ಬಾವಿಯಲ್ಲಿ ಇಬ್ಬರು ಸಹೋದರಿಯರ ದುರಂತ ಸಾವು: ತಂದೆ ನಾಪತ್ತೆ; ಹಲವು ಅನುಮಾನ
ವಿಜಯಪುರ, 22 ಆಗಸ್ಟ್ (ಹಿ.ಸ.) ಆ್ಯಂಕರ್ : ಬಾವಿಯಲ್ಲಿ ಮುಳುಗಿ ಇಬ್ಬರು ಅಪ್ರಾಪ್ತ ಸಹೋದರಿಯರು ದಾರುಣವಾಗಿ ಮೃತಪಟ್ಟಿರುವ ಘಟನೆ ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ತಾಲೂಕಿನ ಬನಹಟ್ಟಿ ಗ್ರಾಮದಲ್ಲಿ ನಡೆದಿದ್ದು, ಕುಟುಂಬಸ್ಥರು ಹಾಗೂ ಗ್ರಾಮಸ್ಥರಲ್ಲಿ ತೀವ್ರ ಆಘಾತ ಮೂಡಿಸಿದೆ. ಮೃತಪಟ್ಟ ಬಾಲಕಿಯರನ್ನ
ಘಟನೆ


ವಿಜಯಪುರ, 22 ಆಗಸ್ಟ್ (ಹಿ.ಸ.)

ಆ್ಯಂಕರ್ : ಬಾವಿಯಲ್ಲಿ ಮುಳುಗಿ ಇಬ್ಬರು ಅಪ್ರಾಪ್ತ ಸಹೋದರಿಯರು ದಾರುಣವಾಗಿ ಮೃತಪಟ್ಟಿರುವ ಘಟನೆ ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ತಾಲೂಕಿನ ಬನಹಟ್ಟಿ ಗ್ರಾಮದಲ್ಲಿ ನಡೆದಿದ್ದು,

ಕುಟುಂಬಸ್ಥರು ಹಾಗೂ ಗ್ರಾಮಸ್ಥರಲ್ಲಿ ತೀವ್ರ ಆಘಾತ ಮೂಡಿಸಿದೆ.

ಮೃತಪಟ್ಟ ಬಾಲಕಿಯರನ್ನು ಹಿರಿಯ ಸಹೋದರಿ ರಕ್ಷಿತಾ ಬರಗಿ (15) ಹಾಗೂ ಕಿರಿಯ ಸಹೋದರಿ ಸಾಕ್ಷಿ ಬರಗಿ (10) ಎಂದು ಗುರುತಿಸಲಾಗಿದೆ. ಇದೇ ವೇಳೆ ಬಾಲಕಿಯರ ತಂದೆ ಸಾಬಣ್ಣ ಬರಗಿ ನಾಪತ್ತೆಯಾಗಿದ್ದು, ಅವರಿಗಾಗಿ ಅಗ್ನಿಶಾಮಕ ದಳದ ಸಿಬ್ಬಂದಿ ನಿರಂತರ ಶೋಧ ಕಾರ್ಯಾಚರಣೆ ನಡೆಸುತ್ತಿದ್ದಾರೆ.

ಘಟನೆಯ ಹಿನ್ನೆಲೆಯಲ್ಲಿ ಕುಟುಂಬದಲ್ಲಿ ದುಃಖದ ವಾತಾವರಣ ನಿರ್ಮಾಣವಾಗಿದ್ದು, ಇಬ್ಬರು ಹೆಣ್ಣುಮಕ್ಕಳನ್ನು ಕಳೆದುಕೊಂಡ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಸಾಬಣ್ಣ ಬರಗಿ ಅವರಿಗೆ ನಾಲ್ವರು ಹೆಣ್ಣುಮಕ್ಕಳಿದ್ದು, ಅವರಲ್ಲಿ ಇಬ್ಬರು ಮಕ್ಕಳು ದುರಂತ ಅಂತ್ಯ ಕಂಡಿರುವುದು ಕುಟುಂಬದ ನೋವನ್ನು ಮತ್ತಷ್ಟು ಹೆಚ್ಚಿಸಿದೆ.

ಮಾಹಿತಿಯ ಪ್ರಕಾರ, ಸಾಬಣ್ಣ ಬರಗಿ ಕೂಡ ಬಾವಿಗೆ ಜಿಗಿದಿದ್ದಾರೆ ಎನ್ನಲಾಗಿದ್ದು, ಬಾಲಕಿಯರೊಂದಿಗೆ ಅವರೂ ನೀರಿನಲ್ಲಿ ಮುಳುಗಿರುವ ಶಂಕೆ ವ್ಯಕ್ತವಾಗಿದೆ. ಆದರೆ ಬಾವಿಯಲ್ಲಿದ್ದ ನೀರನ್ನು ಸಂಪೂರ್ಣವಾಗಿ ಖಾಲಿ ಮಾಡಿಸಿದರೂ ಸಾಬಣ್ಣ ಅವರ ಸುಳಿವು ಸಿಕ್ಕಿಲ್ಲ. ಹೀಗಾಗಿ ಅವರು ನಿಜವಾಗಿಯೂ ಬಾವಿಗೆ ಬಿದ್ದು ಮೃತಪಟ್ಟಿದ್ದಾರೆಯೇ, ಅಥವಾ ಯಾವುದಾದರೂ ಕಾರಣಕ್ಕೆ ಬಾವಿಯಿಂದ ಹೊರಬಂದು ಬೇರೆಡೆ ತೆರಳಿದ್ದಾರೆಯೇ ಎಂಬುದು ಇನ್ನೂ ಖಚಿತವಾಗಿಲ್ಲ.

ಅಲ್ಲದೆ, ತಂದೆ ಸಾಬಣ್ಣ ಅವರು ಹೆಣ್ಣುಮಕ್ಕಳನ್ನು ಬಾವಿಗೆ ದೂಡಿ ಬಳಿಕ ತಾನೂ ಆತ್ಮಹತ್ಯೆಗೆ ಶರಣಾಗಿದ್ದಾರೆಯೇ ಎಂಬ ಅನುಮಾನವೂ ವ್ಯಕ್ತವಾಗಿದೆ. ಆದರೆ ಈ ಕುರಿತು ಯಾವುದೇ ಅಂತಿಮ ಮಾಹಿತಿ ಅಥವಾ ಅಧಿಕೃತ ದೃಢೀಕರಣ ಇನ್ನೂ ಲಭ್ಯವಾಗಿಲ್ಲ. ಘಟನೆಗೆ ನಿಖರ ಕಾರಣವೇನು ಎಂಬುದು ತನಿಖೆಯಿಂದಷ್ಟೇ ಸ್ಪಷ್ಟವಾಗಬೇಕಿದೆ.

ಬಾಲಕಿಯರ ಮೃತದೇಹ ಪತ್ತೆಯಾದ ಬಳಿಕ ಕುಟುಂಬಸ್ಥರ ದುಃಖದ ಕಟ್ಟೆ ಒಡೆದಿದ್ದು, ಸ್ಥಳದಲ್ಲಿ ಮನಕಲಕುವ ದೃಶ್ಯ ಕಂಡುಬಂದಿದೆ. ತಂದೆಯೂ ನಾಪತ್ತೆಯಾಗಿರುವ ಹಿನ್ನೆಲೆಯಲ್ಲಿ ಕುಟುಂಬಸ್ಥರು ಮತ್ತಷ್ಟು ಆತಂಕಕ್ಕೊಳಗಾಗಿದ್ದಾರೆ.

ಸಾಬಣ್ಣ ಅವರ ಪತ್ತೆಗಾಗಿ ಮುದ್ದೇಬಿಹಾಳ ಅಗ್ನಿಶಾಮಕ ಠಾಣೆಯ ಠಾಣಾಧಿಕಾರಿ ತಿಪ್ಪಣ್ಣ ನಾವದಗಿ ಅವರ ನೇತೃತ್ವದಲ್ಲಿ ಸಿಬ್ಬಂದಿ ಹಗಲು-ರಾತ್ರಿ ಎನ್ನದೆ ಶೋಧ ಕಾರ್ಯಾಚರಣೆ ನಡೆಸುತ್ತಿದ್ದಾರೆ. ಅಗ್ನಿಶಾಮಕ ಸಿಬ್ಬಂದಿಯಾದ ಸುಭಾಷ ರಾಠೋಡ, ತಮ್ಮಣ್ಣ ಗೌಡರ, ವಿರೂಪಾಕ್ಷ ಪೂಜಾರಿ, ಶ್ರೀಶೈಲಗೌಡ ಪಾಟೀಲ, ರಾಜು ರಾಠೋಡ ಹಾಗೂ ಲಕ್ಷ್ಮಣ ಕರ್ನಾಲ್ಗಿ ಅವರು ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದಾರೆ.

ಬಾವಿಯಲ್ಲಿನ ನೀರನ್ನು ಹೊರತೆಗೆದು ಪರಿಶೀಲನೆ ನಡೆಸಿದರೂ ಸಾಬಣ್ಣ ಅವರ ಬಗ್ಗೆ ಯಾವುದೇ ಸುಳಿವು ದೊರೆಯದಿರುವುದು ಹಲವು ಪ್ರಶ್ನೆಗಳಿಗೆ ಕಾರಣವಾಗಿದೆ. ಅವರು ಬಾವಿಯಿಂದ ಹೊರಬಂದಿರುವ ಸಾಧ್ಯತೆಯನ್ನೂ ಅಧಿಕಾರಿಗಳು ಪರಿಗಣಿಸುತ್ತಿದ್ದು, ಸುತ್ತಮುತ್ತಲಿನ ಪ್ರದೇಶಗಳಲ್ಲಿಯೂ ಮಾಹಿತಿ ಕಲೆಹಾಕಲಾಗುತ್ತಿದೆ.

ಇಬ್ಬರು ಅಪ್ರಾಪ್ತ ಬಾಲಕಿಯರ ಸಾವಿನ ಹಿನ್ನೆಲೆ ಹಾಗೂ ತಂದೆ ನಾಪತ್ತೆಯಾಗಿರುವ ಪ್ರಕರಣ ಇದೀಗ ಹಲವು ಅನುಮಾನಗಳನ್ನು ಹುಟ್ಟುಹಾಕಿದೆ. ಘಟನೆಗೆ ಸಂಬಂಧಿಸಿದ ಸಂಪೂರ್ಣ ಸತ್ಯ ತನಿಖೆ ಪೂರ್ಣಗೊಂಡ ಬಳಿಕವೇ ಹೊರಬರಬೇಕಿದೆ. ಸಾಬಣ್ಣ ಅವರ ಪತ್ತೆಗಾಗಿ ಶೋಧ ಕಾರ್ಯಾಚರಣೆ ಮುಂದುವರಿದಿದೆ.

---------------

ಹಿಂದೂಸ್ತಾನ್ ಸಮಾಚಾರ್ / jyothi deshpande


 rajesh pande