


ಕೊಪ್ಪಳ: , 24 ಆಗಸ್ಟ್ (ಹಿ.ಸ.)
ಆ್ಯಂಕರ್ : ಪ್ರಗತಿ, ವಿಜ್ಞಾನ ಎಂಬುದು ಮನುಷ್ಯ ಸೇರಿದಂತೆ ಜೀವಕೋಟಿಗೆ ಪ್ರೇರಕ ಮತ್ತು ಪೂರಕ ಆಗಿರಬೇಕು ಹೊರತು ಸಂಹಾರ ರೂಪದಲ್ಲಿ ಇರಬಾರದು ಎಂದು ಖ್ಯಾತ ಸಾಹಿತಿ ಚಿಂತಕರು ಪ್ರೊ. ಎಸ್. ಜಿ ಸಿದ್ದರಾಮಯ್ಯ ಹೇಳಿದರು.
ಅವರು ಬಲ್ಡೋಟ ಕಾರ್ಖಾನೆ ವಿರೋಧಿ ಧರಣಿ ಸ್ಥಳದಲ್ಲಿ ರವಿವಾರ ಸಾವಿತ್ರಿ ಮುಜುಮದಾರ ಅವರ 'ಕಪ್ಪು ಕಾವ್ಯ' ಕವನ ಸಂಕಲನ ಬಿಡುಗಡೆಗೊಳಿಸಿ ಮಾತನಾಡಿದರು.
ಸಾವಿತ್ರಿ ಮುಜುಮದಾರರ ' ಕಪ್ಪು ಕಾವ್ಯ' ಸಂಕಲನ ಈ ಚಳುವಳಿಯ ಉತ್ಪನ್ನವಾಗಿ, ಶರಣರ ವಚನಗಳ ಪ್ರೇರಣೆಯಾಗಿ ಹುಟ್ಟಿದೆ. ಮಾಲಿನ್ಯ ವಿರೋಧಿ ಚಳುವಳಿ ಧಾರಣೆ ಮಾಡಿಕೊಂಡ ಭಾವದಲ್ಲಿ ಈ ಕ್ರಾಂತಿಕಾರಿ 'ಕಪ್ಪು ಕಾವ್ಯ' ಹುಟ್ಟಿದೆ.
ಇಲ್ಲಿನ ಕಾರ್ಖಾನೆಗಳು ಕಲ್ಲಿದ್ದಲು ಸುಡುವುದನ್ನು ಬಿಟ್ಟು ಮಾಲಿನ್ಯ ನಿಯಂತ್ರಣ ಮಾಡಲಿ. ಇದು ಸಾಧ್ಯವಿಲ್ಲ ಎಂದಾದರೆ ಘಟಕಗಳನ್ನು ಮುಚ್ಚಲಿ. ಪಾಕಿಸ್ಥಾನ ಪಂಜಾಬ ಕವಿ ಘನಶ್ಯಾಮ್ ಅಗರವಾಲ್ ಅವರ ಕವನ ಉಲ್ಲೇಖ ಮಾಡಿ ವಿಜ್ಞಾನಿ ಬಾಂಬ್ ಕಂಡುಹಿಡಿದು ಜೀವಕಂಟಕನಾದ ಈತನಿಗೆ ಹತ್ತು ಚಡಿಯೇಟು ಕೊಡಿ, ಈ ವಿಜ್ಞಾನಿಯನ್ನು ರಾಜಕಾರಣಿ ಪ್ರೋತ್ಸಾಹಿಸಿದ ಈ ತಪ್ಪಿಗೆ ಇಪ್ಪತ್ತು ಚಡಿ ಏಟು ಕೊಡಿ, ಧಾರ್ಮಿಕ ಗುರು ಇದಕ್ಕೆ ಧರ್ಮದ ಲೇಪನ ಹಚ್ಚಿದ ಈ ತಪ್ಪಿಗೆ ಮೂವತ್ತು ಚಡಿಯೇಟು ಕೊಡಿ, ರಾಜ್ಯದಲ್ಲಿ ಕವಿ, ಸಾಹಿತಿ, ಸಾಂಸ್ಕೃತಿಕ ವ್ಯಕ್ತಿ ಇದ್ದೂ ಬಾಂಬ್ ತಯಾರಿ ತಡೆಯಲಾಗಲಿಲ್ಲವಲ್ಲ ಈ ತಪ್ಪಿಗೆ ನೂರು ಚಡಿಯೆಟು ಕೊಡಿ ಎಂದು ಬರೆದ ತಾತ್ಪರ್ಯ ಈಗಿನ ಸಾಹಿತಿಗಳು ಇದ್ದೂ ಇಷ್ಟೆಲ್ಲಾ ಅಪಾಯಕಾರಿ ಪರಿಸ್ಥಿತಿ ನಿರ್ಮಾಣ ಆಗಿದೆಯಲ್ಲಾ ಇದನ್ನು ನಿಷ್ಟೂರವಾಗಿ ಖಂಡಿಸುವ ಸಾಹಿತ್ಯ, ಬರಹಗಳು ಬರಬೇಕು ಎಂದರು. ಈ ಕಾವ್ಯ ಕ್ರಾಂತಿಯ ಆಶಯ ಹೇಳುವ ಬದಲಾಗಿ ವಿಜ್ಞಾನ ರೂಪದ ಪ್ರಗತಿ ಬೆಳವಣಿಗೆಯ ವೈಜ್ಞಾನಿಕ ಅನಾಹುತಗಳನ್ನು ಕಟ್ಟಿಕೊಡುವ ಸಂವೇದನಾಶೀಲ ರಚನೆಯಾಗಿದೆ ಎಂದರು.
ಕೊಪ್ಪಳ ಸುತ್ತಲಿನ ಪ್ರದೇಶದ ಸಮಷ್ಟಿ ಬದುಕು ಎದುರಿಸುತ್ತಿರುವ ದಿನನಿತ್ಯದ ಸಂಕಷ್ಟ ಬವಣೆಗಳನ್ನು ಈ ಕಾವ್ಯ ಅನುಭವವಾಗಿ ಒಳಗೊಂಡಿದೆ ಎಂದು ಎಸ್.ಜಿ.ಸಿದ್ದರಾಮಯ್ಯ ಹೇಳಿದರು.
ನಾಡಿನ ಚಿಂತಕ ಬರಹಗಾರ ಜಾಣಗೆರೆ ವೆಂಕಟರಾಮಯ್ಯ ಮಾತನಾಡಿ ಕೊಪ್ಪಳ ಸುಂದರ ಪರಿಸರ ಇರುವ ನೆಲ. ತುಂಗಭದ್ರೆ ಇಲ್ಲಿನ ಅಭಿವೃದ್ಧಿಗೆ ಮುಕುಟಪ್ರಾಯಳಾಗಿದ್ದಾಳೆ. ಈ ಅಣೆಕಟ್ಟೆಯ ಸುಸ್ಥಿರ ಅಭಿವೃದ್ಧಿ ಕನಸಿಗೆ ದೌರ್ಭಾಗ್ಯ ಎದುರಾಗಲು ಇಲ್ಲಿನ ರಾಜಕಾರಣಿಗಳೇ ಕಾರಣ. ಇಷ್ಟು ದೊಡ್ಡ ಮಟ್ಟದ ಜನರ ಜೀವ, ಆರೋಗ್ಯ ಹಾನಿಯನ್ನು ಕನ್ನಡ ನಾಡು ಸಹಿಸಿಕೊಂಡಿರಲು ಹೇಗೆ ಸಾಧ್ಯ. ಈ ಹೋರಾಟ ರಾಜ್ಯಮಟ್ಟಕ್ಕೆ ವಿಸ್ತರಿಸುವಲ್ಲಿ ರಾಜಧಾನಿಯಲ್ಲಿ ಶೀಘ್ರದಲ್ಲಿ ಫ್ರೀಡಂ ಪಾರ್ಕ್ ನಲ್ಲಿ ಹೋರಾಟ ಆರಂಭಿಸುತ್ತೇವೆ. ನೀವೂ ಬನ್ನಿ ಎಂದು ಕರೆ ನೀಡಿದರು.
ಮತ್ತೊಬ್ಬ ಸಾಹಿತಿ, ಅಂಕಣಕಾರ ಆರ್. ಜಿ.ಹಳ್ಳಿ ನಾಗರಾಜ ಮಾತನಾಡಿ ಗವಿಶ್ರೀಗಳು ಸರಿಯಾದ ಸಂದರ್ಭದಲ್ಲಿ ಬೀದಿಗೆ ಇಳಿದು ಕಾರ್ಖಾನೆ ಮಾಲಿನ್ಯ ನಿಯಂತ್ರಣ ಮಾಡಲಿ ಇಲ್ಲವೆ ಹಳ್ಳಿಗಳ ಜನರು ಬದುಕುಳಿಯಲು ಕಾರ್ಖಾನೆ ಬಂದ್ ಆಗಲಿ ಎಂದಿದ್ದರು. ಅದಲ್ಲದೆ ಕೊಪ್ಪಳ-ಭಾಗ್ಯನಗರದ ಲಕ್ಷಗಟ್ಟಲೆ ಜನರ ಭವಿಷ್ಯ ಉಳಿಯಲು ಬಲ್ಡೋಟ ಸ್ಥಾಪನೆ ಬೇಡ ಎನ್ನುವುದು ಸರಿಯಾಗಿದೆ. ಹೋರಾಟ 300ನೇ ದಿನ ತಲುಪುವ ಈ ಸಂದರ್ಭದಲ್ಲಿ ಗವಿಸಿದ್ದೇಶ್ವರ ಸ್ವಾಮಿಗಳು ದೊಡ್ಡ ಮಠ, ಭಕ್ತರನ್ನು ಹೊಂದಿ ಹೆಸರಾದಂತೆ ಈ ಹೋರಾಟ ತಾರ್ಕಿಕ ಅಂತ್ಯವಾಗುವವರೆಗೆ ಮುಂದಿರಬೇಕು ಎಂದರು.
ವೇದಿಕೆಯಲ್ಲಿ ಪ್ರಧಾನ ಸಂಚಾಲಕ ಅಲ್ಲಮಪ್ರಭು ಬೆಟ್ಟದೂರು, ಸಂಚಾಲಕ ಮಲ್ಲಿಕಾರ್ಜುನ ಬಿ.ಗೋನಾಳ, ಸಾಹಿತಿ ಈಶ್ವರ ಹತ್ತಿ, ಡಿ.ಎಂ.ಬಡಿಗೇರ, ಕೆ.ಆರ್.ಎಸ್ ಪಕ್ಷದ ಎಲ್.ಜೀವನ್, ಕ.ರ.ವೇ ಕ.ವ.ಚಂದ್ರಶೇಖರ, ಸರೋಜಾ ಬಾಕಳೆ, ಡಾ.ಪಾರ್ವತಿ ಕನಕಗಿರಿ, ಸಂತೋಷ ಹಳ್ಳಿ, ಎ.ಎಸ್.ಗೊಡಚಳ್ಳಿ, ಗಫಾರಸಾಬ್ ವಾಲಿಕಾರ, ಶಿವಾನಂದಯ್ಯ ಬೀಳಗಿಮಠ, ಪ್ರವೀಣಕುಮಾರ ಗುನ್ನಳ್ಳಿ, ರಾಜಶೇಖರ ಏಳುಭಾವಿ, ನಾಗರಾಜ ಕುಷ್ಟಗಿ, ಎ.ಪಿ.ಅಂಗಡಿ, ಬಿ.ಜಿ.ಕರಿಗಾರ, ಮಲ್ಲಪ್ಪ ಮಾದಿನೂರು, ವೆಂಕಣ್ಣಾಚಾರ ಕಟ್ಟಿ, ಮಹಾದೇವಪ್ಪ ಮಾವಿನಮಡು, ಪಂಪಣ್ಣ ಚಿಂತಪಲ್ಲಿ ಮುಂತಾದವರು ಇದ್ದರು.
---------------
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್