ನಮ್ಮ ಮೆಟ್ರೋ ಪಿಂಕ್ ಲೈನ್: ಸೆಪ್ಟೆಂಬರ್ ನಲ್ಲಿ ಎಲಿವೇಟೆಡ್ ಮಾರ್ಗ ಉದ್ಘಾಟನೆಗೆ ಸಿದ್ಧ:ಸಚಿವ ಕೃಷ್ಣ ಬೈರೇಗೌಡ
ನಮ್ಮ ಮೆಟ್ರೋ ಪಿಂಕ್ ಲೈನ್
ನಮ್ಮ ಮೆಟ್ರೋ ಪಿಂಕ್ ಲೈನ್: ಸೆಪ್ಟೆಂಬರ್ ನಲ್ಲಿ ಎಲಿವೇಟೆಡ್ ಮಾರ್ಗ ಉದ್ಘಾಟನೆಗೆ ಸಿದ್ಧ:ಸಚಿವ ಕೃಷ್ಣ ಬೈರೇಗೌಡ


ಬೆಂಗಳೂರು, 23 ಆಗಸ್ಟ್ (ಹಿ.ಸ.):

ಆ್ಯಂಕರ್:

ಬಹುನಿರೀಕ್ಷಿತ ನಮ್ಮ ಮೆಟ್ರೋ ಪಿಂಕ್ ಲೈನ್ ಮಾರ್ಗದ ಕಾಮಗಾರಿಗಳು ಭರದಿಂದ ಸಾಗಿದ್ದು, 2027ರ ಮಾರ್ಚ್ ವೇಳೆಗೆ ಇಡೀ ಮಾರ್ಗವು ಜನರ ಸೇವೆಗೆ ಸಂಪೂರ್ಣವಾಗಿ ಲಭ್ಯವಾಗಲಿದೆ. ಎಂಜಿ ರಸ್ತೆಯಿಂದ ಶಿವಾಜಿನಗರದವರೆಗೆ ನಡೆಯುತ್ತಿರುವ ಸುರಂಗ ಮಾರ್ಗದ ಕಾಮಗಾರಿಯನ್ನು ಬೆಂಗಳೂರು ಅಭಿವೃದ್ಧಿ ಸಚಿವ ಕೃಷ್ಣ ಬೈರೇಗೌಡ, ಸಚಿವ ರಿಜ್ವಾನ್ ಅರ್ಷದ್ ಹಾಗೂ ಸಂಸದ ಪಿ.ಸಿ.ಮೋಹನ್ ಅವರು ಸ್ಥಳದಲ್ಲೇ ಪರಿಶೀಲಿಸಿ, ಅಧಿಕಾರಿಗಳಿಂದ ಮಾಹಿತಿ ಪಡೆದುಕೊಂಡರು.

ಎಂಜಿ ರೋಡ್ ನಿಂದ ಶಿವಾಜಿನಗರ ಮೆಟ್ರೋ ನಿಲ್ದಾಣದವರೆಗೆ ನಡೆದುಕೊಂಡು ಸಾಗಿದ ಸಚಿವರು ಕಾಮಗಾರಿಯ ಪ್ರಗತಿಯನ್ನು ವೀಕ್ಷಿಸಿದರು. ಬಳಿಕ ಮಾತನಾಡಿದ ಸಚಿವ ಕೃಷ್ಣ ಬೈರೇಗೌಡ ಅವರು, ಒಟ್ಟು 21 ಕಿಲೋ ಮೀಟರ್ ಉದ್ದದ ಪಿಂಕ್ ಲೈನ್ ಮಾರ್ಗದಲ್ಲಿ ಎಲಿವೇಟೆಡ್ ಮತ್ತು ಅಂಡರ್ ಗ್ರೌಂಡ್ ಎಂಬ ಎರಡು ವಿಭಾಗಗಳಿವೆ ಎಂದು ತಿಳಿಸಿದರು.

ತಾವರೆಕೆರೆಯಿಂದ ಕಾಲೇನ ಅಗ್ರಹಾರ ವರೆಗಿನ 7.5 ಕಿಲೋ ಮೀಟರ್ ಉದ್ದದ ಎಲಿವೇಟೆಡ್ ಮಾರ್ಗದ ಕೆಲಸ ಸಂಪೂರ್ಣವಾಗಿ ಮುಗಿದಿದೆ. ರೈಲ್ವೆ ಇಲಾಖೆಯಿಂದ ಅಂತಿಮ ಸುರಕ್ಷತಾ ಪ್ರಮಾಣಪತ್ರ ಇನ್ನೊಂದು ವಾರ ಅಥವಾ ಹತ್ತು ದಿನಗಳಲ್ಲಿ ಬರುವ ನಿರೀಕ್ಷೆಯಿದೆ. ಇದು ದೊರೆತ ಕೂಡಲೇ, ಮುಂಬರುವ ಆಗಸ್ಟ್ ಅಥವಾ ಸೆಪ್ಟೆಂಬರ್ ತಿಂಗಳಲ್ಲಿ ಎಲಿವೇಟೆಡ್ ಮಾರ್ಗವನ್ನು ಉದ್ಘಾಟಿಸುವ ಹಂತ ತಲುಪಲಿದೆ ಎಂದು ತಿಳಿಸಿದರು.

ಭೂಗತ (ಅಂಡರ್ ಗ್ರೌಂಡ್) ವಿಭಾಗದಲ್ಲಿ ಇನ್ನೂ ಕೆಲವು ಕಾಮಗಾರಿಗಳು ಬಾಕಿ ಇದ್ದು, ಮುಂದಿನ ವರ್ಷ ಮಾರ್ಚ್ ವೇಳೆಗೆ ಇಡೀ ಮಾರ್ಗವನ್ನು ಪೂರ್ಣಗೊಳಿಸಲು ಡೆಡ್ಲೈನ್ ನೀಡಲಾಗಿದೆ. ಜಯದೇವ ಬಳಿ ಎಂಜಿನ್ ಇಳಿಸಿ ಟ್ರಯಲ್ ರನ್ ಆರಂಭಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ.

ಭೂಗತ ವಿಭಾಗದ ಕಾಮಗಾರಿ ಇನ್ನೂ ಮುಗಿದಿಲ್ಲ ಎಂಬ ಕಾರಣಕ್ಕೆ ಸಿದ್ಧವಾಗಿರುವ ಎಲಿವೇಟೆಡ್ ಮಾರ್ಗದ ಉದ್ಘಾಟನೆಯನ್ನು ತಡೆಯಲು ಸಾಧ್ಯವಿಲ್ಲ. ಬನ್ನೇರುಘಟ್ಟ ರಸ್ತೆಯಿಂದ ಜಯದೇವ, ಎಂಜಿ ರಸ್ತೆ ಮೂಲಕ ನಾಗವಾರಕ್ಕೆ ಸಂಪರ್ಕ ಕಲ್ಪಿಸುವ ಈ ಪಿಂಕ್ ಲೈನ್, ಬೆಂಗಳೂರಿನ ಹೃದಯ ಭಾಗದ ಮೂಲಕಾಯುವುದಲ್ಲದೆ, ಮುಂದುವರಿದು ವಿಮಾನ ನಿಲ್ದಾಣ (ಏರ್ಪೋರ್ಟ್) ಮಾರ್ಗಕ್ಕೂ ಸಂಪರ್ಕವಾಗಲಿದೆ ಎಂದು ಸಚಿವರು ಹೇಳಿದರು.

---------------

ಹಿಂದೂಸ್ತಾನ್ ಸಮಾಚಾರ್ / BHARGAVI G R


 rajesh pande