
ವಿಜಯಪುರ, 22 ಆಗಸ್ಟ್ (ಹಿ.ಸ.)
ಆ್ಯಂಕರ್ : ವಿಜಯಪುರ ನಗರದ ಗಣೇಶನಗರದ ಹೊರವಲಯದಲ್ಲಿ ಬೆಂಗಳೂರು–ಸೊಲ್ಲಾಪುರ ರಾಷ್ಟ್ರೀಯ ಹೆದ್ದಾರಿ-50 ದಾಟುವ ಸ್ಥಳದಲ್ಲಿ ನಿರ್ಮಾಣಗೊಳ್ಳುತ್ತಿರುವ 6 ಪಥದ ಅಂಡರ್ಪಾಸ್ ಸೇತುವೆ ಕಾಮಗಾರಿಯನ್ನು ಸಂಸದ ರಮೇಶ ಜಿಗಜಿಣಗಿ ಅವರು ವೀಕ್ಷಿಸಿ, ಕಾಮಗಾರಿಯ ಪ್ರಗತಿ ಹಾಗೂ ಗುಣಮಟ್ಟದ ಕುರಿತು ಅಧಿಕಾರಿಗಳಿಂದ ಮಾಹಿತಿ ಪಡೆದರು.
ಈ ಸಂದರ್ಭದಲ್ಲಿ ಮಾತನಾಡಿದ ಸಂಸದ ರಮೇಶ ಜಿಗಜಿಣಗಿ ಅವರು, “ನಾನೊಬ್ಬ ದಲಿತ ವ್ಯಕ್ತಿ. ಕಳೆದ 45 ವರ್ಷಗಳಿಂದ ನಾನು ಕೇಳದೆ ಮತ ನೀಡಿ ನನ್ನನ್ನು ಗೆಲ್ಲಿಸಿಕೊಂಡು ಇಷ್ಟು ಎತ್ತರಕ್ಕೆ ಬೆಳೆಸಿರುವ ವಿಜಯಪುರ ಜಿಲ್ಲೆಯ ಜನರ ಋಣವನ್ನು ತೀರಿಸಲು ಸಾಧ್ಯವಿಲ್ಲ. ಆದರೆ ಅವರ ಹೃದಯದಲ್ಲಿ ಶಾಶ್ವತವಾಗಿ ಉಳಿಯುವಂತಹ ಕೆಲಸಗಳನ್ನು ಮಾಡುತ್ತೇನೆ” ಎಂದು ಭಾವುಕರಾಗಿ ಹೇಳಿದರು.
ಬೆಂಗಳೂರು–ಸೊಲ್ಲಾಪುರ ರಾಷ್ಟ್ರೀಯ ಹೆದ್ದಾರಿ-50 ದಾಟುವ ಸಂದರ್ಭದಲ್ಲಿ ರೈತರು, ಶಾಲಾ-ಕಾಲೇಜು ವಿದ್ಯಾರ್ಥಿಗಳು ಹಾಗೂ ಸ್ಥಳೀಯ ವಾಹನ ಸವಾರರು ಹಲವು ವರ್ಷಗಳಿಂದ ತೊಂದರೆ ಅನುಭವಿಸುತ್ತಿದ್ದರು. ವಿಶೇಷವಾಗಿ ರಸ್ತೆ ದಾಟುವ ವೇಳೆ ಸಂಭವಿಸಿದ ಅಪಘಾತಗಳಲ್ಲಿ ಹಲವು ಬೈಕ್ ಸವಾರರು ಪ್ರಾಣ ಕಳೆದುಕೊಂಡಿರುವ ಘಟನೆಗಳು ನಡೆದಿವೆ. ಇಬ್ರಾಹೀಂಪುರ ಭಾಗದ ರೈತರು ತಮ್ಮ ಜಮೀನುಗಳಿಗೆ ತೆರಳಲು ರಾಷ್ಟ್ರೀಯ ಹೆದ್ದಾರಿ ದಾಟಬೇಕಾಗಿರುವುದರಿಂದ ಎದುರಾಗುತ್ತಿದ್ದ ಸಮಸ್ಯೆಯೂ ತಮ್ಮ ಗಮನಕ್ಕೆ ಬಂದಿತ್ತು ಎಂದು ಅವರು ತಿಳಿಸಿದರು.
ಈ ಸಮಸ್ಯೆಯನ್ನು ಕೇಂದ್ರ ಸರ್ಕಾರದ ಗಮನಕ್ಕೆ ತಂದು, ಭವಿಷ್ಯದಲ್ಲಿ ಈ ರಾಷ್ಟ್ರೀಯ ಹೆದ್ದಾರಿ ಮತ್ತಷ್ಟು ವಿಸ್ತಾರಗೊಳ್ಳುವ ಸಾಧ್ಯತೆಯನ್ನು ಪರಿಗಣಿಸಿ, ಸುಮಾರು ₹40 ಕೋಟಿ ವೆಚ್ಚದಲ್ಲಿ 6 ಪಥದ ಅಂಡರ್ಪಾಸ್ ಹಾಗೂ ಎರಡೂ ಬದಿಗಳಲ್ಲಿ ಸರ್ವಿಸ್ ರಸ್ತೆಗಳನ್ನು ನಿರ್ಮಿಸಲಾಗುತ್ತಿದೆ ಎಂದು ಸಂಸದರು ಹೇಳಿದರು.
ಈ ಕಾಮಗಾರಿ ಪೂರ್ಣಗೊಂಡ ಬಳಿಕ ಸ್ಥಳೀಯ ರೈತರು, ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರಿಗೆ ರಾಷ್ಟ್ರೀಯ ಹೆದ್ದಾರಿ ದಾಟುವ ಸಂದರ್ಭದಲ್ಲಿ ಎದುರಾಗುತ್ತಿದ್ದ ಅಪಾಯ ಮತ್ತು ಸಂಚಾರದ ಸಮಸ್ಯೆ ಬಹುತೇಕ ನಿವಾರಣೆಯಾಗಲಿದೆ. ಜತೆಗೆ ಇಬ್ರಾಹೀಂಪುರ ಹಾಗೂ ಸುತ್ತಮುತ್ತಲಿನ ಪ್ರದೇಶಗಳ ಜನರಿಗೆ ತಮ್ಮ ಜಮೀನು ಮತ್ತು ವಸತಿ ಪ್ರದೇಶಗಳಿಗೆ ಸುರಕ್ಷಿತವಾಗಿ ಸಂಚರಿಸಲು ಅನುಕೂಲವಾಗಲಿದೆ ಎಂದರು.
ತೋರಿಕೆಯ ಕೆಲಸದಲ್ಲಿ ನನಗೆ ನಂಬಿಕೆ ಇಲ್ಲ
ಜನಪ್ರತಿನಿಧಿಗಳು ಸಣ್ಣಪುಟ್ಟ ಕಾಮಗಾರಿಗಳಿಗೂ ಫೋಟೋ ತೆಗೆಸಿಕೊಂಡು ಪ್ರಚಾರ ಪಡೆಯುವ ಪ್ರವೃತ್ತಿ ಇದೆ. ಆದರೆ ತಾವು ಯಾವತ್ತೂ ತೋರಿಕೆಯ ಕೆಲಸಗಳಿಗೆ ಆದ್ಯತೆ ನೀಡಿಲ್ಲ ಎಂದು ರಮೇಶ ಜಿಗಜಿಣಗಿ ಹೇಳಿದರು.
“ಜನಪ್ರತಿನಿಧಿಗಳು ಶೌಚಾಲಯ ಕಟ್ಟಿಸಿದರೂ ಫೋಟೋ ತೆಗೆಸಿಕೊಂಡು ಪೋಸ್ ಕೊಡುತ್ತಾರೆ. ನಾನು ಯಾವತ್ತೂ ತೋರಿಕೆಯ ಕೆಲಸಗಳನ್ನು ಮಾಡಿಲ್ಲ. ವಿಜಯಪುರ ಜಿಲ್ಲೆಗೆ ಅತಿಹೆಚ್ಚು ಅನುದಾನ ತರುವ ಮೂಲಕ ನನ್ನ ಶಕ್ತಿ ಮೀರಿ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಲು ಪ್ರಯತ್ನಿಸುತ್ತಿದ್ದೇನೆ” ಎಂದು ಅವರು ಹೇಳಿದರು.
ಜನರು ತಮ್ಮ ಮೇಲೆ ಇಟ್ಟಿರುವ ವಿಶ್ವಾಸಕ್ಕೆ ತಕ್ಕಂತೆ ಅಭಿವೃದ್ಧಿ ಕೆಲಸಗಳನ್ನು ಮಾಡುವುದೇ ತಮ್ಮ ಉದ್ದೇಶವಾಗಿದೆ. ರಸ್ತೆ, ಸೇತುವೆ, ಮೂಲಸೌಕರ್ಯ ಸೇರಿದಂತೆ ಜನರಿಗೆ ನೇರವಾಗಿ ಉಪಯೋಗವಾಗುವ ಯೋಜನೆಗಳಿಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದೆ ಎಂದರು.
ರಾಜಕಾರಣದಲ್ಲಿ ಇರಲಿ, ಬಿಡಲಿ ಜನಸೇವೆ ಮುಂದುವರಿಯುತ್ತದೆ
ತಮ್ಮ ರಾಜಕೀಯ ಭವಿಷ್ಯದ ಕುರಿತು ಮಾತನಾಡಿದ ಸಂಸದರು, ಅಧಿಕಾರ ಅಥವಾ ಸ್ಥಾನಮಾನಕ್ಕಿಂತ ಜನಸೇವೆಯೇ ಮುಖ್ಯ ಎಂದು ಹೇಳಿದರು.
“ನಾನು ಮುಂದೆ ರಾಜಕಾರಣದಲ್ಲಿ ಇರಲಿ, ಬಿಡಲಿ, ನನ್ನ ಉಸಿರು ಇರುವವರೆಗೂ ಜನಸೇವೆಯನ್ನು ಮುಂದುವರಿಸುತ್ತೇನೆ. ರಾಜಕಾರಣವನ್ನು ಬಿಟ್ಟರೂ ನಿಮ್ಮ ಸೇವೆ ಮಾಡುವುದನ್ನು ಬಿಡುವುದಿಲ್ಲ” ಎಂದು ರಮೇಶ ಜಿಗಜಿಣಗಿ ಭಾವುಕರಾಗಿ ನುಡಿದರು.
ತಮ್ಮನ್ನು ಹಲವು ದಶಕಗಳಿಂದ ಬೆಂಬಲಿಸುತ್ತಾ ಬಂದಿರುವ ಜಿಲ್ಲೆಯ ಜನರ ಪ್ರೀತಿ ಮತ್ತು ವಿಶ್ವಾಸಕ್ಕೆ ಕೃತಜ್ಞತೆ ಸಲ್ಲಿಸಿದ ಅವರು, ವಿಜಯಪುರ ಜಿಲ್ಲೆಯ ಅಭಿವೃದ್ಧಿಗಾಗಿ ಇನ್ನಷ್ಟು ಕೆಲಸ ಮಾಡುವ ಸಂಕಲ್ಪ ವ್ಯಕ್ತಪಡಿಸಿದರು.
ಜನವರಿಯಲ್ಲಿ ಕಾಮಗಾರಿ ಪೂರ್ಣಗೊಳ್ಳುವ ನಿರೀಕ್ಷೆ
ಅಂಡರ್ಪಾಸ್ ಕಾಮಗಾರಿಯ ಕುರಿತು ಮಾಹಿತಿ ನೀಡಿದ ಎನ್ಎಚ್ಎಐ ಪ್ರಾಜೆಕ್ಟ್ ಡೈರೆಕ್ಟರ್ ಅನಿಲ ಗೊರಡ್ ಅವರು, 1.16 ಕಿ.ಮೀ. ಉದ್ದದ ಅಂಡರ್ಪಾಸ್ ಸೇತುವೆ ನಿರ್ಮಾಣ ಕಾಮಗಾರಿಗೆ ಎನ್.ಎಸ್. ನಾಯಕ ಆ್ಯಂಡ್ ಸನ್ಸ್ ಕಂಪನಿಗೆ ಗುತ್ತಿಗೆ ನೀಡಲಾಗಿದ್ದು, ಕಾಮಗಾರಿ ಪ್ರಗತಿಯಲ್ಲಿದೆ. ಜನವರಿ ವೇಳೆಗೆ ಕಾಮಗಾರಿ ಪೂರ್ಣಗೊಳ್ಳುವ ನಿರೀಕ್ಷೆಯಿದ್ದು, ಬಳಿಕ ಸಾರ್ವಜನಿಕ ಸಂಚಾರಕ್ಕೆ ಮುಕ್ತಗೊಳಿಸಲಾಗುವುದು ಎಂದು ತಿಳಿಸಿದರು.
ಕಾಮಗಾರಿ ಪೂರ್ಣಗೊಂಡ ಬಳಿಕ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಚರಿಸುವ ವಾಹನಗಳ ವೇಗದ ಸಂಚಾರಕ್ಕೆ ಯಾವುದೇ ಅಡಚಣೆ ಉಂಟಾಗದಂತೆ ವ್ಯವಸ್ಥೆಯಾಗುವುದರ ಜೊತೆಗೆ, ಸ್ಥಳೀಯ ವಾಹನ ಸವಾರರು ಹಾಗೂ ಪಾದಚಾರಿಗಳಿಗೆ ಸುರಕ್ಷಿತ ಸಂಚಾರಕ್ಕೆ ಅನುಕೂಲವಾಗಲಿದೆ ಎಂದು ಅಧಿಕಾರಿಗಳು ವಿವರಿಸಿದರು.
ಈ ಸಂದರ್ಭದಲ್ಲಿ ಮಹಾನಗರ ಪಾಲಿಕೆ ಸದಸ್ಯ ಮಲ್ಲಿಕಾರ್ಜುನ (ಕುಮಾರ್) ಗಡಿಗಿ, ಮಳುಗೌಡ ಪಾಟೀಲ, ಬಿಡಿಎ ಮಾಜಿ ಅಧ್ಯಕ್ಷ ಭೀಮಾಶಂಕರ ಹದನೂರು, ಬಿಜೆಪಿ ಮುಖಂಡ ಉಮೇಶ ಕೊಳ್ಕರ್, ಸಂಜಯ್ ಐಹೊಳೆ, ಸೂರ್ಯಕಾಂತ ಗಡಿಗಿ, ಎಸ್.ಎಸ್. ಪಾಟೀಲ, ಪ್ರವೀಣ ಹಳ್ಳಿ, ಶಿವಾನಂದ ಗಡಗಿ, ರಮೇಶ ಭಾವಿಕಟ್ಟಿ, ಭೀಮನಗೌಡ ಲಿಂಗದಳ್ಳಿ, ಮಲ್ಲು ಮಲ್ಲಣ್ಣವರ್, ಡಾ. ನಾಡಗೌಡ, ಶಾಂತವೀರ ಗಲಗಲಿ, ಸುನಿಲಗೌಡ ಬಿರಾದಾರ, ವಿಜಯ್ ಜೋಶಿ, ಸಂಪತ ಕುವಳ್ಳಿ, ಪಾಪು ರಜಪೂತ, ಸಿದ್ದನಗೌಡ ಬಿರಾದಾರ, ಉಪೇಂದ್ರ ದೇಸಾಯಿ, ವಿವೇಕ ಮಠ ಸೇರಿದಂತೆ ಹಲವರು ಉಪಸ್ಥಿತರಿದ್ದರು.
---------------
ಹಿಂದೂಸ್ತಾನ್ ಸಮಾಚಾರ್ / jyothi deshpande