
ವಿಜಯಪುರ, 22 ಆಗಸ್ಟ್ (ಹಿ.ಸ.)
ಆ್ಯಂಕರ್ : ಕಾರ್ಮಿಕರ ಸುದೀರ್ಘ ಹೋರಾಟದ ಫಲವಾಗಿ ಸರ್ಕಾರ ಹೊರಡಿಸಿರುವ ಪರಿಷ್ಕೃತ ಕನಿಷ್ಠ ವೇತನ ಅಧಿಸೂಚನೆಯನ್ನು ಯಾವುದೇ ವಿಳಂಬವಿಲ್ಲದೆ ಜಾರಿಗೊಳಿಸಬೇಕು ಎಂದು ಆಗ್ರಹಿಸಿ ಆಲ್ ಇಂಡಿಯಾ ಯುನೈಟೆಡ್ ಟ್ರೇಡ್ ಯೂನಿಯನ್ ಸೆಂಟರ್ ಸಮಿತಿ ವತಿಯಿಂದ ಬೆಂಗಳೂರಿನ ಫ್ರೀಡಂ ಪಾರ್ಕ್ನಲ್ಲಿ ರಾಜ್ಯಮಟ್ಟದ ಅಹೋರಾತ್ರಿ ಪ್ರತಿಭಟನೆ ಹಾಗೂ ಧರಣಿ ಹಮ್ಮಿಕೊಳ್ಳಲಾಗಿದೆ ಎಂದು ಸಂಘಟನೆಯ ಮುಖಂಡ ಮಲ್ಲಿಕಾರ್ಜುನ ಎಚ್.ಟಿ. ತಿಳಿಸಿದರು.
ವಿಜಯಪುರ ನಗರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಕಾರ್ಮಿಕರ ಹಲವು ವರ್ಷಗಳ ಹೋರಾಟದ ಬಳಿಕ ಸರ್ಕಾರ ಪರಿಷ್ಕೃತ ಕನಿಷ್ಠ ವೇತನಕ್ಕೆ ಸಂಬಂಧಿಸಿದಂತೆ ಅಧಿಸೂಚನೆ ಹೊರಡಿಸಿತ್ತು. ಆದರೆ ಇದೀಗ ಅದನ್ನು ಜಾರಿಗೊಳಿಸುವ ಬದಲು ಉದ್ಯಮಪತಿಗಳ ಒತ್ತಡಕ್ಕೆ ಮಣಿದು ಪುನರ್ ಪರಿಶೀಲನಾ ಸಮಿತಿ ರಚಿಸಿರುವುದು ಕಾರ್ಮಿಕ ವಿರೋಧಿ ಕ್ರಮವಾಗಿದೆ ಎಂದು ಆರೋಪಿಸಿದರು.
ಕನಿಷ್ಠ ವೇತನ ಪರಿಷ್ಕರಣೆಗೆ ಸಂಬಂಧಿಸಿದಂತೆ ಕಾರ್ಮಿಕ ಪ್ರತಿನಿಧಿಗಳು, ಉದ್ಯಮಿಗಳ ಪ್ರತಿನಿಧಿಗಳು ಹಾಗೂ ಕಾರ್ಮಿಕ, ಆದಾಯ, ಕಂದಾಯ ಮತ್ತು ವಾಣಿಜ್ಯ ಇಲಾಖೆಗಳ ಅಧಿಕಾರಿಗಳನ್ನು ಒಳಗೊಂಡ ಕನಿಷ್ಠ ವೇತನ ಸಲಹಾ ಮಂಡಳಿಯಲ್ಲಿ ಹಲವು ಸುತ್ತಿನ ಸಭೆಗಳನ್ನು ನಡೆಸಲಾಗಿತ್ತು. ಈ ಸಭೆಗಳಲ್ಲಿ ನಡೆದ ಚರ್ಚೆ ಹಾಗೂ ಶಿಫಾರಸುಗಳ ಆಧಾರದ ಮೇಲೆ ಸರ್ಕಾರ 2025ರ ಏಪ್ರಿಲ್ 11ರಂದು ಪರಿಷ್ಕೃತ ಕನಿಷ್ಠ ವೇತನದ ಅಧಿಸೂಚನೆ ಹೊರಡಿಸಿತ್ತು ಎಂದು ಅವರು ಹೇಳಿದರು.
ಸರ್ಕಾರವೇ ಅಧಿಸೂಚನೆ ಹೊರಡಿಸಿದ ಬಳಿಕ ಅದನ್ನು ಜಾರಿಗೊಳಿಸದೆ ಮತ್ತೊಮ್ಮೆ ಪರಿಶೀಲನೆಗೆ ಮುಂದಾಗಿರುವುದು ಕಾರ್ಮಿಕರ ಹಕ್ಕುಗಳಿಗೆ ಧಕ್ಕೆ ತರುವಂತಹ ಬೆಳವಣಿಗೆಯಾಗಿದೆ. ಇದರಿಂದ ರಾಜ್ಯದ ವಿವಿಧ ಕ್ಷೇತ್ರಗಳಲ್ಲಿ ದುಡಿಯುತ್ತಿರುವ ಸಾವಿರಾರು ಕಾರ್ಮಿಕರಿಗೆ ಅನ್ಯಾಯವಾಗಲಿದೆ. ಸರ್ಕಾರ ತನ್ನ ನಿರ್ಧಾರವನ್ನು ಮರುಪರಿಶೀಲಿಸಿ, ಈಗಾಗಲೇ ಹೊರಡಿಸಿರುವ ಪರಿಷ್ಕೃತ ಕನಿಷ್ಠ ವೇತನ ಅಧಿಸೂಚನೆಯನ್ನು ಕೂಡಲೇ ಜಾರಿಗೊಳಿಸಬೇಕು ಎಂದು ಒತ್ತಾಯಿಸಿದರು.
ಕನಿಷ್ಠ ವೇತನ ಎನ್ನುವುದು ಕಾರ್ಮಿಕರ ಬದುಕಿನ ಮೂಲಭೂತ ಹಕ್ಕಾಗಿದ್ದು, ಬೆಲೆ ಏರಿಕೆ ಹಾಗೂ ಜೀವನ ನಿರ್ವಹಣೆಯ ವೆಚ್ಚ ಹೆಚ್ಚುತ್ತಿರುವ ಸಂದರ್ಭದಲ್ಲಿ ಪರಿಷ್ಕೃತ ವೇತನ ಜಾರಿಗೊಳಿಸುವುದು ಅತ್ಯಗತ್ಯವಾಗಿದೆ. ಕಾರ್ಮಿಕರ ಜೀವನಮಟ್ಟ ಸುಧಾರಿಸಲು ಸರ್ಕಾರ ಸೂಕ್ತ ಕ್ರಮ ಕೈಗೊಳ್ಳಬೇಕು. ಉದ್ಯಮಿಗಳ ಒತ್ತಡಕ್ಕೆ ಮಣಿದು ಕಾರ್ಮಿಕರ ಹಿತಾಸಕ್ತಿಯನ್ನು ಕಡೆಗಣಿಸುವ ಯಾವುದೇ ಪ್ರಯತ್ನವನ್ನು ಸಂಘಟನೆ ಸಹಿಸುವುದಿಲ್ಲ ಎಂದು ಎಚ್ಚರಿಸಿದರು.
ಸೆಪ್ಟೆಂಬರ್ 9ರಿಂದ ಅಹೋರಾತ್ರಿ ಧರಣಿ
ಪರಿಷ್ಕೃತ ಕನಿಷ್ಠ ವೇತನವನ್ನು ತಕ್ಷಣ ಜಾರಿಗೊಳಿಸುವಂತೆ ಆಗ್ರಹಿಸಿ ಸೆಪ್ಟೆಂಬರ್ 9ರಿಂದ ಬೆಂಗಳೂರಿನ ಫ್ರೀಡಂ ಪಾರ್ಕ್ನಲ್ಲಿ ರಾಜ್ಯಮಟ್ಟದ ಅಹೋರಾತ್ರಿ ಧರಣಿ ಹಾಗೂ ಪ್ರತಿಭಟನೆ ನಡೆಸಲಾಗುವುದು. ರಾಜ್ಯದ ವಿವಿಧ ಜಿಲ್ಲೆಗಳಿಂದ ಕಾರ್ಮಿಕರು, ಕಾರ್ಮಿಕ ಸಂಘಟನೆಗಳ ಪ್ರತಿನಿಧಿಗಳು ಹಾಗೂ ವಿವಿಧ ಕ್ಷೇತ್ರಗಳಲ್ಲಿ ದುಡಿಯುತ್ತಿರುವ ಕಾರ್ಮಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಲಿದ್ದಾರೆ ಎಂದು ಮಲ್ಲಿಕಾರ್ಜುನ ಎಚ್.ಟಿ. ತಿಳಿಸಿದರು.
ಕಾರ್ಮಿಕರ ಹಕ್ಕುಗಳನ್ನು ರಕ್ಷಿಸುವುದು ಸರ್ಕಾರದ ಜವಾಬ್ದಾರಿಯಾಗಿದೆ. ಈಗಾಗಲೇ ಹೊರಡಿಸಿರುವ ಪರಿಷ್ಕೃತ ಕನಿಷ್ಠ ವೇತನ ಅಧಿಸೂಚನೆಯನ್ನು ಜಾರಿಗೊಳಿಸುವ ಮೂಲಕ ಸರ್ಕಾರ ಕಾರ್ಮಿಕರ ಪರವಾಗಿದೆ ಎಂಬುದನ್ನು ಸ್ಪಷ್ಟಪಡಿಸಬೇಕು. ಕಾರ್ಮಿಕ ವಿರೋಧಿ ನಿರ್ಧಾರಗಳನ್ನು ಕೈಬಿಟ್ಟು, ದುಡಿಯುವ ವರ್ಗಕ್ಕೆ ನ್ಯಾಯ ಒದಗಿಸಬೇಕು ಎಂದು ಸಂಘಟನೆ ಸರ್ಕಾರವನ್ನು ಒತ್ತಾಯಿಸಿದೆ.
---------------
ಹಿಂದೂಸ್ತಾನ್ ಸಮಾಚಾರ್ / jyothi deshpande