
ಬೆಂಗಳೂರು, 23 ಆಗಸ್ಟ್ (ಹಿ.ಸ.):
ಆ್ಯಂಕರ್:ಮಾನವೀಯತೆಯಿಂದ ಬದುಕುವುದರ ಜೊತೆಗೆ ಸಮಾನತೆ ಮತ್ತು ಭ್ರಾತೃತ್ವವನ್ನು ಜೀವನದ ಭಾಗವಾಗಿಸಿಕೊಳ್ಳಬೇಕು ಎಂದು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಕರೆ ನೀಡಿದರು.
ಬೆಂಗಳೂರಿನ ಎಂ.ಜಿ. ರೈಲ್ವೆ ಕಾಲೋನಿಯ ಅಮಲೋದ್ಭವ ಮಾತೆಯ ದೇವಾಲಯದ 125ನೇ ವಾರ್ಷಿಕೋತ್ಸವ ಸಮಾರಂಭದಲ್ಲಿ ಮಾತನಾಡಿದ ಅವರು, ವಿವಿಧ ಧರ್ಮಗಳ ಆಚರಣೆಗಳು ಜನರ ಶಾಂತಿ, ನೆಮ್ಮದಿ, ಸಮಾಜ ಸೇವೆ ಹಾಗೂ ಆತ್ಮಶುದ್ಧಿಗಾಗಿ ನಡೆಯುತ್ತವೆ ಎಂದರು.
“ಧರ್ಮಗಳು ಹಲವಾದರೂ ತತ್ವ ಒಂದೇ, ನಾಮ ನೂರಾದರೂ ದೈವ ಒಂದೇ. ದೇವನೊಬ್ಬ, ನಾಮ ಹಲವು ಎಂಬ ನಂಬಿಕೆ ನನ್ನದು. ಯಾವುದೇ ಧರ್ಮವೂ ಹಿಂಸೆಯನ್ನು ಬೋಧಿಸುವುದಿಲ್ಲ. ಮಾನವೀಯತೆಯೇ ಪರಮ ಧರ್ಮ” ಎಂದು ಹೇಳಿದರು.
ಮರಕ್ಕೆ ಬೇರುಗಳು ಎಷ್ಟು ಮುಖ್ಯವೋ, ಮನುಷ್ಯನಿಗೆ ನಂಬಿಕೆಯೂ ಅಷ್ಟೇ ಮುಖ್ಯ. ಪ್ರತಿಯೊಬ್ಬರೂ ತಮ್ಮ ನಂಬಿಕೆ ಮತ್ತು ತತ್ವಗಳನ್ನು ಗೌರವಿಸುವುದರ ಜೊತೆಗೆ ಪರಸ್ಪರ ಪ್ರೀತಿ, ವಿಶ್ವಾಸದಿಂದ ಬದುಕಬೇಕು ಎಂದರು.
ತಾವು ಕ್ರೈಸ್ತ ಧರ್ಮದ ಶಾಲೆಗಳಲ್ಲಿ ವ್ಯಾಸಂಗ ಮಾಡಿದ್ದರೂ ಧರ್ಮ ಬದಲಿಸಿಕೊಳ್ಳುವಂತೆ ಯಾರೂ ಒತ್ತಾಯಿಸಿರಲಿಲ್ಲ. ನಮ್ಮ ಕಲೆ ಮತ್ತು ಸಂಸ್ಕೃತಿಗೆ ಯಾವುದೇ ಜಾತಿಯಿಲ್ಲ. ದೇವರು ಪ್ರತಿಯೊಬ್ಬರ ಹೃದಯದಲ್ಲಿಯೂ ನೆಲೆಸಿದ್ದಾನೆ ಎಂದು ತಿಳಿಸಿದರು.
ಸುಮನಹಳ್ಳಿ ಕುಷ್ಟರೋಗ ಪುನರ್ವಸತಿ ಕೇಂದ್ರಕ್ಕೆ 50 ಎಕರೆ ಜಾಗದ ಗುತ್ತಿಗೆ ನವೀಕರಣಕ್ಕೆ ಸರ್ಕಾರ ಮಾನವೀಯ ದೃಷ್ಟಿಯಿಂದ ನಿರ್ಧಾರ ಕೈಗೊಂಡಿದೆ. ಕುಷ್ಟರೋಗಿಗಳ ಚಿಕಿತ್ಸೆಗೆ ನೆರವಾಗುವ ಮೂಲಕ ಸಂಸ್ಥೆ ಮಾನವೀಯ ಸೇವೆ ಸಲ್ಲಿಸಿರುವುದನ್ನು ಪರಿಗಣಿಸಲಾಗಿದೆ ಎಂದರು.
ಕುವೆಂಪು ಅವರ ‘ಸರ್ವಜನಾಂಗದ ಶಾಂತಿಯ ತೋಟ’ದ ಆಶಯವನ್ನು ಸಾಕಾರಗೊಳಿಸಬೇಕು. ಅಮಲೋದ್ಭವ ಮಾತೆಯ ದೇವಾಲಯ 125 ವರ್ಷಗಳಿಂದ ಸೇವೆ ಸಲ್ಲಿಸುತ್ತಿದ್ದು, ಸಂಸ್ಥೆಯ ಅಭಿವೃದ್ಧಿಗೆ ಸರ್ಕಾರದಿಂದ ಹೆಚ್ಚಿನ ಸಹಕಾರ ನೀಡುವ ಕುರಿತು ಶೀಘ್ರ ಸೂಕ್ತ ನಿರ್ಧಾರ ಕೈಗೊಳ್ಳಲಾಗುವುದು. ಗಾಂಧಿನಗರ ಕ್ಷೇತ್ರದ ಅಭಿವೃದ್ಧಿಗೆ ಸರ್ಕಾರ ಬದ್ಧವಾಗಿದೆ ಎಂದು ಹೇಳಿದರು.
ಸಮಾರಂಭದಲ್ಲಿ ಬೆಂಗಳೂರು ಆರ್ಚ್‌ಬಿಷಪ್ ಪೀಟರ್ ಮಚಾಡೋ, ಶಾಸಕ ದಿನೇಶ್ ಗುಂಡೂರಾವ್, ಫಾದರ್ ಅಮಲ್ ರಾಜ್ ಕ್ರಿಸ್ಟಿನ್, ಜಾಕಬ್ ಯಕ್ಕಾಲಂ, ಆರೋಗ್ಯಸ್ವಾಮಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.
---------------
ಹಿಂದೂಸ್ತಾನ್ ಸಮಾಚಾರ್ / Rakesh.M.B.