
ಕೊಪ್ಪಳ, 22 ಆಗಸ್ಟ್ (ಹಿ.ಸ.):
ಆ್ಯಂಕರ್ :
ಕೈಗಾರಿಕೆಗಳ ಮಾಲಿನ್ಯ ನಿಯಂತ್ರಣ, ಬಸಾಪುರ ಕೆರೆಯ ಒತ್ತುವರಿ ತೆರವು ಹಾಗೂ ಪರಿಸರ ಮತ್ತು ಜನರ ಆರೋಗ್ಯ ರಕ್ಷಣೆಗೆ ಆಗ್ರಹಿಸಿ ನಡೆಯುತ್ತಿರುವ ‘ಬಲ್ಡೋಟ ತೊಲಗಿಸಿ’ ಅನಿರ್ದಿಷ್ಟಾವಧಿ ಧರಣಿ 296ನೇ ದಿನಕ್ಕೆ ಕಾಲಿಟ್ಟಿದೆ.
ನಗರಸಭೆ ಆವರಣದಲ್ಲಿ ಜಿಲ್ಲಾ ಬಚಾವೋ ಆಂದೋಲನ ಸಮಿತಿ ಹಾಗೂ ಪರಿಸರ ಹಿತರಕ್ಷಣಾ ವೇದಿಕೆ ಜಂಟಿ ಕ್ರಿಯಾ ವೇದಿಕೆ ವತಿಯಿಂದ ಧರಣಿ ನಡೆಯುತ್ತಿದ್ದು, ಕಾರ್ಖಾನೆಗಳ ಮಾಲಿನ್ಯ ತೊಲಗಿಸುವುದು, ಹೈಕೋರ್ಟ್ ಆದೇಶದಂತೆ ಬಸಾಪುರ ಕೆರೆಯನ್ನು ಒತ್ತುವರಿಯಿಂದ ಮುಕ್ತಗೊಳಿಸುವುದು, ಅಕ್ರಮವಾಗಿ ನೀರು ಬಳಕೆ ಮಾಡುತ್ತಿರುವ ಕಾರ್ಖಾನೆಗಳ ವಿರುದ್ಧ ಕ್ರಮ ಕೈಗೊಳ್ಳುವುದು ಸೇರಿದಂತೆ ಹಲವು ಬೇಡಿಕೆಗಳನ್ನು ಮುಂದಿಟ್ಟುಕೊಂಡು ಹೋರಾಟ ನಡೆಸಲಾಗುತ್ತಿದೆ.
ಧರಣಿಗೆ ಬೆಂಬಲ ವ್ಯಕ್ತಪಡಿಸಿದ ಹಿರಿಯ ಸಾಹಿತಿ ರವಿತೇಜ ಅಬ್ಬಿಗೇರಿ ಮಾತನಾಡಿ, ಇಷ್ಟು ದೀರ್ಘಾವಧಿಗೆ ಹೋರಾಟ ಮುಂದುವರಿಯುತ್ತಿರುವುದು ಜಿಲ್ಲೆಯ ರಾಜಕಾರಣಕ್ಕೆ ಒಳ್ಳೆಯ ಹೆಸರಲ್ಲ. ಜನರ ಜೀವ ಮತ್ತು ಆರೋಗ್ಯ ಕಾಪಾಡುವ ಜವಾಬ್ದಾರಿ ಜನಪ್ರತಿನಿಧಿಗಳು ಹಾಗೂ ಸರ್ಕಾರದ ಮೇಲಿದೆ. ಸರ್ಕಾರ ಕೂಡಲೇ ಪ್ರತಿಭಟನಾಕಾರರ ಬೇಡಿಕೆಗಳಿಗೆ ಸ್ಪಂದಿಸಬೇಕು ಎಂದು ಒತ್ತಾಯಿಸಿದರು.
ಜನರ ಬೇಡಿಕೆಗಳಿಗೆ ಸರ್ಕಾರ ಕಿವಿಗೊಡದಿದ್ದರೆ ಹೋರಾಟ ಮತ್ತಷ್ಟು ತೀವ್ರಗೊಳ್ಳುವುದು ಅನಿವಾರ್ಯವಾಗಲಿದೆ ಎಂದು ಎಚ್ಚರಿಸಿದರು.
ಧರಣಿಯ ಸಂಚಾಲಕ ಮಂಜುನಾಥ ಗೊಂಡಬಾಳ ಮಾತನಾಡಿ, ಬಲ್ಡೋಟ ಕಂಪನಿ ತನ್ನದೇ ಗುತ್ತಿಗೆದಾರರು ಹಾಗೂ ಕಾರ್ಮಿಕರನ್ನು ಬಳಸಿಕೊಂಡು ಕಂಪನಿಗೆ ಬೆಂಬಲದ ವಾತಾವರಣ ಸೃಷ್ಟಿಸಲು ಮುಂದಾಗಿದೆ ಎಂದು ಆರೋಪಿಸಿದರು. 2011ರಿಂದಲೇ ಪೆಲೆಟೈಜೇಶನ್ ಘಟಕ ಕಾರ್ಯನಿರ್ವಹಿಸುತ್ತಿದ್ದು, ಭೂಮಿ ನೀಡಿದ ರೈತರಿಗೆ ಉದ್ಯೋಗ ನೀಡುವ ವಿಚಾರದಲ್ಲಿ ಅನ್ಯಾಯವಾಗಿದೆ ಎಂದು ದೂರಿದರು.
ಕಂಪನಿಯಿಂದ ಉಂಟಾಗುತ್ತಿರುವ ಧೂಳು, ಹೊಗೆ ಹಾಗೂ ಬೂದಿಯಿಂದ ನಗರದ ಜನತೆ ತೊಂದರೆ ಅನುಭವಿಸುತ್ತಿದ್ದಾರೆ. ಮೊದಲು ಮಾಲಿನ್ಯ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳಬೇಕು. ಜೊತೆಗೆ ಕೈಗಾರಿಕಾ ತ್ಯಾಜ್ಯದಿಂದ ಪರಿಸರ ಹಾಗೂ ಜನರ ಆರೋಗ್ಯದ ಮೇಲೆ ಉಂಟಾಗುತ್ತಿರುವ ಪರಿಣಾಮದ ಬಗ್ಗೆ ಸಮಗ್ರ ಅಧ್ಯಯನ ನಡೆಸಬೇಕು ಎಂದು ಆಗ್ರಹಿಸಿದರು.
ಹಿರೇಬಗನಾಳ, ಅಲ್ಲಾನಗರ ಸುತ್ತಲಿನ ಕಾರ್ಖಾನೆಗಳನ್ನು ನಿರ್ಜನ ಪ್ರದೇಶಕ್ಕೆ ಸ್ಥಳಾಂತರಿಸುವುದು, ಧೂಳುಬಾಧಿತ 22 ಗ್ರಾಮಗಳ ಪರಿಸರ ಮತ್ತು ಜನರ ಆರೋಗ್ಯದ ಕುರಿತು ಭಾರತೀಯ ವಿಜ್ಞಾನ ಸಂಸ್ಥೆ ಹಾಗೂ ಏಮ್ಸ್ ಸಂಸ್ಥೆಗಳಿಂದ ಸಮೀಕ್ಷೆ ನಡೆಸುವುದು ಮತ್ತು ಬಾಧಿತ ಗ್ರಾಮಗಳ ಪುನರುಜ್ಜೀವನಕ್ಕೆ ವಿಶೇಷ ಅನುದಾನ ನೀಡುವುದು ಸೇರಿದಂತೆ ಹಲವು ಬೇಡಿಕೆಗಳನ್ನು ಈಡೇರಿಸುವಂತೆ ಪ್ರತಿಭಟನಾಕಾರರು ಒತ್ತಾಯಿಸಿದರು.
ಧರಣಿಯಲ್ಲಿ ಸಾಹಿತಿ ಮಹಾಂತೇಶ ಮಲ್ಲನಗೌಡರ, ಮಲ್ಲಿಕಾರ್ಜುನ ಬಿ. ಗೋನಾಳ, ಪ್ರಕಾಶಕ ಡಿ.ಎಂ. ಬಡಿಗೇರ, ಮೈಲೈಕ್ ಜಿಲಾನ್ ಕಿಲ್ಲೇದಾರ, ರಾಜಶೇಖರ ಏಳುಭಾವಿ, ಶಿವಾನಂದಯ್ಯ ಬೀಳಗಿಮಠ, ಎಸ್. ಮಹಾದೇವಪ್ಪ ಮಾವಿನಮಡು ಸೇರಿದಂತೆ ಹಲವರು ಉಪಸ್ಥಿತರಿದ್ದರು.
---------------
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್