
ಕೋಲಾರ, ೨೩ ಆಗಸ್ಟ್ (ಹಿ.ಸ.):
ಆ್ಯಂಕರ್ : ವಿಧಾನಸಭಾ ಕ್ಷೇತ್ರದ ಹಳ್ಳಿಗಳಲ್ಲಿ ಜೆಡಿಎಸ್ ಪಕ್ಷವನ್ನು ಬಲಪಡಿಸುವುದೇ ನಮ್ಮ ಪ್ರಮುಖ ಗುರಿಯಾಗಿದ್ದು, ಪಕ್ಷದ ಹೈಕಮಾಂಡ್ ಯಾರಿಗೆ ಬಿ ಪಾರಂ ನೀಡಿ ಟಿಕೆಟ್ ನೀಡುತ್ತದೆಯೋ ಅವರ ಪರವಾಗಿ ಕಾರ್ಯಕರ್ತರು ಒಗ್ಗಟ್ಟಿನಿಂದ ಕೆಲಸ ಮಾಡಿ ಗೆಲ್ಲಿಸಬೇಕು. ಮುಂದಿನ ದಿನಗಳಲ್ಲಿ ಎಚ್.ಡಿ. ಕುಮಾರಸ್ವಾಮಿ ಅವರನ್ನು ಮುಖ್ಯಮಂತ್ರಿಯನ್ನಾಗಿ ಮಾಡಬೇಕು ಎಂದು ಕೋಮುಲ್ ನಿರ್ದೇಶಕ ಚೆಲುವನಹಳ್ಳಿ ನಾಗರಾಜ್ ತಿಳಿಸಿದರು
ತಾಲೂಕಿನ ನರಸಾಪುರ ಕೈಗಾರಿಕಾ ಪ್ರದೇಶದಲ್ಲಿ ಭಾನುವಾರ ಜೆಡಿಎಸ್ ವತಿಯಿಂದ ಆಯೋಜಿಸಿದ್ದ ಹೋಬಳಿ ಮಟ್ಟದ ಕಾರ್ಯಕರ್ತರ ಸಮಾವೇಶದಲ್ಲಿ ಮಾತನಾಡಿದ ಅವರು, ಕಾರ್ಯಕರ್ತರೇ ಪಕ್ಷದ ಆಸ್ತಿ. ಪಕ್ಷದ ಸೂಚನೆಯಂತೆ ಪ್ರತಿಯೊಂದು ಹಳ್ಳಿಗೂ ತೆರಳಿ ಮತದಾರರು ಹಾಗೂ ಕಾರ್ಯಕರ್ತರನ್ನು ಭೇಟಿ ಮಾಡಿ ಸಂಘಟನೆ ಬಲಪಡಿಸಬೇಕು. ಕೋಲಾರದಲ್ಲಿ ಜೆಡಿಎಸ್ ಶಾಸಕರನ್ನು ಆಯ್ಕೆ ಮಾಡುವ ನಿಟ್ಟಿನಲ್ಲಿ ಎಲ್ಲರೂ ಶ್ರಮಿಸಬೇಕು ಎಂದು ತಿಳಿಸಿದರು
ರಾಜ್ಯದಲ್ಲಿ ಹೆಚ್.ಡಿ ಕುಮಾರಸ್ವಾಮಿ ಅವರು ಎರಡು ಬಾರಿ ಮುಖ್ಯಮಂತ್ರಿಯಾಗಿದ್ದರೂ ಪೂರ್ಣ ಬಹುಮತದ ಸರ್ಕಾರ ನಡೆಸಲು ಸಾಧ್ಯವಾಗಿಲ್ಲ. ಈ ಬಾರಿ ಅವರಿಗೆ ಪೂರ್ಣ ಬಹುಮತದ ಐದು ವರ್ಷಗಳ ಕಾಲ ಅವಕಾಶ ನೀಡಿದರೆ ದೇಶಕ್ಕೆ ಮಾದರಿಯಾಗುವ ರೀತಿಯಲ್ಲಿ ರಾಜ್ಯವನ್ನು ಅಭಿವೃದ್ಧಿಪಡಿಸಲಿದ್ದಾರೆ. ಅವರು ಕೊಟ್ಟ ಮಾತಿನಂತೆ ನಡೆದುಕೊಳ್ಳುವ ನಾಯಕರು. ಆದ್ದರಿಂದ ಜೆಡಿಎಸ್ಗೆ ಒಂದು ಅವಕಾಶ ನೀಡಬೇಕು ಎಂದರು.
ಎಪಿಎಂಸಿ ಮಾಜಿ ಅಧ್ಯಕ್ಷೆ ಕುರ್ಕಿ ರಾಜೇಶ್ವರಿ ಮಾತನಾಡಿ, ಅಧಿಕಾರ ಇದ್ದರೂ ಇಲ್ಲದಿದ್ದರೂ ಜೆಡಿಎಸ್ ಕಾರ್ಯಕರ್ತರು ಪಕ್ಷವನ್ನು ತೊರೆಯುವುದಿಲ್ಲ. ರೈತರ ಸಮಸ್ಯೆ ಸೇರಿದಂತೆ ನೀರಾವರಿಯ ಹಲವು ವಿಚಾರಗಳಲ್ಲಿ ದೇವೇಗೌಡರ ಕುಟುಂಬ ನಿರಂತರವಾಗಿ ಹೋರಾಟ ನಡೆಸಿದೆ. ಜೆಡಿಎಸ್ ಜಾತ್ಯತೀತ ಪಕ್ಷವಾಗಿದ್ದು, ಪಕ್ಷದ ಮೂಲಕ ಅನೇಕ ನಾಯಕರು ಬೆಳೆದು ವಿವಿಧ ಉನ್ನತ ಸ್ಥಾನಗಳನ್ನು ಅಲಂಕರಿಸಿದ್ದಾರೆ ಮುಂದಿನ ಗ್ರಾಮ, ತಾಲೂಕು ಹಾಗೂ ಜಿಲ್ಲಾ ಪಂಚಾಯಿತಿ ಚುನಾವಣೆಗಳನ್ನು ಗಮನದಲ್ಲಿಟ್ಟುಕೊಂಡು ಪಕ್ಷವನ್ನು ತಳಮಟ್ಟದಿಂದಲೇ ಬಲಪಡಿಸಬೇಕು. ಕಾರ್ಯಕರ್ತರ ಕಷ್ಟಗಳಿಗೆ ಸ್ಪಂದಿಸುವ ಹಾಗೂ ಅವರ ಪರವಾಗಿ ಧ್ವನಿ ಎತ್ತುವ ಸ್ಥಳೀಯ ನಾಯಕತ್ವದ ಅಗತ್ಯವಿದೆ. ಕ್ಷೇತ್ರದ ಬಗ್ಗೆ ಉತ್ತಮ ಪರಿಚಯ ಹೊಂದಿರುವ ಸ್ಥಳೀಯರಿಗೆ ಆದ್ಯತೆ ದೊರೆಯಬೇಕು ಎಂದು ಹೇಳಿದರು.
ವಕ್ಕಲೇರಿ ಸೊಸೈಟಿ ಅಧ್ಯಕ್ಷ ಪಾಲಾಕ್ಷಗೌಡ ಮಾತನಾಡಿ, ಜೆಡಿಎಸ್ ಯಾವುದೇ ಒಂದು ಜಾತಿಗೆ ಸೀಮಿತವಾದ ಪಕ್ಷವಲ್ಲ. ರೈತರ ಪರವಾಗಿ ಹಲವು ಮಹತ್ವದ ನಿರ್ಧಾರಗಳನ್ನು ಕೈಗೊಂಡಿದೆ ಸಾಲಮನ್ನಾ ಒಂದೇ ಜಾತಿಗೆ ಮಾಡಿಲ್ಲ ಎಲ್ಲರಿಗೂ ಮಾಡಿದ್ದಾರೆ ವಿರೋಧಿಗಳು ಪಕ್ಷದ ಬಗ್ಗೆ ಅಪಪ್ರಚಾರ ಮಾಡಿದ್ದಾರೆ ಕಾಂಗ್ರೆಸ್ ಯಾಕೆ ಸಾಲಮನ್ನಾ ಮಾಡಿಲ್ಲ ಕೋಲಾರ-ಚಿಕ್ಕಬಳ್ಳಾಪುರ ಜಿಲ್ಲೆಗಳು ಬರಪೀಡಿತವಾಗಿದ್ದರೂ ರೈತರ ಸಮಸ್ಯೆಗಳಿಗೆ ಸೂಕ್ತ ಸ್ಪಂದನೆ ಯಾಕೆ ದೊರೆಯಲಿಲ್ಲ ಎಂದು ವಿರೋಧಿಗಳನ್ನು ಟೀಕಿಸಿದರು.
ಜೆಡಿಎಸ್ ಯುವ ಮುಖಂಡ ಖಾಜಿಕಲ್ಲಹಳ್ಳಿ ಹರೀಶ್ ಮಾತನಾಡಿ, ಬಿಡದಿ ಟೌನ್ಶಿಪ್ಗಾಗಿ ಭೂಮಿ ನೀಡುವ ರೈತರಿಗೆ ಎಕರೆಗೆ ೧.೫೦ ಕೋಟಿ ನೀಡಲು ನಿರ್ಧರಿಸಲಾಗಿತ್ತು. ನಿಖಿಲ್ ಕುಮಾರಸ್ವಾಮಿ ನೇತೃತ್ವದ ಜೆಡಿಎಸ್ ಹೋರಾಟದ ಫಲವಾಗಿ ಪರಿಹಾರ ಮೊತ್ತವನ್ನು ೩ ಕೋಟಿಗೆ ಹೆಚ್ಚಿಸಲು ಸಾಧ್ಯವಾಗಿದೆ. ವೇಮಗಲ್, ನರಸಾಪುರ, ಮಾಲೂರು ಭಾಗಗಳಲ್ಲಿಯೂ ಕೈಗಾರಿಕೆಗಳಿಗೆ ಭೂಮಿ ನೀಡಿದ ರೈತರಿಗೆ ಹೆಚ್ಚಿನ ಪರಿಹಾರ ದೊರೆಯುವಂತೆ ಮಾಡಲು ಸ್ಥಳೀಯ ನಾಯಕತ್ವ ವಿಫಲವಾಯಿತು ಮುಂದೆ ರೈತರ ಧ್ವನಿಯಾಗುವ ಅಗತ್ಯವಿದೆ ಎಂದರು.
ಸಮಾವೇಶದಲ್ಲಿ ಡಿಎಂಆರ್ ಫೌಂಡೇಶನ್ ಅಧ್ಯಕ್ಷ ಹಾಗೂ ವಕೀಲ ಮುನಿರಾಜು, ಜೆಡಿಎಸ್ ಮುಖಂಡರಾದ ರಾಮಸಂದ್ರ ತಿರುಮಲೇಶ್, ವಕ್ಕಲೇರಿ ಆನಂದ್, ಮೈಲಾಂಡಹಳ್ಳಿ ರಮೇಶ್, ಅಶ್ವಥ್ ರಾಮ್, ಯಳಚಿಪುರ ಮಂಜುನಾಥ್, ನರಸಾಪುರ ಕೃಷ್ಣಪ್ಪ, ಕುಮಾರ್, ಚಿನ್ನಯ್ಯ, ಸುದರ್ಶನ್, ಸುರೇಶ್, ರಾಜಣ್ಣ, ಗೋಪಾಲ್, ಶಂಕರಪ್ಪ, ವಸಂತ್, ದೇವರಾಜ್, ಮಂಜುನಾಥ್, ಲೋಕೇಶ್, ಚೌಡಪ್ಪ ಉಪಸ್ಥಿತರಿದ್ದರು.
ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್