
ಬೆಂಗಳೂರು, 22 ಆಗಸ್ಟ್ (ಹಿ.ಸ.)
ಆ್ಯಂಕರ್:
ಮೆಟ್ರೋ ಸೇವೆ ಆರಂಭವಾಗಿ ದಶಕವೇ ಕಳೆದಿದ್ದರೂ, ಸಿಲಿಕಾನ್ ಸಿಟಿಯಲ್ಲಿ ಟ್ರಾಫಿಕ್ ಜಾಮ್ ಸಮಸ್ಯೆ ಮಾತ್ರ ದಿನದಿಂದ ದಿನಕ್ಕೆ ಉಲ್ಬಣಿಸುತ್ತಲೇ ಇದೆ. ಅದರಲ್ಲೂ ಮಳೆ ಬಂದರಂತೂ ಬೆಂಗಳೂರು ನಗರದ ರಸ್ತೆಗಳು ಸ್ತಬ್ಧಗೊಳ್ಳುವುದೇ ಹೆಚ್ಚು. ಶುಕ್ರವಾರ ಸಂಜೆ ಸುರಿದ ಸಾಧಾರಣ ಮಳೆಗೆ ಸಿಲುಕಿ ಪ್ರಯಾಣಿಕರೊಬ್ಬರು ವಿಮಾನ ನಿಲ್ದಾಣ ತಲುಪಲು ಪಟ್ಟ ಪಾಡು ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ.
ಶುಕ್ರವಾರ ರಾತ್ರಿ ಇಂದಿರಾನಗರದಿಂದ ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ತಲುಪಲು ಬರೋಬ್ಬರಿ 2 ಗಂಟೆ 15 ನಿಮಿಷಗಳು ಬೇಕಾಯಿತು ಎಂದು ನಿತಿನ್ ಶರ್ಮಾ ಎಂಬ ಪ್ರಯಾಣಿಕರು ಸಾಮಾಜಿಕ ಜಾಲತಾಣ ಎಕ್ಸನಲ್ಲಿ ತಮ್ಮ ಅಳಲು ತೋಡಿಕೊಂಡಿದ್ದಾರೆ. ಕೇವಲ ಸಾಧಾರಣ ಮಳೆಗೆ ರಸ್ತೆಗಳು ಅಸ್ತವ್ಯಸ್ತಗೊಂಡು ಇಷ್ಟು ದೀರ್ಘ ಸಮಯ ಹಿಡಿದಿರುವುದಕ್ಕೆ ಅವರು ಬೇಸರ ವ್ಯಕ್ತಪಡಿಸಿದ್ದಾರೆ.
ಸಂಚಾರ ದಟ್ಟಣೆಯಿಂದಾಗಿ ವಿಮಾನ ನಿಲ್ದಾಣ ತಲುಪುವುದೇ ದೊಡ್ಡ ಸವಾಲಾಗಿ ಪರಿಣಮಿಸಿತ್ತು. ದಾರಿಯುದ್ದಕ್ಕೂ ರಾಜಕಾರಣಿಗಳನ್ನು ದೂಷಿಸುವ ಆಲೋಚನೆಗಳೇ ನನ್ನ ತಲೆಯಲ್ಲಿ ಓಡಾಡುತ್ತಿದ್ದವು. ಆದರೆ, ವಿಮಾನ ನಿಲ್ದಾಣ ಪ್ರವೇಶಿಸಿದ ನಂತರ ಡಿಜಿಟಲ್ ಯಾತ್ರೆ ಮತ್ತು ಅಲ್ಲಿನ ಅತ್ಯುತ್ತಮ ಕಾರ್ಯಾಚರಣೆಗಳಿಂದಾಗಿ ಕೇವಲ 9 ನಿಮಿಷಗಳಲ್ಲಿ ನಿರ್ಗಮನ ದ್ವಾರ ತಲುಪಲು ಸಾಧ್ಯವಾಯಿತು ಎಂದು ಅವರು ಮೆಚ್ಚುಗೆಯನ್ನೂ ವ್ಯಕ್ತಪಡಿಸಿದ್ದಾರೆ.
ಬೆಂಗಳೂರಿನಲ್ಲಿ ಭೌತಿಕ ಮೂಲಸೌಕರ್ಯಗಳು ಹಿಂದುಳಿದಿದ್ದರೂ, ಡಿಜಿಟಲ್ ಮೂಲಸೌಕರ್ಯಗಳು ಜೀವನವನ್ನು ಕೊಂಚ ಸಹನೀಯವಾಗಿಸಿವೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ವಿಮಾನ ನಿಲ್ದಾಣದ ಸಂಪರ್ಕವನ್ನು ಸುಧಾರಿಸಲು ಹೆಬ್ಬಾಳದಿಂದ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದವರೆಗೆ ನಮ್ಮ ಮೆಟ್ರೋ ಸೇವೆಯನ್ನು ತುರ್ತಾಗಿ ವಿಸ್ತರಿಸಬೇಕು ಎಂಬ ಒತ್ತಾಯ ಕೇಳಿಬಂದಿದೆ.ಮೂಲಸೌಕರ್ಯಗಳ ಕೊರತೆಯ ಜತೆಗೆ ರಸ್ತೆಗಳಲ್ಲಿ ಗುಂಡಿಗಳು ಮುಕ್ತವಾಗಿದ್ದರೆ ಅರ್ಧದಷ್ಟು ಟ್ರಾಫಿಕ್ ಸಮಸ್ಯೆ ನಿವಾರಣೆಯಾಗಲಿದೆ ಎಂದು ಸಾರ್ವಜನಿಕರು ಅಭಿಪ್ರಾಯಪಟ್ಟಿದ್ದಾರೆ.
---------------
ಹಿಂದೂಸ್ತಾನ್ ಸಮಾಚಾರ್ / BHARGAVI G R