
ವಿಜಯಪುರ, 22 ಆಗಸ್ಟ್ (ಹಿ.ಸ.)
ಆ್ಯಂಕರ್ : ವರಮಹಾಲಕ್ಷ್ಮೀ ಹಬ್ಬದ ಅಂಗವಾಗಿ ವಿಜೃಂಭಣೆಯಿಂದ ಪೂಜೆ ಹಾಗೂ ಜಾತ್ರೆ ನಡೆಸಿದ ಬೆನ್ನಲ್ಲೇ ದೇವಾಲಯದಲ್ಲಿ ಕಳ್ಳತನ ನಡೆದಿರುವ ಘಟನೆ ವಿಜಯಪುರ ನಗರದ ಗಚ್ಚಿನಕಟ್ಟಿ ಕಾಲೋನಿ ಸಮೀಪದ ಲಕ್ಷ್ಮೀನಗರದಲ್ಲಿ ನಡೆದಿದೆ.
ಲಕ್ಷ್ಮೀನಗರದಲ್ಲಿರುವ ವರಮಹಾಲಕ್ಷ್ಮೀ ದೇವಾಲಯದಲ್ಲಿ ಶುಕ್ರವಾರ ಬೆಳಿಗ್ಗೆ ಭಕ್ತರು ಹಾಗೂ ಬಡಾವಣೆ ನಿವಾಸಿಗಳು ಸಂಭ್ರಮದಿಂದ ವರಮಹಾಲಕ್ಷ್ಮೀ ಪೂಜೆ ನೆರವೇರಿಸಿದ್ದರು. ಜಾತ್ರೆಯ ಅಂಗವಾಗಿ ದೇವಾಲಯದಲ್ಲಿ ವಿಶೇಷ ಪೂಜೆ, ಧಾರ್ಮಿಕ ಕಾರ್ಯಕ್ರಮಗಳು ನಡೆದಿದ್ದವು. ಹಬ್ಬದ ಹಿನ್ನೆಲೆಯಲ್ಲಿ ದೇವಾಲಯಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಆಗಮಿಸಿ ದೇವಿಯ ದರ್ಶನ ಪಡೆದು ಪೂಜೆ ಸಲ್ಲಿಸಿದ್ದರು.
ಆದರೆ, ಹಬ್ಬದ ಸಂಭ್ರಮ ಮುಗಿದ ಕೆಲವೇ ಗಂಟೆಗಳಲ್ಲಿ ದೇವಾಲಯದಲ್ಲಿ ಕಳ್ಳರ ಕೈಚಳಕ ತೋರಿದೆ. ತಡರಾತ್ರಿ ದೇವಾಲಯಕ್ಕೆ ನುಗ್ಗಿದ ಕಳ್ಳರು ದೇವಿಯ ಮೂರ್ತಿಯ ಮೇಲಿದ್ದ ಚಿನ್ನ ಹಾಗೂ ಬೆಳ್ಳಿ ಆಭರಣಗಳನ್ನು ಕಳವು ಮಾಡಿಕೊಂಡು ಪರಾರಿಯಾಗಿದ್ದಾರೆ ಎಂದು ತಿಳಿದು ಬಂದಿದೆ.
ಜಾತ್ರೆಯ ಹಿನ್ನೆಲೆಯಲ್ಲಿ ರಾತ್ರಿ ವೇಳೆಯೂ ದೇವಾಲಯದ ಬಾಗಿಲನ್ನು ತೆರೆದಿಟ್ಟಿದ್ದನ್ನು ದುರುಪಯೋಗಪಡಿಸಿಕೊಂಡ ಕಳ್ಳರು ದೇವಾಲಯ ಪ್ರವೇಶಿಸಿ ಆಭರಣಗಳನ್ನು ಕದ್ದಿರುವ ಶಂಕೆ ವ್ಯಕ್ತವಾಗಿದೆ. ಕಳುವಾದ ಆಭರಣಗಳ ಒಟ್ಟು ಮೌಲ್ಯ ಲಕ್ಷಾಂತರ ರೂಪಾಯಿ ಇರಬಹುದು ಎಂದು ಅಂದಾಜಿಸಲಾಗಿದೆ. ಕಳ್ಳತನ ಬೆಳಕಿಗೆ ಬರುತ್ತಿದ್ದಂತೆ ಬಡಾವಣೆ ನಿವಾಸಿಗಳು ಆತಂಕಗೊಂಡಿದ್ದಾರೆ.
ಘಟನೆಯ ಮಾಹಿತಿ ತಿಳಿದು ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ದೇವಾಲಯದ ಸುತ್ತಮುತ್ತಲಿನ ಪ್ರದೇಶದಲ್ಲಿರುವ ಸಿಸಿಟಿವಿ ಕ್ಯಾಮೆರಾಗಳ ದೃಶ್ಯಾವಳಿಗಳನ್ನು ಪರಿಶೀಲಿಸಲಾಗುತ್ತಿದ್ದು, ಕಳ್ಳರ ಚಲನವಲನ ಹಾಗೂ ಗುರುತು ಪತ್ತೆಹಚ್ಚಲು ಪೊಲೀಸರು ಮುಂದಾಗಿದ್ದಾರೆ.
ಘಟನೆ ಕುರಿತು ಎಪಿಎಂಸಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ. ಕಳ್ಳರನ್ನು ಶೀಘ್ರವಾಗಿ ಪತ್ತೆಹಚ್ಚಿ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ವಿಜಯಪುರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮಣ ನಿಂಬರಗಿ ತಿಳಿಸಿದ್ದಾರೆ.
ವರಮಹಾಲಕ್ಷ್ಮೀ ಹಬ್ಬದಂದು ಭಕ್ತಿಭಾವದಿಂದ ಪೂಜೆ ಸಲ್ಲಿಸಿ ದೇವಿಯ ಆಭರಣಗಳನ್ನು ಅಲಂಕರಿಸಿದ್ದ ದೇವಾಲಯದಲ್ಲೇ ಕಳ್ಳತನ ನಡೆದಿರುವುದು ಸ್ಥಳೀಯರಲ್ಲಿ ಬೇಸರ ಹಾಗೂ ಆತಂಕಕ್ಕೆ ಕಾರಣವಾಗಿದೆ. ಕಳ್ಳರನ್ನು ಶೀಘ್ರ ಪತ್ತೆಹಚ್ಚಿ ಕಳುವಾದ ಚಿನ್ನಾಭರಣಗಳನ್ನು ವಶಪಡಿಸಿಕೊಳ್ಳಬೇಕು ಎಂದು ಬಡಾವಣೆ ನಿವಾಸಿಗಳು ಪೊಲೀಸರನ್ನು ಒತ್ತಾಯಿಸಿದ್ದಾರೆ.
---------------
ಹಿಂದೂಸ್ತಾನ್ ಸಮಾಚಾರ್ / jyothi deshpande