
ಬಾಗಲಕೋಟೆ, 22 ಆಗಸ್ಟ್ (ಹಿ.ಸ.)
ಆ್ಯಂಕರ್ : ಬಹುನಿರೀಕ್ಷಿತ ವಿಜಯಪುರ ವಿಮಾನ ನಿಲ್ದಾಣದ ಕಾಮಗಾರಿ ಅಂತಿಮ ಹಂತ ತಲುಪಿದ್ದು, 2027ರ ಜನವರಿ ಅಂತ್ಯದೊಳಗೆ ವಿಮಾನ ಹಾರಾಟ ಆರಂಭಿಸುವ ನಿಟ್ಟಿನಲ್ಲಿ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ ಎಂದು ಕರ್ನಾಟಕ ರಾಜ್ಯ ಕೈಗಾರಿಕಾ ಮತ್ತು ಮೂಲಸೌಲಭ್ಯ ಅಭಿವೃದ್ಧಿ ನಿಗಮದ (ಕೆಎಸ್ಐಐಡಿಸಿ) ಅಧ್ಯಕ್ಷ ಎಸ್.ಜಿ. ನಂಜಯ್ಯನಮಠ ವಿಶ್ವಾಸ ವ್ಯಕ್ತಪಡಿಸಿದರು.
ವಿಜಯಪುರ ವಿಮಾನ ನಿಲ್ದಾಣಕ್ಕೆ ಭೇಟಿ ನೀಡಿ ವಿವಿಧ ಕಾಮಗಾರಿಗಳ ಪ್ರಗತಿ ಪರಿಶೀಲಿಸಿದ ಬಳಿಕ ನಗರದ ಪ್ರವಾಸಿ ಮಂದಿರದಲ್ಲಿ ಸುದ್ದಿಗೋಷ್ಠಿ ನಡೆಸಿದ ಅವರು, ವಿಮಾನ ನಿಲ್ದಾಣ ಕಾರ್ಯಾರಂಭಕ್ಕೆ ಅಗತ್ಯವಿರುವ ಬಹುತೇಕ ಕಾಮಗಾರಿಗಳು ಪೂರ್ಣಗೊಂಡಿದ್ದು, ಬಾಕಿ ಇರುವ ತಾಂತ್ರಿಕ ಹಾಗೂ ಅನುಮತಿ ಪ್ರಕ್ರಿಯೆಗಳನ್ನು ಶೀಘ್ರ ಪೂರ್ಣಗೊಳಿಸಲಾಗುವುದು ಎಂದು ತಿಳಿಸಿದರು.
ಪರಿಸರ ಅನುಮತಿ, ನ್ಯಾಯಾಲಯದ ತಡೆಯಾಜ್ಞೆಯಿಂದ ವಿಳಂಬ
ವಿಮಾನ ನಿಲ್ದಾಣ ಕಾಮಗಾರಿ ಹಾಗೂ ಕಾರ್ಯಾರಂಭದಲ್ಲಿ ಪರಿಸರ ಇಲಾಖೆಯ ಅನುಮತಿ ಇಲ್ಲದಿರುವುದು ಮತ್ತು ಸುಪ್ರೀಂ ಕೋರ್ಟ್ನ ತಡೆಯಾಜ್ಞೆಯಿಂದಾಗಿ ವಿಳಂಬ ಉಂಟಾಗಿತ್ತು. ಇದೀಗ ಸುಮಾರು ಮೂರು ವಾರಗಳ ಹಿಂದೆ ತಡೆಯಾಜ್ಞೆ ತೆರವಾಗಿದ್ದು, ಕಾಮಗಾರಿಗೆ ವೇಗ ದೊರೆತಿದೆ ಎಂದು ನಂಜಯ್ಯನಮಠ ವಿವರಿಸಿದರು.
ಈ ಸಂಬಂಧ ಕೇಂದ್ರ ಪರಿಸರ ಇಲಾಖೆಯಿಂದ ಅಗತ್ಯ ಅನುಮತಿ ಪಡೆಯಲು ಕ್ರಮ ಕೈಗೊಳ್ಳಲಾಗಿದೆ. ಪ್ರಸ್ತುತ ಸಂಸತ್ ಅಧಿವೇಶನ ನಡೆಯುತ್ತಿರುವ ಹಿನ್ನೆಲೆಯಲ್ಲಿ ಸ್ವಲ್ಪ ವಿಳಂಬವಾಗುವ ಸಾಧ್ಯತೆಯಿದ್ದರೂ, ಶೀಘ್ರದಲ್ಲೇ ಅನುಮತಿ ದೊರೆಯುವ ನಿರೀಕ್ಷೆಯಿದೆ ಎಂದರು.
ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಹಾಗೂ ಮೂಲಸೌಕರ್ಯ ಅಭಿವೃದ್ಧಿ ಮತ್ತು ವಿಜಯಪುರ ಜಿಲ್ಲಾ ಉಸ್ತುವಾರಿ ಸಚಿವ ಡಾ. ಎಂ.ಬಿ. ಪಾಟೀಲರು ಈ ವಿಚಾರದಲ್ಲಿ ಸಾಕಷ್ಟು ಪ್ರಯತ್ನ ನಡೆಸಿದ್ದಾರೆ. ಅವರ ಪ್ರಯತ್ನದ ಫಲವಾಗಿ ಹಲವು ಸಮಸ್ಯೆಗಳು ಬಗೆಹರಿದಿವೆ ಎಂದು ಹೇಳಿದರು.
ರಾತ್ರಿ ವಿಮಾನ ಹಾರಾಟಕ್ಕೂ ಸಿದ್ಧತೆ
ವಿಜಯಪುರ ವಿಮಾನ ನಿಲ್ದಾಣದಲ್ಲಿ ರಾತ್ರಿ ವಿಮಾನಗಳ ಹಾರಾಟ ಮತ್ತು ಇಳಿಯುವಿಕೆಗೆ ಅಗತ್ಯವಿರುವ ಕಾಮಗಾರಿಗಳು ಪ್ರಗತಿಯಲ್ಲಿವೆ. ಈ ಕಾಮಗಾರಿಗೆ ಸಂಬಂಧಿಸಿದ ಟೆಂಡರ್ ಪ್ರಕ್ರಿಯೆ ಇನ್ನೊಂದು ವಾರದೊಳಗೆ ಪೂರ್ಣಗೊಳ್ಳುವ ನಿರೀಕ್ಷೆಯಿದೆ. ನೈಟ್ ಲ್ಯಾಂಡಿಂಗ್ಗೆ ಅಗತ್ಯವಿರುವ ಭೂಸ್ವಾಧೀನ ಪ್ರಕ್ರಿಯೆಯೂ ಪ್ರಗತಿಯಲ್ಲಿದೆ ಎಂದು ನಂಜಯ್ಯನಮಠ ತಿಳಿಸಿದರು.
ತಾಂತ್ರಿಕ ವಿಭಾಗ ಹಾಗೂ ರಾಷ್ಟ್ರೀಯ ವಿಮಾನಯಾನ ಇಲಾಖೆಯಿಂದ ಅಂತಿಮ ಅನುಮೋದನೆ ದೊರೆತ ಬಳಿಕ ವಿಮಾನ ಹಾರಾಟ ಆರಂಭವಾಗಲಿದೆ. ಅಧಿಕಾರಿಗಳು ಹಾಗೂ ಗುತ್ತಿಗೆದಾರರು ಒಟ್ಟಾಗಿ ಕಾರ್ಯನಿರ್ವಹಿಸುತ್ತಿದ್ದು, ಹೊಸ ವರ್ಷದ ಆರಂಭದಲ್ಲೇ ವಿಮಾನಯಾನ ಸೇವೆ ಆರಂಭಿಸುವ ಪ್ರಯತ್ನ ನಡೆಸಲಾಗುತ್ತಿದೆ ಎಂದರು.
₹618.75 ಕೋಟಿ ವೆಚ್ಚದಲ್ಲಿ ಅತ್ಯಾಧುನಿಕ ವಿಮಾನ ನಿಲ್ದಾಣ
ಏರ್ಬಸ್-320 ಮಾದರಿಯ ವಿಮಾನಗಳ ಹಾರಾಟಕ್ಕೆ ಅನುಕೂಲವಾಗುವಂತೆ ವಿಜಯಪುರ ವಿಮಾನ ನಿಲ್ದಾಣವನ್ನು ಒಟ್ಟು ₹618.75 ಕೋಟಿ ವೆಚ್ಚದಲ್ಲಿ ಅಭಿವೃದ್ಧಿಪಡಿಸಲಾಗುತ್ತಿದೆ. ಈ ಕಾಮಗಾರಿಗೆ ಕರ್ನಾಟಕ ಸರ್ಕಾರದ ಮೂಲಸೌಕರ್ಯ ಅಭಿವೃದ್ಧಿ ಇಲಾಖೆಯಿಂದ ಅನುದಾನ ಒದಗಿಸಲಾಗುತ್ತಿದೆ.
ಕಾಮಗಾರಿಯ ಮೇಲ್ವಿಚಾರಣೆಗಾಗಿ ಬೆಂಗಳೂರಿನ ಕೆಎಸ್ಐಐಡಿಸಿಯನ್ನು ನೋಡಲ್ ಏಜೆನ್ಸಿಯಾಗಿ ನೇಮಿಸಲಾಗಿದೆ. ಲೋಕೋಪಯೋಗಿ ಇಲಾಖೆಯ ಮೂಲಕ ಕಾಮಗಾರಿ ಅನುಷ್ಠಾನಗೊಳ್ಳುತ್ತಿದ್ದು, ಬೆಂಗಳೂರಿನ ಐಡೆಕ್ ಸಂಸ್ಥೆಯನ್ನು ಕಾಮಗಾರಿ ನಿರ್ವಹಣೆ ಮತ್ತು ಸಲಹೆಗಾರರಾಗಿ (ಪಿಎಂಸಿ) ನೇಮಕ ಮಾಡಲಾಗಿದೆ ಎಂದು ಅವರು ವಿವರಿಸಿದರು.
ವಿಮಾನ ನಿಲ್ದಾಣದ ವಿನ್ಯಾಸವನ್ನು ವಿಮಾನ ನಿಲ್ದಾಣ ವಿನ್ಯಾಸ ಕ್ಷೇತ್ರದಲ್ಲಿ ಪರಿಣತಿ ಹೊಂದಿರುವ ಗುರುಗ್ರಾಮ್ನ ಮೆಸ್ಸರ್ಸ್ ರೈಟ್ಸ್ ಸಂಸ್ಥೆ ಸಿದ್ಧಪಡಿಸಿದೆ ಎಂದು ನಂಜಯ್ಯನಮಠ ತಿಳಿಸಿದರು.
ಪ್ಯಾಕೇಜ್–1ರ ಅಡಿಯಲ್ಲಿ ವಿಮಾನ ನಿಲ್ದಾಣದ ಪ್ರಮುಖ ಮೂಲಸೌಕರ್ಯ ಕಾಮಗಾರಿಗಳನ್ನು ಕೈಗೊಳ್ಳಲಾಗಿದೆ.
ರನ್ವೇ, ಟ್ಯಾಕ್ಸಿ ವೇ, ಎಪ್ರಾನ್, ಐಸೋಲೇಶನ್ ಬೇ, ಸಂಪರ್ಕ ರಸ್ತೆ, ಒಳರಸ್ತೆಗಳು, ಪೆರಿಫೆರಲ್ ರಸ್ತೆಗಳು ಸೇರಿದಂತೆ ವಿವಿಧ ಪೇವ್ಮೆಂಟ್ ಕಾಮಗಾರಿಗಳನ್ನು ಅಭಿವೃದ್ಧಿಪಡಿಸಲಾಗಿದೆ.
ಪ್ಯಾಕೇಜ್–2ರಡಿ ಪ್ರಯಾಣಿಕರ ಟರ್ಮಿನಲ್ ಕಟ್ಟಡ, ಎಟಿಸಿ ಟವರ್, ಸಿಎಫ್ಆರ್ ಕಟ್ಟಡ, ಇಎಸ್ಎಸ್ ಕಟ್ಟಡ, ಆರ್ಮರಿ ಮತ್ತು ಡಾಗ್ ಕೆನಲ್ ಕಟ್ಟಡ, ಕ್ಯಾಂಟೀನ್, 10 ವಾಚ್ ಟವರ್ಗಳು, ಫೈರ್ ಪಿಟ್, ಕೂಲಿಂಗ್ ಪಿಟ್, ಕೆಳಮಟ್ಟ ಮತ್ತು ಮೇಲ್ಮಟ್ಟದ ನೀರು ಸಂಗ್ರಹಣಾ ವ್ಯವಸ್ಥೆ, ಎಸ್ಟಿಪಿ, ಪಂಪ್ ಹೌಸ್ ಹಾಗೂ ಕಂಪೌಂಡ್ ಗೋಡೆ ನಿರ್ಮಿಸಲಾಗಿದೆ.
ಇದರೊಂದಿಗೆ ಸೋಲಾರ್ ಪ್ಯಾನೆಲ್ಗಳು, ಏವಿಯೋನಿಕ್ಸ್ ಮತ್ತು ಭದ್ರತಾ ಉಪಕರಣಗಳು, ವಿಮಾನ ನಿಲ್ದಾಣಕ್ಕೆ 24/7 ವಿದ್ಯುತ್ ಪೂರೈಕೆಗಾಗಿ 2000 ಕಿಲೋವ್ಯಾಟ್ ಸಾಮರ್ಥ್ಯದ ವಿದ್ಯುತ್ ಸಂಪರ್ಕ ಹಾಗೂ 24/7 ನೀರು ಸರಬರಾಜು ವ್ಯವಸ್ಥೆಯನ್ನೂ ಕಲ್ಪಿಸಲಾಗಿದೆ ಎಂದು ಹೇಳಿದರು.
ವಿಮಾನ ನಿಲ್ದಾಣದ ಕಾರ್ಯಾಚರಣೆಗೆ ಅಗತ್ಯವಿರುವ ಎರಡು ಅಗ್ನಿಶಾಮಕ ವಾಹನಗಳು, ಬಾಂಬ್ ಪತ್ತೆ ಮತ್ತು ನಿಷ್ಕ್ರಿಯಗೊಳಿಸುವ ದಳಕ್ಕೆ ಅಗತ್ಯವಿರುವ ಉಪಕರಣಗಳು ಹಾಗೂ ಡಿವಿಒಆರ್ ಉಪಕರಣಗಳನ್ನು ಈಗಾಗಲೇ ಖರೀದಿಸಲಾಗಿದೆ ಎಂದರು.
ರಾತ್ರಿ ವಿಮಾನ ಹಾರಾಟಕ್ಕೆ ₹65 ಕೋಟಿ
ವಿಮಾನ ನಿಲ್ದಾಣದಲ್ಲಿ ರಾತ್ರಿ ವಿಮಾನ ಕಾರ್ಯಾಚರಣೆ ಆರಂಭಿಸಲು ಅಗತ್ಯವಿರುವ ಕಾಮಗಾರಿಗಳಿಗೆ, ಭೂಸ್ವಾಧೀನ ಸೇರಿದಂತೆ ₹65 ಕೋಟಿ ಅನುದಾನಕ್ಕೆ ರಾಜ್ಯ ಸರ್ಕಾರ 2025ರ ಅಕ್ಟೋಬರ್ 3ರಂದು ಆಡಳಿತಾತ್ಮಕ ಅನುಮೋದನೆ ನೀಡಿದೆ.
ಅದೇ ರೀತಿ ರಾಷ್ಟ್ರೀಯ ಹೆದ್ದಾರಿ–50ರ ವಿಜಯಪುರ–ಕಲಬುರಗಿ ರಸ್ತೆಯಿಂದ ವಿಮಾನ ನಿಲ್ದಾಣಕ್ಕೆ ಸಂಪರ್ಕ ಕಲ್ಪಿಸಲು ಚತುಷ್ಪಥ ರಸ್ತೆ ನಿರ್ಮಾಣಕ್ಕೆ, ಭೂಸ್ವಾಧೀನ ಸೇರಿದಂತೆ ₹52 ಕೋಟಿ ಅನುದಾನಕ್ಕೂ ಆಡಳಿತಾತ್ಮಕ ಅನುಮೋದನೆ ನೀಡಲಾಗಿದೆ ಎಂದು ನಂಜಯ್ಯನಮಠ ವಿವರಿಸಿದರು.
ಭೂಸ್ವಾಧೀನ ಪ್ರಕ್ರಿಯೆ ಪ್ರಗತಿಯಲ್ಲಿ
ಈ ಎರಡೂ ಯೋಜನೆಗಳಿಗೆ ಅಗತ್ಯವಿರುವ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳುವ ಪ್ರಕ್ರಿಯೆಯನ್ನು ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿ ಮೂಲಕ ಕೈಗೊಳ್ಳಲಾಗುತ್ತಿದೆ. ಈಗಾಗಲೇ ಪ್ರಾಥಮಿಕ ಅಧಿಸೂಚನೆಗೆ ಅನುಮೋದನೆ ದೊರೆತಿದ್ದು, ಭೂಮಾಲೀಕರೊಂದಿಗೆ ಆಕ್ಷೇಪಣೆ ಸಭೆಯನ್ನೂ ನಡೆಸಲಾಗಿದೆ.
ಪ್ರಸ್ತುತ ಜಂಟಿ ಮಾಪನ ಕಾರ್ಯ ಪ್ರಗತಿಯಲ್ಲಿದೆ. ಶೀಘ್ರದಲ್ಲೇ ಈ ಕಾರ್ಯ ಪೂರ್ಣಗೊಳಿಸಿ ಅಂತಿಮ ಅಧಿಸೂಚನೆ ಹೊರಡಿಸಲಾಗುವುದು. ಭೂಸ್ವಾಧೀನ ಪ್ರಕ್ರಿಯೆ ಪೂರ್ಣಗೊಂಡ ಬಳಿಕ ರಸ್ತೆ ಸೇರಿದಂತೆ ಸಂಬಂಧಿತ ಕಾಮಗಾರಿಗಳಿಗೆ ಟೆಂಡರ್ ಆಹ್ವಾನಿಸಲಾಗುವುದು ಎಂದು ತಿಳಿಸಿದರು.
ವಿಜಯಪುರ ವಿಮಾನ ನಿಲ್ದಾಣವು ಜಿಲ್ಲೆಯ ಪ್ರವಾಸೋದ್ಯಮ, ಕೈಗಾರಿಕೆ, ಕೃಷಿ ಉತ್ಪನ್ನಗಳ ಮಾರುಕಟ್ಟೆ ಹಾಗೂ ವಾಣಿಜ್ಯ ಚಟುವಟಿಕೆಗಳಿಗೆ ಹೊಸ ವೇಗ ನೀಡುವ ನಿರೀಕ್ಷೆಯಿದೆ. ಬಹುಕಾಲದಿಂದ ಜಿಲ್ಲೆಯ ಜನರ ಬೇಡಿಕೆಯಾಗಿದ್ದ ವಿಮಾನಯಾನ ಸೇವೆ ಆರಂಭಕ್ಕೆ ಇದೀಗ ಅಂತಿಮ ಹಂತದ ಸಿದ್ಧತೆ ನಡೆಯುತ್ತಿದ್ದು, 2027ರ ಜನವರಿ ಅಂತ್ಯದೊಳಗೆ ವಿಮಾನ ಹಾರಾಟ ಆರಂಭಿಸುವ ಪ್ರಯತ್ನ ಕೈಗೂಡುವ ವಿಶ್ವಾಸವಿದೆ ಎಂದು ನಂಜಯ್ಯನಮಠ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಲೋಕೋಪಯೋಗಿ ಇಲಾಖೆ ಕಾರ್ಯನಿರ್ವಾಹಕ ಅಧಿಕಾರಿ ಸಿ.ಎಸ್. ಪೊಲೀಸ್ ಪಾಟೀಲ, ಸಹಾಯಕ ಎಂಜಿನಿಯರ್ ಆರ್.ಎನ್. ಮಸಳಿ, ವಿಮಾನ ನಿಲ್ದಾಣದ ನಿರ್ದೇಶಕ ಪಿ.ಸಿ. ಪೊನ್ನಪ್ಪ, ಚಂದ್ರಶೇಖರ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.
---------------
ಹಿಂದೂಸ್ತಾನ್ ಸಮಾಚಾರ್ / jyothi deshpande