
ಹುಬ್ಬಳ್ಳಿ, 23 ಆಗಸ್ಟ್ (ಹಿ.ಸ.):
ಆ್ಯಂಕರ್:ಯುವಕರನ್ನು ಸಬಲೀಕರಣಗೊಳಿಸಿ, ಸಾಮಾಜಿಕ ಸಾಮರಸ್ಯ, ಕ್ರೀಡೆ, ಫಿಟ್ನೆಸ್, ಕೌಶಲ್ಯಾಭಿವೃದ್ಧಿ ಹಾಗೂ ಸಮುದಾಯ ಅಭಿವೃದ್ಧಿಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳುವ ಉದ್ದೇಶದಿಂದ ನವಲಗುಂದ ವಿಧಾನಸಭಾ ಕ್ಷೇತ್ರದಲ್ಲಿ 46 ಭಾರತ ಜೋಡೋ ಯುವ ಸಂಘಗಳನ್ನು ಸ್ಥಾಪಿಸಲಾಗುವುದು ಎಂದು ಶಾಸಕ ಎನ್.ಎಚ್. ಕೋನರಡ್ಡಿ ತಿಳಿಸಿದರು.
ನವಲಗುಂದ ನಗರದಲ್ಲಿ ಕಾಂಗ್ರೆಸ್ ಪಕ್ಷದ ವತಿಯಿಂದ ಆಯೋಜಿಸಿದ್ದ ಭಾರತ ಜೋಡೋ ಯುವ ಸಂಘಗಳ ರಚನೆ ಕುರಿತ ಸಭೆಯಲ್ಲಿ ಮಾತನಾಡಿದ ಅವರು, ರಾಹುಲ್ ಗಾಂಧಿ ಅವರ ಆಶಯ ಹಾಗೂ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಯುವಕರ ಕುರಿತ ಕಾಳಜಿಯಂತೆ ಕ್ಷೇತ್ರದ 37 ಗ್ರಾಮ ಪಂಚಾಯಿತಿಗಳ ವ್ಯಾಪ್ತಿಯಲ್ಲಿ, ನವಲಗುಂದ ಪುರಸಭೆಯಲ್ಲಿ 4 ಹಾಗೂ ಅಣ್ಣಿಗೇರಿ ಪುರಸಭೆಯಲ್ಲಿ 5 ಸೇರಿದಂತೆ ಒಟ್ಟು 46 ಯುವ ಸಂಘಗಳನ್ನು ರಚಿಸಲಾಗುವುದು ಎಂದರು.
ಪ್ರತಿ ಸಂಘಕ್ಕೆ ಪ್ರತಿವರ್ಷ ₹10 ಲಕ್ಷ ಅನುದಾನ ನೀಡುವ ಉದ್ದೇಶವಿದೆ. ನವಲಗುಂದ, ಅಣ್ಣಿಗೇರಿ ಹಾಗೂ ಹುಬ್ಬಳ್ಳಿ ತಾಲೂಕು ವ್ಯಾಪ್ತಿಯಲ್ಲಿ ಆನ್‌ಲೈನ್ ಮೂಲಕ ನೋಂದಣಿ ಪ್ರಕ್ರಿಯೆ ನಡೆಸಿ ಸಂಘಗಳನ್ನು ಸ್ಥಾಪಿಸಲಾಗುವುದು. ಇದರಿಂದ ಯುವಕರಿಗೆ ಉದ್ಯೋಗ, ಕೌಶಲ್ಯಾಭಿವೃದ್ಧಿ ಹಾಗೂ ನಾಯಕತ್ವ ಬೆಳೆಸಿಕೊಳ್ಳಲು ಉತ್ತಮ ಅವಕಾಶ ದೊರೆಯಲಿದ್ದು, ಇದರ ಸದುಪಯೋಗ ಪಡೆಯಬೇಕು ಎಂದು ಕರೆ ನೀಡಿದರು.
ವಿಶೇಷ ಮತದಾರರ ಪಟ್ಟಿ ಪರಿಷ್ಕರಣೆ ಪ್ರಕ್ರಿಯೆಯಲ್ಲಿ ಕ್ಷೇತ್ರದ ಬಿಎಲ್‌ಎ-2ಗಳು ಹಾಗೂ ಪಕ್ಷದ ಮುಖಂಡರು ಉತ್ತಮವಾಗಿ ಕಾರ್ಯನಿರ್ವಹಿಸಿದ್ದಾರೆ. ಬಾಕಿ ಉಳಿದಿರುವ ಎಲ್ಲ ಮತದಾರರು ಹಾಗೂ ಯುವ ಮತದಾರರನ್ನು ಮತದಾರರ ಪಟ್ಟಿಗೆ ಸೇರ್ಪಡೆಗೊಳಿಸಲು ಹೆಚ್ಚಿನ ಪ್ರಯತ್ನ ಮಾಡಬೇಕು. ಮುಂಬರುವ ಜಿಲ್ಲಾ ಪಂಚಾಯಿತಿ, ತಾಲೂಕು ಪಂಚಾಯಿತಿ, ಗ್ರಾಮ ಪಂಚಾಯಿತಿ ಹಾಗೂ ಪುರಸಭೆ ಚುನಾವಣೆಗಳನ್ನು ಎದುರಿಸಲು ಪಕ್ಷದ ಸಂಘಟನೆ ಬಲಪಡಿಸುವ ಅಗತ್ಯವಿದೆ ಎಂದು ಹೇಳಿದರು.
ಮಾಜಿ ವಿಧಾನ ಪರಿಷತ್ ಸದಸ್ಯ ಹಾಗೂ ಪಶ್ಚಿಮ ಪದವೀಧರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಮೋಹನ ಲಿಂಬಿಕಾಯಿ ಮಾತನಾಡಿ, ಭಾರತ ಜೋಡೋ ಯುವ ಸಂಘಗಳ ರಚನೆಯಿಂದ ಯುವಕರಲ್ಲಿ ದೇಶಪ್ರೇಮ, ಸಾಮಾಜಿಕ ಕಳಕಳಿ ಹಾಗೂ ಸಂಘಟನಾ ಮನೋಭಾವ ಬೆಳೆಸಲು ಸಹಕಾರಿಯಾಗಲಿದೆ. ಪ್ರತಿ ಪಂಚಾಯಿತಿಯಲ್ಲಿ ಯುವ ಸಂಘಗಳನ್ನು ನೋಂದಾಯಿಸಿ, ಸಮಾಜ ಸೇವೆಯಲ್ಲಿ ತೊಡಗಿಸಿಕೊಳ್ಳಲು ಯುವಕರಿಗೆ ಪ್ರೋತ್ಸಾಹ ನೀಡಬೇಕು ಎಂದರು. ಪಶ್ಚಿಮ ಪದವೀಧರ ಕ್ಷೇತ್ರದ ಚುನಾವಣೆಗೆ ಅರ್ಹ ಪದವೀಧರರು ತಮ್ಮ ಹೆಸರುಗಳನ್ನು ಮತದಾರರ ಪಟ್ಟಿಗೆ ಸೇರ್ಪಡೆಗೊಳಿಸುವಂತೆ ಕರೆ ನೀಡಿದರು.
---------------
ಹಿಂದೂಸ್ತಾನ್ ಸಮಾಚಾರ್ / Rakesh.M.B.