
ಕೋಲಾರ: ಆಗಸ್ಟ್ ೨೨ (ಹಿ.ಸ.)
ಆ್ಯಂಕರ್ : ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾದ ‘ಭಾರತ್ ಜೋಡೋ ಯುವ ಸಂಘ’ಗಳ ರಚನೆ ಪ್ರಕ್ರಿಯೆಗೆ ಕೋಲಾರ ಜಿಲ್ಲೆಯಲ್ಲಿ ಚಾಲನೆ ನೀಡಲಾಗಿದೆ. ಈ ತಿಂಗಳ ಅಂತ್ಯದೊಳಗೆ ಅಗತ್ಯ ಕಾರ್ಯಕಾರಿ ಸಮಿತಿಗಳನ್ನು ರಚಿಸಲು ಅರ್ಹ ಯುವಜನರನ್ನು ಶೀಘ್ರವಾಗಿ ನೋಂದಾಯಿಸಬೇಕೆಂದು ಕೋಲಾರ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಾದ ಡಾ.ಪ್ರವೀಣ್ ಪಿ ಬಾಗೇವಾಡಿರವರು ಸೂಚನೆ ನೀಡಿದ್ದಾರೆ.
ಯುವಜನರಲ್ಲಿ ಕ್ರೀಡೆ, ಸಂಸ್ಕೃತಿ, ವೈಜ್ಞಾನಿಕ ಮನೋಭಾವ ಹಾಗೂ ಸಾಮಾಜಿಕ ಸಾಮರಸ್ಯವನ್ನು ಉತ್ತೇಜಿಸುವ ಉದ್ದೇಶದಿಂದ ರಾಜ್ಯದಾದ್ಯಂತ ಒಟ್ಟು ೧೦,೦೦೦ ಯುವ ಸಂಘಗಳನ್ನು ಸ್ಥಾಪಿಸುವ ಗುರಿ ಹೊಂದಲಾಗಿದೆ. ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಸರಾಸರಿ ೬೦೦೦ ಸಂಘಗಳನ್ನು ಹಾಗೂ ನಗರ ವಾರ್ಡ್ ಗಳ ವ್ಯಾಪ್ತಿಯಲ್ಲಿ ಸರಾಸರಿ ೪೦೦೦ ಸಂಘಗಳನ್ನು ರಾಜ್ಯ ಸರ್ಕಾರದಿಂದ ಸ್ಥಾಪಿಸಲು ಉದ್ದೇಶಿಸಲಾಗಿದೆ. ಯೋಜನೆಯನ್ನು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಮುಖಾಂತರ ಅನುಷ್ಠಾನಗೊಳಿಸಲು ತೀರ್ಮಾನಿಸಲಾಗಿದೆ. ಈ ಸಂಘಗಳಿಗೆ ಸರ್ಕಾರ ಒಂದು ಸಾವಿರ ಕೋಟಿ ರೂ.ಗಳನ್ನು ಮೀಸಲಿಟ್ಟಿದ್ದು, ಪ್ರತಿ ಸಂಘದ ಕಾರ್ಯಚಟುವಟಿಕೆಗಳಿಗೆ ತಲಾ ೧೦ ಲಕ್ಷ ರೂ. ಅನುದಾನ ನೀಡಲಾಗುತ್ತಿದೆ.
ಇದರ ಭಾಗವಾಗಿ ಕೋಲಾರ ಜಿಲ್ಲೆಯ ಪ್ರತಿಯೊಂದು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ‘ಭಾರತ್ ಜೋಡೋ ಯುವ ಸಂಘ’ಗಳನ್ನು ಸ್ಥಾಪಿಸಲಾಗುತ್ತಿದೆ. ಪ್ರತಿಯೊಂದು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಸರಾಸರಿ ೪೦೦೦ ಜನಸಂಖ್ಯೆಗೆ ಒಂದರಂತೆ ಭಾರತ್ ಜೋಡೋ ಯುವ ಸಂಘ ಸ್ಥಾಪನೆಗೆ ತಿಳಿಸಲಾಗಿದೆ. ಹೆಚ್ಚಿನ ಯುವ ಜನರನ್ನು ನೊಂದಾಯಿಸಲು ವ್ಯಾಪಕವಾಗಿ ಪ್ರಚಾರ ಮಾಡಲು ಗ್ರಾಮ ಪಂಚಾಯತಿಗಳಿಗೆ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ಸೂಚಿಸಿದ್ದಾರೆ.
ಭಾರತ್ ಜೋಡೋ ಯುವ ಸಂಘ ರಚನೆ ಸರ್ಕಾರದ ಕನಸಿನ ಯೋಜನೆಯಾಗಿದ್ದು, ಯುವಜನರ ಸಬಲೀಕರಣ ಮಾಡುವುದು ಇದರ ಮುಖ್ಯ ಉದ್ದೇಶವಾಗಿದೆ. ಅದಕ್ಕಾಗಿ ಯುವಕರಲ್ಲಿ ನಾಯಕತ್ವ ಬೆಳೆಸುವುದು ಮತ್ತು ಕೌಶಲ್ಯ ಅಭಿವೃದ್ಧಿಪಡಿಸುವುದು, ಕ್ರೀಡೆ, ಆರೋಗ್ಯ ಮತ್ತು ದೈಹಿಕ ಕ್ಷಮತೆಯನ್ನು ಉತ್ತೇಜಿಸುವುದು, ಸಂವಿಧಾನದ ಮೌಲ್ಯಗಳ ಬಗ್ಗೆ ಅರಿವು ಮೂಡಿಸುವುದು. ಪರಿಸರ ಮತ್ತು ಪ್ರಕೃತಿಯನ್ನು ರಕ್ಷಿಸಿ ಸಂರಕ್ಷಿಸುವುದು, ಸಾಮಾಜಿಕ ಸೌಹಾರ್ದತೆ ಮತ್ತು ಸಹಬಾಳ್ವೆಯನ್ನು ಬೆಳೆಸುವುದು. ಸ್ಥಳೀಯ ಅಭಿವೃದ್ಧಿಯಲ್ಲಿ ಯುವಕರನ್ನು ಸಕ್ರಿಯವಾಗಿ ತೊಡಗಿಸಿಕೊಳ್ಳುವುದು ಸದ್ದುದೇಶವನ್ನು ಹೊಂದಿದೆ.
ಭಾರತ್ ಜೋಡೋ ಯುವ ಸಂಘದಲ್ಲಿ ೧೬ ರಿಂದ ೩೫ ವರ್ಷದೊಳಗಿನ ಯುವಕ-ಯುವತಿಯರು ನೊಂದಣಿ ಮಾಡಿಕೊಂಡು ಸದಸ್ಯರಾಗಬಹುದಾಗಿದೆ. ನೋಂದಣಿಗೆ ಆಧಾರ್ ಕಾರ್ಡ್ ಕಡ್ಡಾಯವಾಗಿದ್ದು, ನೋಂದಣಿ ಶುಲ್ಕ ೧೦/- ಆಗಿರುತ್ತದೆ. ಪ್ರತಿ ಸಂಘದ ರಚನೆಗೆ ಕನಿಷ್ಠ ೧೦೦ ಯುವ ಸದಸ್ಯರಿರಬೇಕು. ಗರಿಷ್ಠ ಸಂಖ್ಯೆಗೆ ಮಿತಿ ಇರುವುದಿಲ್ಲ. ಈ ಸಂಘಗಳನ್ನು ‘ಸೊಸೈಟೀಸ್ ರಿಜಿಸ್ಟ್ರೇಷನ್ ಆಕ್ಟ್’ ಅಡಿಯಲ್ಲಿ ನೋಂದಾಯಿಸಿ, ಪ್ರತ್ಯೇಕ ಬ್ಯಾಂಕ್ ಖಾತೆಯನ್ನು ತೆರೆಯಲಾಗುತ್ತದೆ. ಅರ್ಜಿದಾರರು ಆಯಾ ಗ್ರಾಮ ಪಂಚಾಯಿತಿ ನಿವಾಸಿಯಾಗಿರಬೇಕು. ಒಬ್ಬ ವ್ಯಕ್ತಿಯು ಒಂದು ಸಂಘಕ್ಕೆ ಮಾತ್ರ ಸದಸ್ಯರಾಗಲು ಅವಕಾಶವಿರುತ್ತದೆ.
ಅರ್ಹ ಯುವಕ-ಯುವತಿಯರು ತಮ್ಮ ಮೊಬೈಲ್ ಮೂಲಕ ವೆಬ್ಸೈಟ್ಗೆ ಭೇಟಿ ನೀಡಿ ನೇರವಾಗಿ ನೋಂದಾಯಿಸಿಕೊಳ್ಳಬಹುದು. ಅಥವಾ ಹತ್ತಿರದ ಗ್ರಾಮ ಒನ್, ಕರ್ನಾಟಕ ಒನ್ ಹಾಗೂ ನಾಗರಿಕ ಸೇವಾ ಕೇಂದ್ರಗಳ ಮೂಲಕ ಆನ್ಲೈನ್ನಲ್ಲಿ ಅರ್ಜಿ ಸಲ್ಲಿಸಬಹುದು. ಕೋಲಾರ ಜಿಲ್ಲೆಯ ಗರಿಷ್ಠ ಸಂಖ್ಯೆಯ ಯುವಜನರು ತಕ್ಷಣವೇ ನೋಂದಾಯಿಸಿಕೊಂಡು, ಈ ಅಭಿಯಾನದಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳಬೇಕೆಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ತಿಳಿಸಿದ್ದಾರೆ.
ಭಾರತ್ ಜೋಡೋ ಯುವ ಸಂಘದ ಮೂಲಕ ಯುವಕರನ್ನು ಒಂದೇ ವೇದಿಕೆಯಲ್ಲಿ ಒಗ್ಗೂಡಿಸಿ, ನಾಯಕತ್ವದ ಗುಣಗಳನ್ನು ಬೆಳೆಸುವ ಮೂಲಕ ಮತ್ತು ಸಮಾಜದಲ್ಲಿ ಸಕಾರಾತ್ಮಕ ಬದಲಾವಣೆ ತರುವ ಉದ್ದೇಶ ಹೊಂದಿದೆ. ಯುವಶಕ್ತಿಯನ್ನು ಸೃಜನಶೀಲ ಹಾಗೂ ಸಾಮಾಜಿಕ ಕಾರ್ಯಗಳಲ್ಲಿ ತೊಡಗಿಸಲು ಈ ಯೋಜನೆ ಅತ್ಯುತ್ತಮ ವೇದಿಕೆಯಾಗಿದೆ ಎಂದಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್