
ಅಲಪುಳ್ಳ,(ಕೇರಳಂ) 22 ಆಗಸ್ಟ್ (ಹಿ.ಸ.):
ಆ್ಯಂಕರ್:
ಕರ್ನಾಟಕ ಹಾಗೂ ಕೇರಳಂ ರಾಜ್ಯಗಳು ಸಹೋದರರಂತೆ ಪರಸ್ಪರ ಸಹಕಾರದೊಂದಿಗೆ ಅಭಿವೃದ್ಧಿಯ ಪಥದಲ್ಲಿ ಸಾಗಬೇಕು ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಕರೆ ನೀಡಿದರು.
ಕೇರಳಂದ ಅಲಪುಳ್ಳದಲ್ಲಿ ಶನಿವಾರ ನಡೆದ 72ನೇ ಆವೃತ್ತಿಯ ನೆಹರೂ ಟ್ರೋಫಿ ಬೋಟ್ ರೇಸ್ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕರ್ನಾಟಕ ಮತ್ತು ಕೇರಳಂ ಎರಡೂ ರಾಜ್ಯಗಳು ನೀರು, ಹವಾಮಾನ ಹಾಗೂ ಸಂಸ್ಕೃತಿಯನ್ನು ಪರಸ್ಪರ ಹಂಚಿಕೊಳ್ಳುತ್ತವೆ. ಎರಡೂ ರಾಜ್ಯಗಳ ನಡುವೆ ಸಹೋದರತ್ವದ ಸಂಬಂಧ ಮತ್ತಷ್ಟು ಬಲಗೊಳ್ಳಬೇಕು ಎಂದರು.
ನೆಹರೂ ಟ್ರೋಫಿ ಬೋಟ್ ರೇಸ್‌ನಂತಹ ಐತಿಹಾಸಿಕ ಕ್ರೀಡಾಕೂಟದಲ್ಲಿ ಭಾಗವಹಿಸಿರುವುದು ಸಂತಸ ತಂದಿದೆ. ಕರ್ನಾಟಕದಲ್ಲಿ ಮೈಸೂರು ದಸರಾವನ್ನು ಸಂಭ್ರಮಿಸುವ ರೀತಿಯಲ್ಲೇ ಕೇರಳದಲ್ಲಿ ಈ ಬೋಟ್ ರೇಸ್ ಅನ್ನು ಜನರು ಉತ್ಸವದಂತೆ ಆಚರಿಸುತ್ತಾರೆ ಎಂದು ಶಿವಕುಮಾರ್ ಹೇಳಿದರು.
ಭಾರತ್ ಜೋಡೋ ಯಾತ್ರೆಯ ಸಂದರ್ಭದಲ್ಲಿ ರಾಹುಲ್ ಗಾಂಧಿ ಅವರೂ ಈ ಸ್ಪರ್ಧೆಯಲ್ಲಿ ಭಾಗವಹಿಸಿದ್ದರು. ಕರ್ನಾಟಕವು ಇಂದಿರಾ ಗಾಂಧಿ ಹಾಗೂ ಸೋನಿಯಾ ಗಾಂಧಿ ಅವರಿಗೆ ಸಂಸತ್ ಪ್ರವೇಶಿಸಲು ವೇದಿಕೆಯಾದರೆ, ಕೇರಳವು ರಾಹುಲ್ ಗಾಂಧಿ ಹಾಗೂ ಪ್ರಿಯಾಂಕಾ ಗಾಂಧಿ ಅವರಿಗೆ ಸಂಸತ್ ಪ್ರವೇಶಿಸಲು ವೇದಿಕೆಯಾಗಿದೆ ಎಂದು ಹೇಳಿದರು.
ಕಾಂಗ್ರೆಸ್ ಕೊಟ್ಟ ಮಾತು ಉಳಿಸಿಕೊಳ್ಳುತ್ತದೆ
ಸತೀಶನ್ ಅವರ ನೇತೃತ್ವದ ಸರ್ಕಾರ ಕೇರಳದ ಕಲ್ಯಾಣಕ್ಕಾಗಿ ಶ್ರಮಿಸಲಿದ್ದು, ನೀಡಿರುವ ಭರವಸೆಗಳನ್ನು ಈಡೇರಿಸಲಿದೆ. ಯುಡಿಎಫ್ ಮೈತ್ರಿಕೂಟ ಒಗ್ಗಟ್ಟಿನಿಂದ ಕಾರ್ಯನಿರ್ವಹಿಸಿ, ರಾಹುಲ್ ಗಾಂಧಿ ಅವರ ನೇತೃತ್ವದಲ್ಲಿ ರಾಷ್ಟ್ರಮಟ್ಟದಲ್ಲಿ ಹೋರಾಟ ನಡೆಸಲಿದೆ ಎಂದರು.
ನೆಹರೂ ಟ್ರೋಫಿ ಬೋಟ್ ರೇಸ್‌ನ ಎಲ್ಲ ಸ್ಪರ್ಧಿಗಳು ಹಾಗೂ ಆಡಳಿತ ಮಂಡಳಿಗೆ ಶುಭಾಶಯ ತಿಳಿಸಿದ ಶಿವಕುಮಾರ್, ಕರ್ನಾಟಕ ಕೇರಳದೊಂದಿಗೆ ಸದಾ ನಿಲ್ಲಲಿದೆ. ಕೇರಳವೂ ಕರ್ನಾಟಕದೊಂದಿಗೆ ಕೈಜೋಡಿಸಿ ಎರಡೂ ರಾಜ್ಯಗಳು ಸಹೋದರರಂತೆ ಮುನ್ನಡೆಯಬೇಕು ಎಂದು ಕರೆ ನೀಡಿದರು
---------------
ಹಿಂದೂಸ್ತಾನ್ ಸಮಾಚಾರ್ / Rakesh.M.B.