ಮೂಲಕ ಸಮಾಜದಲ್ಲಿ ವೈಜ್ಞಾನಿಕ ಮನೋಭಾವ ಮತ್ತು ಸಾಂಸ್ಕೃತಿಕ ಜಾಗೃತಿ ಮೂಡಿಸುವ ಕಾರ್ಯ ನಿರಂತರವಾಗಿ ಸಾಗಬೇಕು ಎಂದು ಅಭಿಪ್ರಾಯಪಟ್ಟರು.
ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಕವಿ, ಸಾಹಿತಿ ಮತ್ತು ಬರಹಗಾರರಾದ ಡಾ. ಶರಣಪ್ಪ ಗಬ್ಬೂರು ಮಾತನಾಡಿ, ಜಾನಪದ ಸಾಹಿತ್ಯ ಮತ್ತು ಕಲೆಗಳು ನಮ್ಮ ಜೀವಪರ ಮೌಲ್ಯಗಳನ್ನು ಬಿಂಬಿಸುತ್ತವೆ. ಇಂದಿನ ಆಧುನಿಕ ಯುಗದಲ್ಲಿ ಗ್ರಾಮೀಣ ಸಂಸ್ಕೃತಿಯನ್ನು ಮುಂದಿನ ಪೀಳಿಗೆಗೆ ವರ್ಗಾಯಿಸುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ ಎಂದು ಅಭಿಪ್ರಾಯಪಟ್ಟರು.
ಈನಲ ಈಜಲ ಕಲೆ ಮತ್ತು ಸಾಂಸ್ಕೃತಿಕ ಸಂಸ್ಥೆಯ ಅಧ್ಯಕ್ಷರಾದ ವೆಂಕಟಾಜಲಪತಿ ಮಾತನಾಡಿ, ಕಳೆದ ಎರಡು ದಶಕಗಳಿಂದ ಸಂಸ್ಥೆಯು ಸಾಂಸ್ಕೃತಿಕ ಹಾಗೂ ಜಾನಪದ ಚಟುವಟಿಕೆಗಳನ್ನು ಪ್ರತಿ ತಿಂಗಳು ನಿರಂತರವಾಗಿ ನಡೆಸಿಕೊಂಡು ಬರುತ್ತಿದ್ದು, ಕಲಾಭಿಮಾನಿಗಳ ಸಹಕಾರದಿಂದ ಇಂದು ೨೦ನೇ ವರ್ಷಾಚರಣೆಯನ್ನು ತಲುಪಿದೆ ಎಂದು ಹರ್ಷ ವ್ಯಕ್ತಪಡಿಸಿದರು. ಮುಂದೆಯೂ ಸಹ ಕಲೆ ಹಾಗೂ ಸಾಂಸ್ಕೃತಿಕ ಕ್ಷೇತ್ರಕ್ಕೆ ಸಂಸ್ಥೆಯ ಸೇವೆ ನಿರಂತರವಾಗಿರಲಿದೆ ಎಂದರು.
ಕಾರ್ಯಕ್ರಮದಲ್ಲಿ ಈನೆಲ ಈಜಲ ಕಲಾ ಸಂಸ್ಥೆಯ ತಂಡದಿ0ದ ಜಾನಪದ ಗಾಯನ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ಪ್ರೇಕ್ಷಕರನ್ನು ರಂಜಿಸಿದವು. ಗಾಯಕರಾದ ಸೌದಾಮಿನಿ.ಬಿ.ವಿ. ರಮ್ಯ, ರಕ್ಷಿತ, ಹನುಮಂತಪ್ಪ ದಾಸರು ಗಾಯನ ಮಾಡಿದರು.
ಕಾರ್ಯಕ್ರಮದಲ್ಲಿ ಕಲಾವಿದ ಕುಡುವನಹಳ್ಳಿ ಗಣೇಶಪ್ಪ, ಕಂಟ್ರಾಕ್ಟರ್ ಕಲ್ಲಂಡೂರು ನಾಗರಾಜ್.ಎಂ, ಗಾಯಕಿ ಹೆಚ್.ಶಾಂತಮ್ಮ, ವೆಂಕಟಲಕ್ಷö್ಮಮ್ಮ, ಶೈಲಜಾ.ಎಂ, ನಿವೃತ್ತ ದೈಹಿಕ ಶಿಕ್ಷಕರಾದ ಬ್ಯಾಟರಾಯನಹಳ್ಳಿ ನಾರಾಯಣಸ್ವಾಮಿ ಹಾಗೂ ಸ್ಥಳೀಯ ಮುಖಂಡರು, ವಿವಿಧ ಸಂಘಟನೆಗಳ ಪದಾಧಿಕಾರಿಗಳು ಹಾಗೂ ಕಲಾಪ್ರೇಮಿಗಳು ಭಾಗವಹಿಸಿದ್ದರು.
ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್