
ಬೆಂಗಳೂರು, 24 ಆಗಸ್ಟ್ (ಹಿ.ಸ.):
ಆ್ಯಂಕರ್:ಪರಿಶಿಷ್ಟ ಪಂಗಡಗಳ ಕಲ್ಯಾಣಕ್ಕಾಗಿ ಮೀಸಲಿಟ್ಟಿದ್ದ ವಾಲ್ಮೀಕಿ ಅಭಿವೃದ್ಧಿ ನಿಗಮದ ಬಹುಕೋಟಿ ರೂ. ಸಾರ್ವಜನಿಕ ಹಣದ ಅಕ್ರಮಕ್ಕೆ ಸಂಬಂಧಿಸಿದ ತನಿಖೆಯಲ್ಲಿ ಸಿಬಿಐ ಹಾಗೂ ಲೋಕಾಯುಕ್ತ ಸಂಸ್ಥೆಗಳು ಆರೋಪಪಟ್ಟಿ ಸಲ್ಲಿಸಿದ್ದು, ಪ್ರಕರಣದಲ್ಲಿ ಸಚಿವ ಬಿ. ನಾಗೇಂದ್ರ ಅವರ ಹೆಸರನ್ನು ಪ್ರಮುಖ ಆರೋಪಿಯಾಗಿ ಉಲ್ಲೇಖಿಸಲಾಗಿದೆ ಎಂದು ಪ್ರತಿಪಕ್ಷ ನಾಯಕ ಆರ್. ಅಶೋಕ್ ಆರೋಪಿಸಿದ್ದಾರೆ.
ಗಂಭೀರ ಆರೋಪಗಳ ಹಿನ್ನೆಲೆಯಲ್ಲಿ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದ ಬಿ. ನಾಗೇಂದ್ರ ಅವರನ್ನು ತನಿಖೆ ಮುಂದುವರಿದಿರುವ ಸಂದರ್ಭದಲ್ಲೇ ಮತ್ತೆ ಸಚಿವ ಸಂಪುಟಕ್ಕೆ ಸೇರ್ಪಡೆ ಮಾಡಿರುವುದು ಸಂವಿಧಾನಾತ್ಮಕ ನೈತಿಕತೆ ಹಾಗೂ ಸಾರ್ವಜನಿಕ ವಿಶ್ವಾಸಾರ್ಹತೆಗೆ ಸವಾಲಾಗಿದೆ ಎಂದು ಅವರು ಹೇಳಿದ್ದಾರೆ.
ಈ ಕುರಿತು ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರಿಗೆ ಪತ್ರ ಬರೆದು, ತಕ್ಷಣ ಮಧ್ಯಪ್ರವೇಶಿಸುವಂತೆ ಮನವಿ ಮಾಡಿರುವುದಾಗಿ ಆರ್. ಅಶೋಕ್ ತಿಳಿಸಿದ್ದಾರೆ.
ಉನ್ನತ ಸಂವಿಧಾನಿಕ ಹುದ್ದೆಗಳಲ್ಲಿ ಸಾರ್ವಜನಿಕ ವಿಶ್ವಾಸಾರ್ಹತೆ, ಪ್ರಾಮಾಣಿಕತೆ ಹಾಗೂ ನೈತಿಕತೆಗೆ ಹೆಚ್ಚಿನ ಮಹತ್ವವಿದೆ ಎಂದು ಸುಪ್ರೀಂ ಕೋರ್ಟ್‌ನ ‘ಮನೋಜ್ ನರುಲಾ ವಿರುದ್ಧ ಭಾರತ ಒಕ್ಕೂಟ’ ಪ್ರಕರಣದಲ್ಲಿ ಸ್ಪಷ್ಟಪಡಿಸಲಾಗಿದೆ. ಹೀಗಾಗಿ ರಾಜಕೀಯ ಅನುಕೂಲಕ್ಕಾಗಿ ಸಂವಿಧಾನಾತ್ಮಕ ಮೌಲ್ಯಗಳನ್ನು ಬಲಿಕೊಡಲು ಅವಕಾಶ ನೀಡಬಾರದು ಎಂದು ಅವರು ಒತ್ತಾಯಿಸಿದ್ದಾರೆ.
ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಬಿ. ನಾಗೇಂದ್ರ ಅವರ ಸಂಪುಟ ಸೇರ್ಪಡೆಯನ್ನು ತಕ್ಷಣ ಹಿಂಪಡೆಯುವಂತೆ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ರಾಜ್ಯಪಾಲರನ್ನು ಆಗ್ರಹಿಸಿರುವ ಆರ್. ಅಶೋಕ್, ಕರ್ನಾಟಕದ ಜನತೆಗೆ ಪಾರದರ್ಶಕ, ಪ್ರಾಮಾಣಿಕ ಹಾಗೂ ಜವಾಬ್ದಾರಿಯುತ ಆಡಳಿತ ದೊರೆಯುವ ಹಕ್ಕಿದೆ. ಯಾವುದೇ ರಾಜಕೀಯ ಲೆಕ್ಕಾಚಾರಕ್ಕಿಂತ ಸಾರ್ವಜನಿಕ ವಿಶ್ವಾಸಾರ್ಹತೆ ಮುಖ್ಯ ಎಂದು ಹೇಳಿದ್ದಾರೆ.
---------------
ಹಿಂದೂಸ್ತಾನ್ ಸಮಾಚಾರ್ / Rakesh.M.B.