
ಕೋಲಾರ, ಆಗಸ್ಟ್ ೨೪: (ಹಿ.ಸ.)
ಆ್ಯಂಕರ್ : ಬ್ಯಾಂಕ್ಗಳು ಕೇವಲ ಠೇವಣಿ ಸಂಗ್ರಹಕ್ಕೆ ಸೀಮಿತವಾಗದೆ, ಸರ್ಕಾರಿ ಯೋಜನೆಗಳು ಹಾಗೂ ಆದ್ಯತಾ ವಲಯಗಳಿಗೆ ಸಾಲ ಮಂಜೂರು ಮಾಡುವಲ್ಲಿ ಹೆಚ್ಚಿನ ಮುತುವರ್ಜಿ ವಹಿಸಬೇಕು ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ. ಪ್ರವೀಣ್. ಪಿ. ಬಾಗೇವಾಡಿ ಅವರು ಬ್ಯಾಂಕ್ ಅಧಿಕಾರಿಗಳಿಗೆ ಸೂಚನೆ ನೀಡಿದರು.
ನಗರದ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ನಡೆದ ಜಿಲ್ಲಾ ಮಟ್ಟದ ಬ್ಯಾಂಕರ್ಸ್ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಪ್ರಸಕ್ತ ಆರ್ಥಿಕ ವರ್ಷದ ಮೊದಲ ತ್ರೈಮಾಸಿಕದ ಬ್ಯಾಂಕಿಂಗ್ ಪ್ರಗತಿಯನ್ನು ಸಮಗ್ರವಾಗಿ ಪರಾಮರ್ಶಿಸಿದ ಅವರು, ಗ್ರಾಹಕರಿಗೆ ತ್ವರಿತ ಸೇವೆ ಒದಗಿಸುವ ನಿಟ್ಟಿನಲ್ಲಿ ಬ್ಯಾಂಕ್ಗಳು ಕಾರ್ಯೋನ್ಮುಖವಾಗಬೇಕು ಎಂದು ನಿರ್ದೇಶನ ನೀಡಿದರು.
ಜಿಲ್ಲೆಯ ಆರ್ಥಿಕ ಪ್ರಗತಿ ಮತ್ತು ಸಾಲ ವಿತರಣೆಯ ಒಟ್ಟಾರೆ ವರದಿಯನ್ನು ಗಮನಿಸಿದಾಗ, ಕೋಲಾರ ಜಿಲ್ಲೆಯಲ್ಲಿ ಒಟ್ಟು ೨೦೮ ಬ್ಯಾಂಕ್ ಶಾಖೆಗಳು ಹಾಗೂ ೩೦೭ ಎಟಿಎಂಗಳು ಸಕ್ರಿಯವಾಗಿ ಕಾರ್ಯನಿರ್ವಹಿಸುತ್ತಿವೆ. ಪ್ರಸಕ್ತ ಆರ್ಥಿಕ ವರ್ಷದ ಮೊದಲ ತ್ರೈಮಾಸಿಕದಲ್ಲಿ ೨೯೯ ಕೋಟಿ ರೂ. ಠೇವಣಿ ಹಾಗೂ ೪೮೭ ಕೋಟಿ ರೂ. ಮುಂಗಡ ಸಾಲ ಸೇರಿದಂತೆ ಒಟ್ಟು ೮೦೦ ಕೋಟಿ ರೂ.ಗಳ ಹೆಚ್ಚುವರಿ ವಹಿವಾಟು ನಡೆದಿದೆ ಎಂದು ತಿಳಿಸಿದರು.
ವಿಶೇಷವಾಗಿ ಜಿಲ್ಲೆಯ ಸಾಲ ಮತ್ತು ಠೇವಣಿ ಅನುಪಾತವು ಶೇ. ೧೦೧ ರಷ್ಟಿದ್ದು, ಇದು ಅತ್ಯುತ್ತಮ ಆರ್ಥಿಕ ಚಟುವಟಿಕೆಯ ಸಂಕೇತವಾಗಿದೆ ಎಂದು ಸಭೆಯಲ್ಲಿ ವಿವರಿಸಲಾಯಿತು. ಕೃಷಿ ವಲಯಕ್ಕೆ ೧೭೦ ಕೋಟಿ ರೂ. ಹಾಗೂ ಸಣ್ಣ ಮತ್ತು ಅತಿಸಣ್ಣ ಕೈಗಾರಿಕೆಗಳಿಗೆ ೧೧೯ ಕೋಟಿ ರೂ. ಸಾಲ ವಿತರಿಸಲಾಗಿದೆ. ಆದರೆ, ಶೈಕ್ಷಣಿಕ ಸಾಲ ಕೇವಲ ೧ ಕೋಟಿ ರೂ. ಹಾಗೂ ಗೃಹ ಸಾಲ ಕೇವಲ ೧೩ ಕೋಟಿ ರೂ. ಮಾತ್ರ ವಿತರಣೆಯಾಗಿದ್ದು, ಮುಂಬರುವ ತ್ರೈಮಾಸಿಕಗಳಲ್ಲಿ ಈ ವಲಯಗಳಿಗೆ ಸಾಲ ನೀಡಿಕೆಯನ್ನು ಗಣನೀಯವಾಗಿ ಹೆಚ್ಚಿಸುವಂತೆ ಸಿಇಒ ಸೂಚಿಸಿದರು.
ಆದ್ಯತಾ ವಲಯದ ಸಾಲ ವಿತರಣೆಯಲ್ಲಿ ಪ್ರತಿ ಬ್ಯಾಂಕ್ ವಾರ್ಷಿಕ ಗುರಿಯಲ್ಲಿ ಕನಿಷ್ಠ ಶೇ. ೪೦ ರಷ್ಟು ಅಥವಾ ಪ್ರತಿ ತ್ರೈಮಾಸಿಕದಲ್ಲಿ ಕನಿಷ್ಠ ಶೇ. ೧೦ ರಷ್ಟು ಸಾಧನೆ ಮಾಡಲೇಬೇಕು ಎಂಬ ನಿಯಮವಿದ್ದರೂ, ಜಿಲ್ಲೆಯ ಒಟ್ಟಾರೆ ಸಾಧನೆ ಶೇ. ೨೯ ರಷ್ಟಿದೆ. ವಿಶೇಷವಾಗಿ ಫೆಡರಲ್ ಬ್ಯಾಂಕ್, ಕೋಟಕ್ ಮಹೀಂದ್ರ ಮತ್ತು ಸಿಟಿ ಯೂನಿಯನ್ ಸೇರಿದಂತೆ ಹಲವು ಖಾಸಗಿ ಬ್ಯಾಂಕ್ಗಳ ಸಾಧನೆ ತೀರಾ ಕಳಪೆಯಾಗಿರುವುದಕ್ಕೆ ಸಭೆಯಲ್ಲಿ ತೀವ್ರ ಅಸಮಾಧಾನ ವ್ಯಕ್ತಪಡಿಸಲಾಯಿತು. ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಸಾಲ ಮತ್ತು ಠೇವಣಿ ಅನುಪಾತವು ಶೇ. ೫೮.೯ ರಷ್ಟಿದ್ದು, ಕನಿಷ್ಠ ಶೇ. ೬೦ ರ ಗುರಿಯನ್ನು ತಲುಪಲು ಸೂಚಿಸಲಾಯಿತು. ಪಂಜಾಬ್ ಅಂಡ್ ಸಿಂದ್ ಬ್ಯಾಂಕ್ನ ಆದ್ಯತಾ ವಲಯದ ಸಾಧನೆ ಕೇವಲ ಶೇ. ೦.೮೪ ರಷ್ಟಿದ್ದು, ಇದು ತೀವ್ರ ಕಳವಳಕಾರಿಯಾಗಿದೆ ಎಂದು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.
ಸರ್ಕಾರಿ ಯೋಜನೆಗಳ ಅನುಷ್ಠಾನದಲ್ಲಿ ಬ್ಯಾಂಕ್ಗಳ ವಿಳಂಬ ಧೋರಣೆಯನ್ನು ಪ್ರಶ್ನಿಸಿದ ಅವರು ಅಧಿಕಾರಿಗಳು, ಪಿಎಂ ವಿಶ್ವಕರ್ಮ ಯೋಜನೆಯಡಿ ಸಲ್ಲಿಕೆಯಾಗಿರುವ ೨,೭೫೮ ಅರ್ಜಿಗಳ ಪೈಕಿ ಕೇವಲ ಶೇ. ೧೩ ರಷ್ಟು ಮಾತ್ರ ವಿಲೇವಾರಿಯಾಗಿವೆ. ಉಳಿದ ಅರ್ಜಿಗಳನ್ನು ಶೀಘ್ರವಾಗಿ ವಿಲೇವಾರಿ ಮಾಡಲು ಸೂಚಿಸಿದರು. ಪಿಎಂ ಸ್ವನಿಧಿ ಯೋಜನೆಯಡಿ ೫೧ ಅರ್ಜಿಗಳು ಸಲ್ಲಿಕೆಯಾಗಿದ್ದರೂ ಕೇವಲ ೨ ಅರ್ಜಿಗಳಿಗೆ ಸಾಲ ಮಂಜೂರಾಗಿರುವುದು ಹಾಗೂ ಪ್ರಧಾನ ಮಂತ್ರಿ ಜೀವನ್ ಜ್ಯೋತಿ ಭೀಮಾ ಯೋಜನೆ, ಸುರಕ್ಷಾ ಭೀಮಾ ಯೋಜನೆ ಮತ್ತು ಅಟಲ್ ಪಿಂಚಣಿ ಯೋಜನೆಗಳ ಪ್ರಗತಿ ಕುಂಠಿತವಾಗಿದೆ ಎಂದು ಅಸಮದಾನ ವ್ಯಕ್ತಪಡಿಸಿದರು. ಸ್ವಸಹಾಯ ಸಂಘಗಳ ಖಾತೆ ತೆರೆಯಲು ಹಾಗೂ ಸಾಲ ನೀಡಲು ವಿಳಂಬ ಮಾಡುತ್ತಿರುವ ಬ್ಯಾಂಕ್ಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವ ಎಚ್ಚರಿಕೆ ನೀಡಲಾಯಿತು. ಇದೇ ವೇಳೆ, ಬ್ಯಾಂಕ್ ಶಾಖೆಗಳಲ್ಲಿ ಅಧಿಕಾರಿಗಳು ಹಾಗೂ ಸಿಬ್ಬಂದಿ ಸರಿಯಾದ ಸಮಯಕ್ಕೆ ಹಾಜರಿರದಿರುವ ಬಗ್ಗೆ ಆರ್ಬಿಐ ಎಜಿಎಂ ನಿಶಾ ಠಾಕೂರ್ ಅವರು ತೀವ್ರ ಅಸಮಾಧಾನ ವ್ಯಕ್ತಪಡಿಸಿ, ಕಡ್ಡಾಯವಾಗಿ ಸಮಯಪಾಲನೆ ಮಾಡುವಂತೆ ತಾಕೀತು ಮಾಡಿದರು.
ಸಭೆಯಲ್ಲಿ ಕೆನರಾ ಬ್ಯಾಂಕ್ ಪ್ರಾದೇಶಿಕ ಕಚೇರಿ ವ್ಯವಸ್ಥಾಪಕ ಪ್ರಭಂಜನ್ ಕುಮಾರ್, ನಬಾರ್ಡ್ ಡಿಡಿಎಂ ಮಹದೇವ್ ರೆಡ್ಡಿ, ಲೀಡ್ ಬ್ಯಾಂಕ್ ಮ್ಯಾನೇಜರ್ ಶಿವಕುಮಾರ್ ಸೇರಿದಂತೆ ಜಿಲ್ಲೆಯ ಎಲ್ಲಾ ಪ್ರಮುಖ ಬ್ಯಾಂಕುಗಳ ವ್ಯವಸ್ಥಾಪಕರು ಭಾಗಿಯಾಗಿದ್ದರು.
ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್