
ಬೆಂಗಳೂರು, 23 ಆಗಸ್ಟ್ (ಹಿ.ಸ.):
ಆ್ಯಂಕರ್:ಮಾರುಕಟ್ಟೆಯಲ್ಲಿ ಸಕ್ಕರೆ ಬೆಲೆ ಏರಿಕೆಯಾಗುತ್ತಿರುವ ಸಂದರ್ಭದಲ್ಲಿ ಸಕ್ಕರೆ ಕಾರ್ಖಾನೆಗಳು ಎಥನಾಲ್ ಉತ್ಪಾದನೆಯಿಂದ ಲಾಭ ಪಡೆಯುತ್ತಿದ್ದು, ಕಬ್ಬು ಬೆಳೆಗಾರರಿಗೆ ಮಾತ್ರ ನ್ಯಾಯಯುತ ಬೆಲೆ ದೊರೆಯುತ್ತಿಲ್ಲ ಎಂದು ರಾಜ್ಯ ಕಬ್ಬು ಬೆಳೆಗಾರರ ಸಂಘದ ರಾಜ್ಯಾಧ್ಯಕ್ಷ ಕುರುಬೂರು ಶಾಂತಕುಮಾರ್ ಆರೋಪಿಸಿದ್ದಾರೆ.
ಈ ಕುರಿತು ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವ ಅವರು,
ಕಬ್ಬು ಬೆಳೆಗಾರರ ಹಿತರಕ್ಷಣೆಗಾಗಿ ಸರ್ಕಾರ ತಕ್ಷಣ ಕ್ರಮ ಕೈಗೊಳ್ಳಬೇಕು. ಬರಗಾಲ ಮತ್ತು ಮಳೆ ಕೊರತೆಯಿಂದ ಕರ್ನಾಟಕ ಸೇರಿದಂತೆ ಉತ್ತರ ಪ್ರದೇಶ ಹಾಗೂ ಮಹಾರಾಷ್ಟ್ರದಲ್ಲಿ ಕಬ್ಬಿನ ಇಳುವರಿ ಕುಸಿದಿದ್ದು, ಉತ್ಪಾದನಾ ವೆಚ್ಚವೂ ಹೆಚ್ಚಾಗಿದೆ. ಹೀಗಾಗಿ ರೈತರಿಗೆ ವೈಜ್ಞಾನಿಕವಾಗಿ ಎಫ್‌ಆರ್‌ಪಿ ದರ ಹೆಚ್ಚಿಸಬೇಕು ಎಂದು ಅವರು ಆಗ್ರಹಿಸಿದ್ದಾರೆ.
ದೊಡ್ಡ ಸಕ್ಕರೆ ಕಾರ್ಖಾನೆಗಳಿಗೆ ಮಾತ್ರ ಎಥನಾಲ್ ಉತ್ಪಾದನೆಯ ಲಾಭ ಸೀಮಿತವಾಗಬಾರದು. ರೈತರು ತಮ್ಮ ಸ್ಥಳೀಯ ಆಲೆಮನೆಗಳಲ್ಲಿಯೇ ಸರಳ ನಿಯಮಗಳಡಿ ಎಥನಾಲ್ ಉತ್ಪಾದಿಸಲು ಅವಕಾಶ ನೀಡಬೇಕು. ಅದನ್ನು ಅಡುಗೆ ಇಂಧನವಾಗಿ ಹಾಗೂ ರೈತರ ವಾಹನ, ಟ್ರ್ಯಾಕ್ಟರ್‌ಗಳಿಗೆ ಬಳಸಿಕೊಳ್ಳಲು ಅವಕಾಶ ಕಲ್ಪಿಸುವುದರ ಜೊತೆಗೆ ಹೆಚ್ಚುವರಿ ಎಥನಾಲ್ ಅನ್ನು ಸರ್ಕಾರ ನಿಗದಿತ ಬೆಲೆಗೆ ಖರೀದಿಸಬೇಕು ಎಂದು ಒತ್ತಾಯಿಸಿದ್ದಾರೆ.
ಬ್ರೆಜಿಲ್ ಮಾದರಿಯಲ್ಲಿ ಕಬ್ಬಿನ ಲಭ್ಯತೆಗೆ ಅನುಗುಣವಾಗಿ ಸಕ್ಕರೆ ಮತ್ತು ಎಥನಾಲ್ ಉತ್ಪಾದನೆಯ ನಡುವೆ ವೈಜ್ಞಾನಿಕ ಸಮತೋಲನ ಸಾಧಿಸಬೇಕು. ಕಬ್ಬಿನ ಉತ್ಪಾದನೆ ಹೆಚ್ಚಿರುವಾಗ ಎಥನಾಲ್‌ಗೆ ಹೆಚ್ಚಿನ ಆದ್ಯತೆ ನೀಡಿ ಸಕ್ಕರೆ ಬೆಲೆ ಕುಸಿತ ತಪ್ಪಿಸಬೇಕು. ಬರಗಾಲದಲ್ಲಿ ಎಥನಾಲ್ ಉತ್ಪಾದನೆ ನಿಯಂತ್ರಿಸಿ ದೇಶೀಯ ಅಗತ್ಯಕ್ಕೆ ತಕ್ಕಷ್ಟು ಸಕ್ಕರೆ ಉತ್ಪಾದನೆಗೆ ಒತ್ತು ನೀಡಬೇಕು ಎಂದು ಶಾಂತಕುಮಾರ್ ಸಲಹೆ ನೀಡಿದ್ದಾರೆ.
ಕಾರ್ಖಾನೆಗಳ ಉಪ ಉತ್ಪನ್ನಗಳಿಂದ ದೊರೆಯುವ ಲಾಭದಲ್ಲಿ ರೈತರಿಗೆ ಸೂಕ್ತ ಪಾಲು ನೀಡುವುದು ಹಾಗೂ ಸ್ಥಳೀಯ ಮಟ್ಟದಲ್ಲಿ ಸ್ವತಂತ್ರ ಎಥನಾಲ್ ಉತ್ಪಾದನೆಗೆ ಬಳಕೆ ಹಕ್ಕು ಕಲ್ಪಿಸುವುದು ಸರ್ಕಾರದ ತಕ್ಷಣದ ಆದ್ಯತೆಯಾಗಬೇಕು ಎಂದು ಅವರು ತಿಳಿಸಿದ್ದಾರೆ.
---------------
ಹಿಂದೂಸ್ತಾನ್ ಸಮಾಚಾರ್ / Rakesh.M.B.