
ಶಿವಮೊಗ್ಗ, 22 ಆಗಸ್ಟ್ (ಹಿ.ಸ.):
ಆ್ಯಂಕರ್:ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದ ಕೃಷಿ ವಿಜ್ಞಾನ ಕೇಂದ್ರದ ವತಿಯಿಂದ ಸೆ.5 ಮತ್ತು 6ರಂದು ನವಿಲೆ ಕೃಷಿ ಮಹಾವಿದ್ಯಾಲಯದ ಆವರಣದಲ್ಲಿ ‘ಸಹ್ಯಾದ್ರಿ ಕೃಷಿ ಸಂತೆ–2026’ ಆಯೋಜಿಸಲಾಗಿದೆ.
ಎರಡು ದಿನಗಳ ಕಾಲ ಬೆಳಗ್ಗೆ 9ರಿಂದ ರಾತ್ರಿ 8ರವರೆಗೆ ನಡೆಯಲಿರುವ ಕೃಷಿ ಸಂತೆಯಲ್ಲಿ ಹಣ್ಣಿನ ಸಸಿಗಳ ನರ್ಸರಿ, ಅಲಂಕಾರಿಕ ಗಿಡಗಳು, ತರಕಾರಿ ಮತ್ತು ಹೂವಿನ ಬೀಜಗಳು, ತಾರಸಿ ಹಾಗೂ ಕೈತೋಟದ ಪರಿಕರಗಳ ಮಾರಾಟ ಸೇರಿದಂತೆ 50ಕ್ಕೂ ಅಧಿಕ ಮಳಿಗೆಗಳು ಇರಲಿವೆ. ಅಲಂಕಾರಿಕ ಮೀನುಗಳು, ಕರಕುಶಲ ವಸ್ತುಗಳು ಹಾಗೂ ವಿವಿಧ ಕೃಷಿ ಉತ್ಪನ್ನಗಳ ಪ್ರದರ್ಶನ ಮತ್ತು ಮಾರಾಟವೂ ನಡೆಯಲಿದೆ.
ಕೃಷಿ ಮತ್ತು ತೋಟಗಾರಿಕೆ ಬೆಳೆಗಳ ಬೀಜ, ಸಸಿಗಳು ಹಾಗೂ ಕೃಷಿ ಪರಿಕರಗಳನ್ನು ಒಂದೇ ಸೂರಿನಡಿ ಪರಿಚಯಿಸುವುದರ ಜೊತೆಗೆ ರೈತರಿಗೆ ತಾಂತ್ರಿಕ ಮಾಹಿತಿ ಒದಗಿಸುವುದು ಮೇಳದ ಉದ್ದೇಶವಾಗಿದೆ. ತಾರಸಿ, ಕೈತೋಟ ಹಾಗೂ ಪೌಷ್ಟಿಕ ತೋಟ ಸ್ಥಾಪಿಸಲು ಆಸಕ್ತರಿಗೂ ಅಗತ್ಯ ಮಾರ್ಗದರ್ಶನ ಮತ್ತು ಪರಿಕರಗಳು ಲಭ್ಯವಿರಲಿವೆ.
ಮಲೆನಾಡಿನ ವಿಶೇಷ ಸಿಹಿ ಖಾದ್ಯ ತೊಡೆದೇವು, ಉತ್ತರ ಕರ್ನಾಟಕದ ತಿಂಡಿ-ತಿನಿಸುಗಳು, ಸಿರಿಧಾನ್ಯ ಉತ್ಪನ್ನಗಳು, ಸ್ಥಳೀಯ ಖಾದ್ಯಗಳು ಹಾಗೂ ಜೇನುತುಪ್ಪದ ಮೌಲ್ಯವರ್ಧಿತ ಉತ್ಪನ್ನಗಳ ಮಳಿಗೆಗಳು ಪ್ರಮುಖ ಆಕರ್ಷಣೆಯಾಗಲಿವೆ.
ಇದಲ್ಲದೆ ಕೃಷಿ ವಿಜ್ಞಾನ ಕೇಂದ್ರದ ಸಮಗ್ರ ಕೃಷಿ ಪದ್ಧತಿ, ಜೇನು ಸಾಕಾಣಿಕೆ, ಕುರಿ ಮತ್ತು ಕೋಳಿ ಸಾಕಾಣಿಕೆ, ಜಲಕೃಷಿ, ಎರೆಹುಳು ಗೊಬ್ಬರ ತಯಾರಿಕೆ, ಕೊಳವೆಬಾವಿ ಜಲ ಮರುಪೂರಣ, ತಾರಸಿ ತೋಟ ಹಾಗೂ ಅಲಂಕಾರಿಕ ಮೀನು ಸಾಕಾಣಿಕೆ ಪ್ರಾತ್ಯಕ್ಷಿಕೆಗಳನ್ನು ವೀಕ್ಷಿಸಿ ಮಾಹಿತಿ ಪಡೆಯಲು ಅವಕಾಶವಿದೆ.
ರೈತರು, ರೈತ ಮಹಿಳೆಯರು, ಯುವ ಕೃಷಿಕರು, ಉದ್ಯಮಿಗಳು, ಗ್ರಾಹಕರು, ವಿದ್ಯಾರ್ಥಿಗಳು, ಯುವಕರು, ಪೋಷಕರು ಹಾಗೂ ಮಕ್ಕಳು ಸೇರಿದಂತೆ ಎಲ್ಲರೂ ಭಾಗವಹಿಸಿ ಮೇಳದ ಸದುಪಯೋಗ ಪಡೆದುಕೊಳ್ಳುವಂತೆ ಕೃಷಿ ವಿಜ್ಞಾನ ಕೇಂದ್ರದ ಹಿರಿಯ ವಿಜ್ಞಾನಿ ಹಾಗೂ ಮುಖ್ಯಸ್ಥರು ಮನವಿ ಮಾಡಿದ್ದಾರೆ.
---------------
ಹಿಂದೂಸ್ತಾನ್ ಸಮಾಚಾರ್ / Rakesh.M.B.