
ಬೆಂಗಳೂರು, 22 ಆಗಸ್ಟ್ (ಹಿ.ಸ.)
ಆ್ಯಂಕರ್:
ರಾಜ್ಯದಲ್ಲಿ ತೀವ್ರ ಮಳೆ ಕೊರತೆಯಿಂದ ರೈತರು ಹಾಗೂ ಜಾನುವಾರುಗಳಿಗೆ ಎದುರಾಗಿರುವ ಕುಡಿಯುವ ನೀರಿನ ಸಮಸ್ಯೆ ನಿವಾರಿಸಲು ರಾಜ್ಯ ಸರ್ಕಾರ ತುರ್ತು ಮೋಡ ಬಿತ್ತನೆಗೆ ಮುಂದಾಗಿದೆ. 2026-27ನೇ ಸಾಲಿನಲ್ಲಿ ಮೋಡ ಬಿತ್ತನೆ ಕೈಗೊಳ್ಳಲು ಜಲಸಂಪನ್ಮೂಲ ಇಲಾಖೆ ಆಡಳಿತಾತ್ಮಕ ಅನುಮೋದನೆ ನೀಡಿ ಆದೇಶ ಹೊರಡಿಸಿದೆ.
ಕರ್ನಾಟಕ ನೀರಾವರಿ ನಿಗಮ ಹಾಗೂ ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ ಸಹಯೋಗದಲ್ಲಿ ಯೋಜನೆ ಅನುಷ್ಠಾನಗೊಳ್ಳಲಿದೆ. ಇದಕ್ಕಾಗಿ ಜಿಎಸ್ಟಿ ಹೊರತುಪಡಿಸಿ ಒಟ್ಟು ₹28.52 ಕೋಟಿ ಅನುದಾನ ಮಂಜೂರು ಮಾಡಲಾಗಿದ್ದು, ₹27.52 ಕೋಟಿ ಸ್ಥಿರ ವೆಚ್ಚ ಹಾಗೂ ₹1 ಕೋಟಿ ಬದಲಾಗುವ ವೆಚ್ಚಕ್ಕೆ ಮೀಸಲಿಡಲಾಗಿದೆ.
ಆಗಸ್ಟ್‌ನಿಂದ ಅಕ್ಟೋಬರ್ 2026ರವರೆಗೆ 60 ದಿನಗಳ ಕಾಲ ಮೋಡ ಬಿತ್ತನೆ ಕಾರ್ಯಾಚರಣೆ ನಡೆಯಲಿದ್ದು, ಒಟ್ಟು 200 ಗಂಟೆಗಳ ವೈಮಾನಿಕ ಹಾರಾಟ ನಡೆಸಲು ಯೋಜಿಸಲಾಗಿದೆ. ಕಾಮಗಾರಿಯ ಜವಾಬ್ದಾರಿಯನ್ನು ಖ್ಯಾತಿ ಕ್ಲೈಮೇಟ್ ಮಾಡಿಫಿಕೇಶನ್ ಕನ್ಸಲ್ಟೆಂಟ್ಸ್ ಎಲ್‌ಎಲ್‌ಪಿ ಸಂಸ್ಥೆಗೆ ವಹಿಸಲಾಗಿದೆ.
ಅತ್ಯಾಧುನಿಕ ಹವಾಮಾನ ರಾಡಾರ್‌ಗಳು ಹಾಗೂ ವೀಕ್ಷಣಾ ಜಾಲದ ಮೂಲಕ ಸೂಕ್ತ ಮೋಡಗಳನ್ನು ಗುರುತಿಸಿ, ವೈಜ್ಞಾನಿಕವಾಗಿ ಕಾರ್ಯಾಚರಣೆಯ ಮೇಲ್ವಿಚಾರಣೆಯನ್ನು ಕೆಎಸ್‌ಎನ್‌ಡಿಎಂಸಿ ನಡೆಸಲಿದೆ.
ಕೆಎಸ್‌ಎನ್‌ಡಿಎಂಸಿ ವರದಿ ಪ್ರಕಾರ, ರಾಜ್ಯದಲ್ಲಿ ಮುಂಗಾರು ಹಂಗಾಮಿನಲ್ಲಿ ತೀವ್ರ ಮಳೆ ಕೊರತೆ ದಾಖಲಾಗಿದೆ. ಜೂನ್ ಅಂತ್ಯಕ್ಕೆ ಶೇ.42 ಹಾಗೂ ಜುಲೈ ಅಂತ್ಯಕ್ಕೆ ಶೇ.29ರಷ್ಟು ಮಳೆ ಕೊರತೆ ಉಂಟಾಗಿದೆ. ರಾಜ್ಯದ 31 ಜಿಲ್ಲೆಗಳ ಪೈಕಿ 27 ಜಿಲ್ಲೆಗಳ 178 ತಾಲೂಕುಗಳಲ್ಲಿ ತೀವ್ರ ಮಳೆ ಕೊರತೆ ದಾಖಲಾಗಿದ್ದು, ಜನಜೀವನದ ಮೇಲೆ ಪರಿಣಾಮ ಬೀರಿದೆ.
ಈ ಹಿಂದೆ ಕೈಗೊಂಡಿದ್ದ ‘ವರ್ಷಧಾರೆ’ ಯೋಜನೆ ಹಾಗೂ ಭಾರತೀಯ ಉಷ್ಣವಲಯ ಹವಾಮಾನ ಸಂಸ್ಥೆಯ ‘ಕೈಪೆಕ್ಸ್’ ವೈಜ್ಞಾನಿಕ ಅಧ್ಯಯನಗಳಿಂದ ದೊರೆತ ಅನುಭವವನ್ನು ಆಧರಿಸಿ, ಸಂಪುಟ ಸಭೆಯ ತೀರ್ಮಾನದಂತೆ ತುರ್ತು ಮೋಡ ಬಿತ್ತನೆ ಯೋಜನೆಗೆ ಚಾಲನೆ ನೀಡಲಾಗಿದೆ.
---------------
ಹಿಂದೂಸ್ತಾನ್ ಸಮಾಚಾರ್ / BHARGAVI G R