


ಬಳ್ಳಾರಿ, 24 ಆಗಸ್ಟ್ (ಹಿ.ಸ.)
ಆ್ಯಂಕರ್ : ಸಚಿವ ಬಿ. ನಾಗೇಂದ್ರ ಅವರಿಗೆ ನೈತಿಕ ಬೆಂಬಲ ನೀಡಿ ಬಳ್ಳಾರಿ ನಗರ ಮತ್ತು ಗ್ರಾಮೀಣ ಕಾಂಗ್ರೆಸ್ಸಿಗರು ಹಾಗೂ ಬಿ. ನಾಗೇಂದ್ರ ಅವರ ಅಭಿಮಾನಿಗಳು ಬಳ್ಳಾರಿ ನಗರದ ಇಂದಿರಾಗಾಂಧಿ ವೃತ್ತದಿಂದ ಜಿಲ್ಲಾಧಿಕಾರಿಗಳ ಕಚೇರಿ ಎದುರಲ್ಲಿ ಇರುವ ಮಹಾತ್ಮಾಗಾಂಧಿ ಅವರ ಪುತ್ಥಳಿಯವರೆಗೆ ಸೋಮವಾರ ಪ್ರತಿಭಟನಾ ರ್ಯಾಲಿ ನಡೆಸಿ, ಬಿಜೆಪಿಯ ಮುಖಂಡರ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಬುಡಾ ಅಧ್ಯಕ್ಷ ಜೆ.ಎಸ್. ಆಂಜನೇಯಲು, ಜಿಲ್ಲಾ ನಗರ ಕಾಂಗ್ರೆಸ್ ಅಧ್ಯಕ್ಷರಾದ ಅಲ್ಲಂ ಪ್ರಶಾಂತ್, ಲಿಡ್ಕರ್ ಅಧ್ಯಕ್ಷರಾದ ಮುಂಡ್ರಗಿ ನಾಗರಾಜ್, ಬುಡಾ ಮಾಜಿ ಅಧ್ಯಕ್ಷರಾದ ಹುಮಾಯೂನ್ ಖಾನ್, ಮೇಯರ್ ಪಿ. ಗಾದೆಪ್ಪ, ಮುಖಂಡರಾದ ಬಿ. ರಾಂಪ್ರಸಾದ್, ಕೆ.ಇ. ಚಿದಾನಂದಪ್ಪ, ಗೋನಾಳ್ ನಾಗಭೂಷಣ, ತಿಮ್ಮನಗೌಡ, ವೆಂಕಟೇಶ್ ಹೆಗಡೆ, ಮುದಿಮಲ್ಲಯ್ಯ ಸೇರಿ ವಿವಿಧ ಮುಖಂಡರ ಸಾಮೂಹಿಕ ನಾಯಕತ್ವದಲ್ಲಿ, ಪ್ರತಿಭಟನಾ ರ್ಯಾಲಿಯು ನಡೆದಿದ್ದು, ದಾರಿಯುದ್ದಕ್ಕೂ ಕಾಂಗ್ರೆಸ್ಸಿಗರು ಬಿಜೆಪಿ ಮತ್ತು ಬಿಜೆಪಿ ಮುಖಂಡರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದು ವಿಶೇಷವಾಗಿತ್ತು.
ಪ್ರತಿಭಟನಾ ರ್ಯಾಲಿ ನಡೆಸಿದ ಮುಖಂಡರು ಮತ್ತು ಕಾರ್ಯಕರ್ತರು, `ಸಚಿವ ಬಿ. ನಾಗೇಂದ್ರ ಅವರ ವಿರುದ್ಧದ ಆರೋಪಗಳಿಗೆ ಆಧಾರವಿಲ್ಲ. ಬಿ. ನಾಗೇಂದ್ರ ವಿರುದ್ಧದ ಆರೋಪಗಳು ಎಲ್ಲವೂ ರಾಜಕೀಯ ಪ್ರೇರಿತವಾಗಿವೆ. ಕೇಂದ್ರದಲ್ಲಿ ಅಧಿಕಾರದಲ್ಲಿ ಇರುವ ಬಿಜೆಪಿಯ ಸಚಿವರ ಮೇಲೂ ಆರೋಪಗಳಿವೆ. ಕೇಂದ್ರದ ಬಿಜೆಪಿಯವರ ಬಗ್ಗೆ ಒಂದು ನೀತಿ, ಕರ್ನಾಟಕದಲ್ಲಿ ಕಾಂಗ್ರೆಸ್ಸಿಗರ ಬಗ್ಗೆ ಮತ್ತೊಂದು ನೀತಿ. ಈ ರೀತಿಯ ದ್ವಿಮುಖ ನೀತಿಯನ್ನು ಅನುಸರಿಸುತ್ತಿರುವ ಬಿಜೆಪಿ ಮತ್ತು ಬಿಜೆಪಿ ಮುಖಂಡರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಬಿಜೆಪಿಯವರು ರಾಜಕೀಯ ಮತ್ತು ವೈಯಕ್ತಿಕ ಕಾರಣಗಳಿಗಾಗಿ ಬಿ. ನಾಗೇಂದ್ರ ಅವರನ್ನು ದ್ವೇಷಿಸುತ್ತಿದ್ದಾರೆ. ಬಿಜೆಪಿ ಕುತಂತ್ರ ನೀತಿಯನ್ನು ಅನುಸರಿಸುತ್ತಿದೆ. ಬಳ್ಳಾರಿ ಜಿಲ್ಲಾ ಮತ್ತು ಕರ್ನಾಟಕ ಕಾಂಗ್ರೆಸ್ ಬಿ. ನಾಗೇಂದ್ರ ಅವರ ಜೊತೆಗಿದೆ. ಬಿ. ನಾಗೇಂದ್ರ ಅವರನ್ನು ಯಾವುದೇ ಕಾರಣಕ್ಕೂ ಸಚಿವ ಸ್ಥಾನದಿಂದ ತೆಗೆಯಬಾರದು. ಪಕ್ಷವು ಯಾವುದೇ ಕಾರಣಕ್ಕೂ ಬಿ. ನಾಗೇಂದ್ರ ಅವರ ಕೈಬಿಡಬಾರದು ಎಂದು ಅವರು ಮನವಿ ಮಾಡಿದರು.
---------------
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್