


ಬಳ್ಳಾರಿ, 24 ಆಗಸ್ಟ್ (ಹಿ.ಸ.)
ಆ್ಯಂಕರ್ : ಡಾ. ಬಿ. ಆರ್. ಅಂಬೇಡ್ಕರ್ ಅವರನ್ನು ಕೇವಲ ವ್ಯಕ್ತಿಯಾಗಿ ನೋಡದೆ ಅವರ ವೈಚಾರಿಕತೆ, ತತ್ವಜ್ಞಾನ ಹಾಗೂ ಸಾಮಾಜಿಕ ದೃಷ್ಟಿಕೋನವನ್ನು ಆಳವಾಗಿ ಅರ್ಥೈಸಿಕೊಳ್ಳುವ ಅಗತ್ಯವಿದೆ ಎಂದು ವಿಜಯನಗರ ಶ್ರೀ ಕೃಷ್ಣದೇವರಾಯ ವಿಶ್ವವಿದ್ಯಾಲಯದ ಕುಲಸಚಿವ(ಮೌಲ್ಯಮಾಪನ) ಪ್ರೊ. ಎನ್.ಎಂ. ಸಾಲಿ ಅವರು ಹೇಳಿದ್ದಾರೆ.
ಕನ್ನಡ ಮತ್ತು ಸಂಸ್ಕøತಿ ಇಲಾಖೆ ವತಿಯಿಂದ ಭಾರತ ರತ್ನ ಡಾ. ಬಿ.ಆರ್. ಅಂಬೇಡ್ಕರ್ ರವರ ಬದುಕು ಹಾಗೂ ಸಾಧನೆಗಳ ಪರಿಚಯದ ಅಂಗವಾಗಿ ನಗರದ ಸರಳಾದೇವಿ ಸತೀಶ್ಚಂದ್ರ ಅಗರ್ವಾಲ್ ಸರ್ಕಾರಿ ಪ್ರಥಮ ದರ್ಜೆ ಕಾಲೇಜು (ಸ್ವಾಯತ್ತ) ಸಭಾಂಗಣದಲ್ಲಿ ಸೋಮವಾರ ಆಯೋಜಿಸಿದ್ದ ‘ಅಂಬೇಡ್ಕರ್ ಓದು’ ವಿಶೇಷ ಕಾರ್ಯಕ್ರಮ ಮತ್ತು ಪ್ರಬಂಧ ಸ್ಪರ್ಧಾ ವಿಜೇತರಿಗೆ ಪುಸ್ತಕ ಬಹುಮಾನ ವಿತರಣಾ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಅಂಬೇಡ್ಕರ್ ಅವರ ಪ್ರತಿಮೆಗಳು ಕೈಯಲ್ಲಿ ಪುಸ್ತಕ ಹಿಡಿದು ಮುನ್ನಡೆಯುವ ಸಂಕೇತ ನೀಡುವುದು ಕೇವಲ ಶಾಲೆಗೆ ಹೋಗುವುದಕ್ಕಷ್ಟೇ ಅಲ್ಲ, ಜ್ಞಾನಾರ್ಜನೆಯ ಮೂಲಕ ವ್ಯಕ್ತಿ ಮತ್ತು ಸಮುದಾಯದ ಸಂಸ್ಕøತಿಯನ್ನು ರಕ್ಷಿಸಿಕೊಳ್ಳುವುದಕ್ಕೆ ಎಂದು ಪುನರುಚ್ಚರಿಸಿದರು.
ಅಂಬೇಡ್ಕರ್ ಅವರ ಆಶಯಗಳು ನಿಜವಾಗಬೇಕಾದರೆ ಕೇವಲ ಘೋಷಣೆಗಳಿಗೆ ಸೀಮಿತವಾಗದೆ, ಆಳವಾದ ಜ್ಞಾನ, ಅರಿವು ಮತ್ತು ಸಮಾಜಮುಖಿ ಕರ್ತವ್ಯಪ್ರಜ್ಞೆಯನ್ನು ಪ್ರತಿಯೊಬ್ಬರೂ ಮೈಗೂಡಿಸಿಕೊಳ್ಳಬೇಕೆಂದು ಕರೆ ನೀಡಿದರು.
ವಿದ್ಯಾರ್ಥಿಗಳು ಕೇವಲ ದುಬಾರಿ ಮೊಬೈಲ್ ಹಾಗೂ ವೇಷಭೂಷಣಗಳಿಗೆ ಮಹತ್ವ ನೀಡದೆ ಬದುಕನ್ನು ರೂಪಿಸಿಕೊಳ್ಳುವ ನೈಜ ಸಾಮಥ್ರ್ಯ ಬೆಳೆಸಿಕೊಳ್ಳಬೇಕು. ಯುವಜನರು ತಾವು ಬಳಸುವ ಬಟ್ಟೆ, ಪೆನ್ನು ಹಾಗೂ ಮೊಬೈಲ್ಗಳ ಹಿಂದೆ ಪೋಷಕರ ಬೆವರು ಮತ್ತು ತ್ಯಾಗವಿದೆ ಎಂಬುದನ್ನು ಮರೆಯಬಾರದು ಎಂದು ಎಚ್ಚರಿಸಿದರು.
ಜಗತ್ತಿನ ಇತಿಹಾಸದಲ್ಲೇ ಅಂಬೇಡ್ಕರ್ ಅವರಷ್ಟು ಅಪಾರವಾಗಿ ಅಧ್ಯಯನ ಮಾಡಿದ ಮತ್ತೊಬ್ಬ ವ್ಯಕ್ತಿಯನ್ನು ಕಾಣುವುದು ಕಷ್ಟಸಾಧ್ಯ. ಪ್ರತಿಯೊಂದು ಕ್ಷೇತ್ರದಲ್ಲೂ ಜ್ಞಾನಾರ್ಜನೆ ಮಾಡಿ, ನಿರಂತರ ಕಷ್ಟ ಮತ್ತು ನೋವುಗಳ ನಡುವೆಯೂ ಈ ದೇಶಕ್ಕೆ ದಾರಿದೀಪವಾದ ಆಧುನಿಕ ಜ್ಞಾನಿ ಅವರು. ತಮ್ಮ ಮೂಲ ಹೆಸರಿನ ಬದಲಿಗೆ ಗುರುವಿನ ಹೆಸರನ್ನೇ ಉಳಿಸಿಕೊಂಡು ಬೆಳೆಸಿದ ಅಂಬೇಡ್ಕರ್ ಅವರಂತೆ ನಾವೂ ನಮ್ಮ ಗುರುಗಳಿಗೆ ಗೌರವ ಸಲ್ಲಿಸಬೇಕು ಎಂದರು.
ವಿದ್ಯಾರ್ಥಿಗಳು ಭವಿಷ್ಯದಲ್ಲಿ ಯಾವುದೇ ವೃತ್ತಿ ಆಯ್ಕೆ ಮಾಡಿಕೊಂಡರೂ, ಮೊದಲು ಉತ್ತಮ ನಾಗರಿಕರಾಗಬೇಕು ಮತ್ತು ಸಂಸ್ಕಾರಯುತ ಕುಟುಂಬವನ್ನು ಮುನ್ನಡೆಸುವ ನಾಯಕರಾಗಬೇಕು. ಅದೇ ನಾವು ಅಂಬೇಡ್ಕರ್ ಅವರಿಗೆ ಸಲ್ಲಿಸುವ ನಿಜವಾದ ಗೌರವ ಎಂದು ತಿಳಿಸಿದರು.
ಸರಳಾದೇವಿ ಸತೀಶ್ಚಂದ್ರ ಅಗರ್ವಾಲ್ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಪ್ರೊ. ಪ್ರಹ್ಲಾದ್ ಚೌದ್ರಿ .ಜಿ ಅವರು ಅಧ್ಯಕ್ಷತೆ ವಹಿಸಿ ಮಾತನಾಡಿ, ವೈವಿಧ್ಯಮಯ ಧರ್ಮ ಮತ್ತು ಸಂಸ್ಕøತಿಗಳನ್ನು ಹೊಂದಿರುವ ಭಾರತ ದೇಶಕ್ಕೆ ಸಂವಿಧಾನವೇ ಅತ್ಯಂತ ಶ್ರೇಷ್ಠವಾದ ಗ್ರಂಥವಾಗಿದ್ದು, ದೇಶದ ಏಕತೆ ಮತ್ತು ಸಮಾನತೆಗೆ ಅಂಬೇಡ್ಕರ್ ರಚಿತ ಸಂವಿಧಾನವೇ ಮುಖ್ಯ ಆಧಾರ ಎಂದು ಹೇಳಿದರು.
ನಮ್ಮ ಸಮಾಜದಲ್ಲಿ ಹಿಂದೂ, ಮುಸ್ಲಿಂ, ಕ್ರೈಸ್ತ ಹೀಗೆ ಪ್ರಮುಖ ಧರ್ಮಗಳಿವೆ. ಹಿಂದೂ ಧರ್ಮಕ್ಕೆ ಭಗವದ್ಗೀತೆ, ಮುಸ್ಲಿಂ ಧರ್ಮಕ್ಕೆ ಕುರಾನ್ ಹಾಗೂ ಕ್ರಿಶ್ಚಿಯನ್ ಧರ್ಮಕ್ಕೆ ಬೈಬಲ್ ಪವಿತ್ರ ಗ್ರಂಥಗಳಾಗಿವೆ. ಆದರೆ, 1947ರಲ್ಲಿ ದೇಶಕ್ಕೆ ಸ್ವಾತಂತ್ರ್ಯ ಸಿಕ್ಕ ನಂತರ, ಇಡೀ ಭಾರತವನ್ನು ಒಂದೇ ಸೂರಿನಡಿ ಬೆಸೆಯಲು ಡಾ. ಬಾಬಾಸಾಹೇಬ್ ಅಂಬೇಡ್ಕರ್ ಅವರು ನಮಗೆ ‘ಸಂವಿಧಾನ' ಎಂಬ ಮಹಾಗ್ರಂಥವನ್ನು ನೀಡಿದರು. ಅದೇ ನಮ್ಮ ದೇಶದ ನಿಜವಾದ ಧರ್ಮಗ್ರಂಥ ಎಂದು ಬಣ್ಣಿಸಿದರು.
ಶ್ರೀ ಸತ್ಯಂ ಶಿಕ್ಷಣ ಮಹಾವಿದ್ಯಾಲಯದ ಸಹಾಯಕ ಪ್ರಾಧ್ಯಾಪಕ ಆಲಂಭಾಷಾ ಅವರು ವಿಶೇಷ ಉಪನ್ಯಾಸದಲ್ಲಿ ಮಾತನಾಡಿ, ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಅವರು ಸಮಾಜಕ್ಕೆ ನೀಡಿದ ಕೊಡುಗೆಗಳು ಕೇವಲ ಒಂದು ಜಾತಿಗೆ ಸೀಮಿತವಲ್ಲ, ಅವರನ್ನು ಜಾತಿಯ ಸಂಕೋಲೆಯಿಂದ ಅಳೆಯುವುದು ತಪ್ಪು ಎಂದು ಅಭಿಪ್ರಾಯಪಟ್ಟರು.
ವಿದ್ಯಾವಂತ ಸಮಾಜದಲ್ಲೂ ಅಂಬೇಡ್ಕರ್ ಅವರನ್ನು ಕೇವಲ ಜಾತಿ ಅಥವಾ ಮೀಸಲಾತಿಗೆ ಕಟ್ಟಿಹಾಕುವ ಪ್ರವೃತ್ತಿ ಬೆಳೆಯುತ್ತಿರುವುದು ವಿಷಾದನೀಯ. ದಿನವೂ ಉದಯಿಸಿ ಮುಳುಗುವ ಸೂರ್ಯನಿಗಿಂತ ಭಿನ್ನವಾಗಿ, ಅಂಬೇಡ್ಕರ್ ಅವರು ಸಮಾಜವನ್ನು ನಿರಂತರವಾಗಿ ಬೆಳಗುವ ಶಾಶ್ವತ ಸೂರ್ಯನಾಗಿದ್ದಾರೆ. ‘ಜಾತಿ' ಎಂಬ ಸಂಕುಚಿತ ಭಾವನೆಯನ್ನು ತೊರೆದು ‘ನೀತಿ'ಯ ಮಾರ್ಗದಲ್ಲಿ ಬದುಕು ರೂಪಿಸಿಕೊಳ್ಳುವುದೇ ನಾವು ಅವರಿಗೆ ಸಲ್ಲಿಸುವ ನಿಜವಾದ ಗೌರವ ಎಂದು ಕರೆ ನೀಡಿದರು.
ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಸಹಾಯಕ ನಿರ್ದೇಶಕ ಬಿ. ನಾಗರಾಜ ಅವರು ಪ್ರಾಸ್ತಾವಿಕವಾಗಿ ಮಾತನಾಡಿ, ಡಾ. ಬಿ.ಆರ್. ಅಂಬೇಡ್ಕರ್ ಅವರ ಜೀವನ, ಸಾಧನೆ ಹಾಗೂ ಆದರ್ಶಗಳನ್ನು ಯುವ ಪೀಳಿಗೆಗೆ ತಲುಪಿಸುವ ಮತ್ತು ವಿದ್ಯಾರ್ಥಿಗಳಲ್ಲಿ ಅವರ ತತ್ವಗಳನ್ನು ಅನುಸರಿಸುವ ಪ್ರೇರಣೆ ಮೂಡಿಸುವ ಉದ್ದೇಶದಿಂದ ವಿದ್ಯಾರ್ಥಿಗಳಿಗಾಗಿ ಪ್ರಬಂಧ ಸ್ಪರ್ಧೆಯನ್ನು ಆಯೋಜಿಸಲಾಗಿದೆ ಎಂದು ಹೇಳಿದರು.
ಕಾರ್ಯಕ್ರಮಕ್ಕೂ ಮುನ್ನ ಸಂವಿಧಾನವನ್ನು ಪ್ರಸ್ತಾವನೆಯನ್ನು ಬೋಧಿಸಲಾಯಿತು. ಇದೇ ವೇಳೆ ಸ್ಪರ್ಧೆಯಲ್ಲಿ ಅತ್ಯುತ್ತಮವಾಗಿ ಪ್ರಬಂಧ ರಚಿಸಿ ಸ್ಥಾನ ಪಡೆದ ವಿದ್ಯಾರ್ಥಿಗಳಿಗೆ ಪುಸ್ತಕ ಮತ್ತು ಪ್ರಮಾಣ ಪತ್ರ ನೀಡಿ ಗೌರವಿಸಲಾಯಿತು.
ಈ ಸಂದರ್ಭದಲ್ಲಿ ಬೆಂಗಳೂರಿನ ರಾಷ್ಟ್ರೀಯ ಸಂತಕವಿ ಕನಕದಾಸ ಅಧ್ಯಯನ ಮತ್ತು ಸಂಶೋಧನಾ ಕೇಂದ್ರದ ಸದಸ್ಯ ಡಾ. ದಸ್ತಗೀರಸಾಬ್ ದಿನ್ನಿ, ಸರಳಾದೇವಿ ಸತೀಶ್ಚಂದ್ರ ಅಗರ್ವಾಲ್ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ರಾಜ್ಯಶಾಸ್ತ್ರ ವಿಭಾಗದ ಪ್ರಾಧ್ಯಾಪಕರಾದ ಬಸವರಾಜ್, ದುರ್ಗಾ ಪ್ರಸಾದ್ ಸೇರಿದಂತೆ ಬೋಧಕ- ಬೋಧಕೇತರ ಸಿಬ್ಬಂದಿ ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
---------------
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್