ವಂದೇ ಮಾತರಂ ವಿವಾದ:ಬಿಜೆಪಿ ವಿರುದ್ದ ಸಚಿವ ಯತೀಂದ್ರ ಸಿದ್ದರಾಮಯ್ಯ ವಾಗ್ದಾಳಿ
ಬೆಂಗಳೂರು, 23 ಆಗಸ್ಟ್ (ಹಿ.ಸ.): ಆ್ಯಂಕರ್: ರಾಷ್ಟ್ರಗೀತೆ ''ವಂದೇ ಮಾತರಂ'' ಗೀತೆಯ ಅಳವಡಿಕೆ ಹಾಗೂ ಅದರ ಚರಣಗಳ ಕುರಿತು ಉಂಟಾಗಿರುವ ವಿವಾದ ತೀವ್ರ ಸ್ವರೂಪ ಪಡೆದುಕೊಂಡಿದೆ. ಸ್ವಾತಂತ್ರ್ಯ ಹೋರಾಟಗಾರರ ನಿರ್ಧಾರವನ್ನು ಪ್ರಶ್ನಿಸುತ್ತಿರುವ ಬಿಜೆಪಿಯ ಧೋರಣೆಯನ್ನು ಖಂಡಿಸಿರುವ ಸಚಿವ ಡಾ. ಯತೀಂದ್ರ ಸಿ
ವಂದೇ ಮಾತರಂ ವಿವಾದ:ಬಿಜೆಪಿ ವಿರುದ್ದ ಸಚಿವ ಯತೀಂದ್ರ ಸಿದ್ದರಾಮಯ್ಯ ವಾಗ್ದಾಳಿ


ಬೆಂಗಳೂರು, 23 ಆಗಸ್ಟ್ (ಹಿ.ಸ.):

ಆ್ಯಂಕರ್:

ರಾಷ್ಟ್ರಗೀತೆ 'ವಂದೇ ಮಾತರಂ' ಗೀತೆಯ ಅಳವಡಿಕೆ ಹಾಗೂ ಅದರ ಚರಣಗಳ ಕುರಿತು ಉಂಟಾಗಿರುವ ವಿವಾದ ತೀವ್ರ ಸ್ವರೂಪ ಪಡೆದುಕೊಂಡಿದೆ. ಸ್ವಾತಂತ್ರ್ಯ ಹೋರಾಟಗಾರರ ನಿರ್ಧಾರವನ್ನು ಪ್ರಶ್ನಿಸುತ್ತಿರುವ ಬಿಜೆಪಿಯ ಧೋರಣೆಯನ್ನು ಖಂಡಿಸಿರುವ ಸಚಿವ ಡಾ. ಯತೀಂದ್ರ ಸಿದ್ದರಾಮಯ್ಯ ಅವರು, ಬಿಜೆಪಿ ನಾಯಕರು ಹಾಗೂ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ.

1950ರಲ್ಲಿ ಮಹಾತ್ಮಾ ಗಾಂಧಿ, ಸುಭಾಷ್ ಚಂದ್ರ ಬೋಸ್, ಜವಾಹರಲಾಲ್ ನೆಹರೂ ಮತ್ತು ರವೀಂದ್ರನಾಥ ಠಾಗೋರ್ ಅವರ ನೇತೃತ್ವದಲ್ಲಿ 'ವಂದೇ ಮಾತರಂ' ಗೀತೆಯ ಕೇವಲ ಎರಡು ಚರಣಗಳನ್ನು ಮಾತ್ರ ರಾಷ್ಟ್ರೀಯ ಗೀತೆಯಾಗಿ ಅಳವಡಿಸಿಕೊಳ್ಳಲು ನಿರ್ಧರಿಸಲಾಗಿತ್ತು. ಇಂದಿಗೂ ಕಾಂಗ್ರೆಸ್ ಪಕ್ಷ ಅದೇ ನಿರ್ಧಾರಕ್ಕೆ ಬದ್ಧವಾಗಿದೆ.

ಮೂಲ ಗೀತೆಯಲ್ಲಿದ್ದ 6 ಚರಣಗಳನ್ನು ಕೈಬಿಟ್ಟು ಎರಡೇ ಚರಣಗಳನ್ನು ಅಂತಿಮಗೊಳಿಸಿದ್ದು ನಮ್ಮ ದೇಶದ ಶ್ರೇಷ್ಠ ಸ್ವಾತಂತ್ರ್ಯ ಹೋರಾಟಗಾರರು. ಈ ಹಿನ್ನೆಲೆಯಲ್ಲಿ, ರವೀಂದ್ರನಾಥ ಠಾಗೋರ್, ಸುಭಾಷ್ ಚಂದ್ರ ಬೋಸ್ ಅಥವಾ ಸರ್ದಾರ್ ವಲ್ಲಭಭಾಯಿ ಪಟೇಲರಿಗಿಂತ ಬಿಜೆಪಿ ನಾಯಕರು ದೊಡ್ಡವರಾ ಎಂದು ಯತೀಂದ್ರ ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ.

ಗೀತೆಯಲ್ಲಿ 6 ಪ್ಯಾರಾಗಳನ್ನು ಸೇರಿಸಬೇಕು ಎಂದು ವಿವಾದ ಸೃಷ್ಟಿಸುವ ಮೂಲಕ ಬಿಜೆಪಿ ದೇಶದ ನಿಜವಾದ ಮತ್ತು ಪ್ರಮುಖ ಸಮಸ್ಯೆಗಳಿಂದ ಜನರ ಗಮನವನ್ನು ಬೇರೆಡೆಗೆ ಡೈವರ್ಟ್ ಮಾಡಲು ಯತ್ನಿಸುತ್ತಿದೆ ಎಂದು ಅವರು ಆರೋಪಿಸಿದ್ದಾರೆ.

ವಂದೇ ಮಾತರಂ ಹೆಸರಿನಲ್ಲಿ ಬಿಜೆಪಿ ದೇಶದ ಜನರನ್ನು ಧರ್ಮದ ಆಧಾರದ ಮೇಲೆ ವಿಭಜಿಸಲು ಸಂಚು ರೂಪಿಸುತ್ತಿದೆ. ಆದರೆ ಕಾಂಗ್ರೆಸ್ ಎಂದೆಂದಿಗೂ ದೇಶವನ್ನು ಒಗ್ಗೂಡಿಸುವ ದೇಶಭಕ್ತಿಯ ಪರವಾಗಿ ನಿಲ್ಲುತ್ತದೆ ಎಂದು ಸ್ಪಷ್ಟಪಡಿಸಿದ್ದಾರೆ.

ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ವಂದೇ ಮಾತರಂ ಗೀತೆ ಹಾಡುವ ವೇಳೆ ಕಾಂಗ್ರೆಸ್ ವರಿಷ್ಠರಾದ ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿ ಅವರು ಅಡ್ಡಿಪಡಿಸಿದ್ದಾರೆ ಎಂದು ಆರೋಪಿಸಿ ಬಿಜೆಪಿ ನಾಯಕರು ಹಾಗೂ ಬಿ.ವೈ. ವಿಜಯೇಂದ್ರ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದರು. ಅಲ್ಲದೆ, ಕೇಂದ್ರ ಸಚಿವ ಅಮಿತ್ ಶಾ ಅವರು ಈ ಕುರಿತು ಕಾಂಗ್ರೆಸ್ ಕ್ಷಮೆಯಾಚಿಸಬೇಕು ಎಂದು ಆಗ್ರಹಿಸಿದ್ದರು.

ಇದಕ್ಕೆ ಕಲ್ಬುರ್ಗಿಯಲ್ಲಿ ತಿರುಗೇಟು ನೀಡಿರುವ ಡಾ. ಯತೀಂದ್ರ ಸಿದ್ದರಾಮಯ್ಯ, ಸೋನಿಯಾ ಗಾಂಧಿ ಆಗಲಿ ಅಥವಾ ಕಾಂಗ್ರೆಸ್ ಪಕ್ಷವಾಗಲಿ ವಂದೇ ಮಾತರಂ ಗೀತೆಗೆ ಯಾವುದೇ ಅಪಮಾನ ಮಾಡಿಲ್ಲ ಎಂದಿದ್ದಾರೆ. ಮೊಟ್ಟಮೊದಲ ಬಾರಿಗೆ ವಂದೇ ಮಾತರಂ ಗೀತೆಯನ್ನು ತನ್ನ ಅಧಿಕೃತ ಸಭೆಗಳಲ್ಲಿ ಅಳವಡಿಸಿಕೊಂಡಿದ್ದು ಮತ್ತು ಅದನ್ನು ರಾಷ್ಟ್ರಮಟ್ಟದಲ್ಲಿ ಜನಪ್ರಿಯಗೊಳಿಸಿದ್ದು ಕಾಂಗ್ರೆಸ್ ಪಕ್ಷವೇ ಹೊರತು ಬಿಜೆಪಿಯಲ್ಲ ಎಂದು ನೆನಪಿಸಿದ್ದಾರೆ. ದೇಶಭಕ್ತಿಯ ಹೆಸರಿನಲ್ಲಿ ರಾಜಕೀಯ ಮಾಡುತ್ತಿರುವ ಬಿಜೆಪಿಯಿಂದ ಕಾಂಗ್ರೆಸ್ಗೆ ಯಾವುದೇ 'ದೇಶಭಕ್ತಿಯ ಸರ್ಟಿಫಿಕೇಟ್' ಪಡೆದುಕೊಳ್ಳುವ ಅಗತ್ಯವಿಲ್ಲ ಎಂದು ಅವರು ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದಾರೆ.

---------------

ಹಿಂದೂಸ್ತಾನ್ ಸಮಾಚಾರ್ / BHARGAVI G R


 rajesh pande