ಜಿಬಿಎ ವ್ಯಾಪ್ತಿಯಲ್ಲಿ ಬಿ ಖಾತಾದಿಂದ ಎ ಖಾತಾಗೆ ಪರಿವರ್ತನೆಗೆ ನಾಳೆ ಕೊನೆ ದಿನ
ವಿಸ್ತರಣೆ ಇಲ್ಲ ಎಂದ ಐಎಎಸ್ ಅಧಿಕಾರಿ ಮುನೀಶ್ ಮೌದ್ಗಿಲ್
ಜಿಬಿಎ ವ್ಯಾಪ್ತಿಯಲ್ಲಿ ಬಿ ಖಾತಾದಿಂದ ಎ ಖಾತಾಗೆ ಪರಿವರ್ತನೆಗೆ ನಾಳೆ ಕೊನೆ ದಿನ


ಬೆಂಗಳೂರು, 22 ಆಗಸ್ಟ್ (ಹಿ.ಸ.):

ಆ್ಯಂಕರ್: ಜಿಬಿಎ ವ್ಯಾಪ್ತಿಯಲ್ಲಿ ಖಾತಾ ಆಸ್ತಿಗಳನ್ನು 'ಎ' ಖಾತಾಗೆ ಪರಿವರ್ತನೆ ಮಾಡಿಕೊಳ್ಳಲು ಸರ್ಕಾರ ನೀಡಿರುವ ವಿಶೇಷ ಅವಕಾಶದಡಿ ಅರ್ಜಿ ಸಲ್ಲಿಸಲು ನಾಳೆಯೇ (ಭಾನುವಾರ) ಕೊನೆಯ ದಿನವಾಗಿದೆ. ನಿಗದಿತ ಗಡುವಿನ ಬಳಿಕ ಅರ್ಜಿ ಸಲ್ಲಿಕೆಗೆ ಯಾವುದೇ ಕಾರಣಕ್ಕೂ ಅವಧಿ ವಿಸ್ತರಣೆ ಮಾಡುವುದಿಲ್ಲ ಎಂದು ವಿಶೇಷ ಕಂದಾಯ ಆಯುಕ್ತ ಮುನೀಶ್ ಮೌದ್ಗಿಲ್ ಸ್ಪಷ್ಟಪಡಿಸಿದ್ದಾರೆ.

ಬಿ ಖಾತಾ ಆಸ್ತಿಗಳನ್ನು ನಿಯಮಾನುಸಾರ 'ಎ' ಖಾತಾಗೆ ಪರಿವರ್ತಿಸಿಕೊಳ್ಳಲು ಸರ್ಕಾರ ಸುವರ್ಣ ಅವಕಾಶ ನೀಡಿದ್ದು, ಮಾರ್ಗಸೂಚಿ ದರದ ಶೇಕಡಾ 2 ರಷ್ಟು ಶುಲ್ಕ ಪಾವತಿಸುವ ಮೂಲಕ ಖಾತಾ ಪರಿವರ್ತನೆಗೆ ಅವಕಾಶ ಕಲ್ಪಿಸಲಾಗಿದೆ. ಈ ವಿಶೇಷ ಅವಕಾಶದ ಅವಧಿ ನಾಳೆಗೆ ಅಂತ್ಯಗೊಳ್ಳಲಿದೆ.

ಬೆಂಗಳೂರು ನಗರದಲ್ಲಿ ಒಟ್ಟು ಸುಮಾರು 7.5 ಲಕ್ಷ ಬಿ ಖಾತಾ ಆಸ್ತಿಗಳಿದ್ದರೂ, ಇದುವರೆಗೆ ಕೇವಲ 70 ಸಾವಿರ ಅರ್ಜಿಗಳು ಮಾತ್ರ ಸಲ್ಲಿಕೆಯಾಗಿವೆ ಎಂದು ಮುನೀಶ್ ಮೌದ್ಗಿಲ್ ಮಾಹಿತಿ ನೀಡಿದ್ದಾರೆ. ಸಲ್ಲಿಕೆಯಾಗಿರುವ ಅರ್ಜಿಗಳ ಪೈಕಿ ಸುಮಾರು 20 ಸಾವಿರ ಅರ್ಜಿಗಳಿಗೆ ಮಾತ್ರ 'ಎ' ಖಾತಾ ಪರಿವರ್ತನೆಗೆ ಅನುಮೋದನೆ ನೀಡಲಾಗಿದೆ. ಅರ್ಜಿಗಳ ಸಂಖ್ಯೆ ನಿರೀಕ್ಷಿತ ಮಟ್ಟಕ್ಕಿಂತ ತೀರಾ ಕಡಿಮೆ ಇದ್ದು, ಸರ್ಕಾರದ ಈ ವಿಶೇಷ ಅವಕಾಶಕ್ಕೆ ಈ ಬಾರಿ ಕೂಡ ಜನರಿಂದ ನಿರೀಕ್ಷಿತ ಪ್ರತಿಕ್ರಿಯೆ ವ್ಯಕ್ತವಾಗಿಲ್ಲ ಎಂದು ಅವರು ಕಳವಳ ವ್ಯಕ್ತಪಡಿಸಿದ್ದಾರೆ.

'ಎ' ಖಾತಾ ಪಡೆಯಲು ಅರ್ಹರಾಗಿರುವ ಬಿ ಖಾತಾ ಆಸ್ತಿ ಮಾಲೀಕರು ನಾಳೆಯೊಳಗೆ ಕಡ್ಡಾಯವಾಗಿ ಅರ್ಜಿ ಸಲ್ಲಿಸಬಹುದಾಗಿದೆ. ನಾಳೆಯ ನಂತರ ಸರ್ಕಾರ ನೀಡಿರುವ ಈ ವಿಶೇಷ ಅವಕಾಶವು ಸಂಪೂರ್ಣವಾಗಿ ಮುಕ್ತಾಯಗೊಳ್ಳಲಿದೆ. ಈ ಹಿನ್ನೆಲೆಯಲ್ಲಿ ಬಾಕಿ ಉಳಿದಿರುವ ಆಸ್ತಿ ಮಾಲೀಕರು ಕೂಡಲೇ ಕೊನೆಯ ದಿನದೊಳಗೆ ಪ್ರಕ್ರಿಯೆ ಪೂರ್ಣಗೊಳಿಸುವಂತೆ ಸೂಚಿಸಲಾಗಿದೆ.

ಬಿ ಖಾತಾದಿಂದ 'ಎ' ಖಾತಾಗೆ ಪರಿವರ್ತನೆಯಾದ ಬಳಿಕ ಆಸ್ತಿಯ ಅಧಿಕೃತ ದಾಖಲೆಗಳು ಸರಿಪಡಿಸಿಕೊಳ್ಳಲು ಅವಕಾಶ ಸಿಗಲಿದ್ದು, ಭವಿಷ್ಯದಲ್ಲಿ ಆಸ್ತಿ ಮಾರಾಟ, ಬ್ಯಾಂಕ್ ಸಾಲ ಹಾಗೂ ಇ A-Khata ಇತರ ಆಡಳಿತಾತ್ಮಕ ಪ್ರಕ್ರಿಯೆಗಳಲ್ಲಿ ಮಾಲೀಕರಿಗೆ ಅನುಕೂಲವಾಗಲಿದೆ. ಹೀಗಾಗಿ, ಅರ್ಜಿ ಸಲ್ಲಿಸುವ ಮುನ್ನ ಆಸ್ತಿಗೆ ಸಂಬಂಧಿಸಿದ ದಾಖಲೆಗಳು, ಅರ್ಹತೆ ಹಾಗೂ ಶುಲ್ಕದ ವಿವರಗಳನ್ನು ಬಿಬಿಎಂಪಿ ಅಧಿಕಾರಿಗಳಿಂದ ಖಚಿತಪಡಿಸಿಕೊಳ್ಳುವಂತೆ ತಿಳಿಸಲಾಗಿದೆ.

---------------

ಹಿಂದೂಸ್ತಾನ್ ಸಮಾಚಾರ್ / BHARGAVI G R


 rajesh pande