
ಬೆಂಗಳೂರು, 22 ಆಗಸ್ಟ್ (ಹಿ.ಸ.):
ಆ್ಯಂಕರ್:ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ನೇತೃತ್ವದ ರಾಜ್ಯ ಸರ್ಕಾರ ನಾಗರಿಕ ಬಳಕೆಗೆ ಮೀಸಲಾದ ಉದ್ಯಾನಗಳನ್ನೂ ಲೂಟಿ ಮಾಡಲು ಮುಂದಾಗಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಆರೋಪಿಸಿದ್ದಾರೆ.
ತೋಟಗಾರಿಕೆ ಇಲಾಖೆಯ ಸರ್ಕಾರಿ ಉದ್ಯಾನಗಳ ರಕ್ಷಣೆ ಕಾಯಿದೆ–1975ಕ್ಕೆ ತಿದ್ದುಪಡಿ ತರಲು ಸಚಿವ ಸಂಪುಟ ಅನುಮೋದನೆ ನೀಡಿದ್ದು, ಪ್ರಸಕ್ತ ಅಧಿವೇಶನದಲ್ಲೇ ಮಸೂದೆ ಮಂಡಿಸಲು ಸರ್ಕಾರ ಸಿದ್ಧತೆ ನಡೆಸಿದೆ. ರಾಜ್ಯದಲ್ಲಿರುವ ಉದ್ಯಾನಗಳ ಒಟ್ಟು ವಿಸ್ತೀರ್ಣದ ಶೇ.5ರಷ್ಟನ್ನು ಮಾರಾಟ, ವಿನಿಮಯ, ಉಡುಗೊರೆ ಅಥವಾ ಅಡಮಾನ ಇಡಲು ಅವಕಾಶ ಕಲ್ಪಿಸುವ ಪ್ರಸ್ತಾವನೆ ತಿದ್ದುಪಡಿ ಮಸೂದೆಯಲ್ಲಿದೆ ಎಂದು ವಿಜಯೇಂದ್ರ ಹೇಳಿದ್ದಾರೆ.
ಪರಿಸರ ಸಂರಕ್ಷಣೆ, ನಾಗರಿಕರ ಆರೋಗ್ಯ ಮತ್ತು ಸಾರ್ವಜನಿಕ ಹಿತಾಸಕ್ತಿಗಾಗಿ ಮೀಸಲಾದ ಉದ್ಯಾನಗಳನ್ನು ಖಾಸಗಿ ಹಿತಾಸಕ್ತಿಗಳಿಗೆ ಬಳಸಿಕೊಳ್ಳಲು ಸರ್ಕಾರ ವ್ಯವಸ್ಥಿತವಾಗಿ ಮುಂದಾಗಿದೆ ಎಂದು ಅವರು ಟೀಕಿಸಿದ್ದಾರೆ.
ಈ ಹಿಂದೆ ಕೆರೆಗಳ ಬಫರ್ ವಲಯವನ್ನು ಕಡಿಮೆ ಮಾಡುವ ಮೂಲಕ ರಿಯಲ್ ಎಸ್ಟೇಟ್ ಹಿತಾಸಕ್ತಿಗಳಿಗೆ ಅನುಕೂಲ ಮಾಡಿಕೊಡಲಾಗಿತ್ತು. ಇದೀಗ ಉದ್ಯಾನಗಳ ಮೇಲೂ ಕಣ್ಣಿಟ್ಟಿರುವ ಸರ್ಕಾರಕ್ಕೆ ನೆಲ, ಜಲ, ವಾಯು ಮತ್ತು ಪರಿಸರ ಸಂರಕ್ಷಣೆಯ ಬಗ್ಗೆ ಕಾಳಜಿಯಿಲ್ಲ ಎಂದು ವಿಜಯೇಂದ್ರ ಆರೋಪಿಸಿದ್ದಾರೆ.
ಪರಿಸರ ಹಾಗೂ ನಾಗರಿಕರ ಹಿತಕ್ಕೆ ಮಾರಕವಾಗಿರುವ ಉದ್ದೇಶಿತ ತಿದ್ದುಪಡಿ ಮಸೂದೆಯನ್ನು ತಡೆಯಲು ಬಿಜೆಪಿ ಎಲ್ಲ ರೀತಿಯ ಹೋರಾಟ ನಡೆಸಲಿದೆ ಎಂದು ಅವರು ಎಕ್ಸ್ ಮೂಲಕ ತಿಳಿಸಿದ್ದಾರೆ.
---------------
ಹಿಂದೂಸ್ತಾನ್ ಸಮಾಚಾರ್ / Rakesh.M.B.