
ಬಾಗಲಕೋಟೆ, 22 ಆಗಸ್ಟ್ (ಹಿ.ಸ.)
ಆ್ಯಂಕರ್ : ಬಾಗಲಕೋಟೆ ನಗರದ ವಿದ್ಯಾಗಿರಿ ಬಡಾವಣೆಯ 7ನೇ ಅಡ್ಡ ರಸ್ತೆಯಲ್ಲಿ ಚರಂಡಿಯ ಮುಚ್ಚಳ ತೆರೆದ ಸ್ಥಿತಿಯಲ್ಲಿದ್ದು, ಸಾರ್ವಜನಿಕರ ಸುರಕ್ಷತೆಗೆ ಗಂಭೀರ ಅಪಾಯ ಉಂಟಾಗಿದೆ. ಕಳೆದ ಒಂದು ವಾರದಿಂದ ಚರಂಡಿ ಮುಚ್ಚಳ ತೆರೆದಿದ್ದರೂ ಸಂಬಂಧಪಟ್ಟ ಅಧಿಕಾರಿಗಳು ಹಾಗೂ ಸ್ಥಳೀಯ ಆಡಳಿತ ಈ ಸಮಸ್ಯೆಯತ್ತ ಗಮನ ಹರಿಸಿಲ್ಲ ಎಂಬ ಆರೋಪ ಕೇಳಿಬಂದಿದೆ.
ರಸ್ತೆಯಲ್ಲಿರುವ ತೆರೆದ ಚರಂಡಿ ಪಾದಚಾರಿಗಳು ಹಾಗೂ ವಾಹನ ಸವಾರರಿಗೆ ಅಪಾಯಕಾರಿಯಾಗಿ ಪರಿಣಮಿಸಿದೆ. ಹಗಲು ಹೊತ್ತಿನಲ್ಲಿಯೇ ರಸ್ತೆ ಮೂಲಕ ಸಂಚರಿಸುವುದು ಕಷ್ಟಕರವಾಗಿದ್ದು, ರಾತ್ರಿ ಸಮಯದಲ್ಲಿ ಪರಿಸ್ಥಿತಿ ಮತ್ತಷ್ಟು ಭೀಕರವಾಗಿದೆ. ಸಮರ್ಪಕ ಬೆಳಕಿನ ವ್ಯವಸ್ಥೆ ಇಲ್ಲದ ಸಂದರ್ಭದಲ್ಲಿ ತೆರೆದಿರುವ ಚರಂಡಿ ಕಾಣಿಸದೆ ವಾಹನ ಸವಾರರು ಹಾಗೂ ಪಾದಚಾರಿಗಳು ಅಪಾಯಕ್ಕೆ ಸಿಲುಕುವ ಸಾಧ್ಯತೆ ಇದೆ.
ವಿಶೇಷವಾಗಿ ದ್ವಿಚಕ್ರ ವಾಹನ ಸವಾರರು ಈ ರಸ್ತೆಯಲ್ಲಿ ಸಂಚರಿಸುವಾಗ ಎಚ್ಚರಿಕೆ ವಹಿಸಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಸ್ವಲ್ಪ ಎಚ್ಚರ ತಪ್ಪಿದರೂ ವಾಹನ ಚರಂಡಿಗೆ ಬೀಳುವ ಅಥವಾ ಪಾದಚಾರಿಗಳು ಆಯತಪ್ಪಿ ಚರಂಡಿಗೆ ಜಾರುವ ಆತಂಕ ಎದುರಾಗಿದೆ. ಹೀಗಾಗಿ ತೆರೆದ ಚರಂಡಿ ಸಾರ್ವಜನಿಕರಿಗೆ ‘ಯಮನ ಊರಿಗೆ ಆಹ್ವಾನ’ ನೀಡಿದಂತಾಗಿದೆ ಎಂದು ಸ್ಥಳೀಯರು ಆತಂಕ ವ್ಯಕ್ತಪಡಿಸಿದ್ದಾರೆ.
ಕಳೆದ ಒಂದು ವಾರದಿಂದ ಸಮಸ್ಯೆ ಮುಂದುವರಿದಿದ್ದರೂ ಇದುವರೆಗೆ ಚರಂಡಿಗೆ ಮುಚ್ಚಳ ಅಳವಡಿಸದಿರುವುದು ಸಾರ್ವಜನಿಕರ ಅಸಮಾಧಾನಕ್ಕೆ ಕಾರಣವಾಗಿದೆ. ಅಪಘಾತ ಸಂಭವಿಸಿದ ನಂತರವೇ ಅಧಿಕಾರಿಗಳು ಎಚ್ಚೆತ್ತುಕೊಳ್ಳಬೇಕೇ? ಅಥವಾ ಮುನ್ನೆಚ್ಚರಿಕೆ ಕ್ರಮವಾಗಿ ಕೂಡಲೇ ಸಮಸ್ಯೆ ಪರಿಹರಿಸಬೇಕೇ ಎಂಬ ಪ್ರಶ್ನೆಯನ್ನು ನಿವಾಸಿಗಳು ಮುಂದಿಟ್ಟಿದ್ದಾರೆ.
ಈ ಕುರಿತು ವಿದ್ಯಾಗಿರಿ ನಿವಾಸಿ ಗುರುನಾಥ ರೆಡ್ಡಿ ಮಾತನಾಡಿ, “ಕಳೆದ ಒಂದು ವಾರದಿಂದ ಚರಂಡಿ ಮುಚ್ಚಳ ತೆರೆದ ಸ್ಥಿತಿಯಲ್ಲಿದೆ. ಹಗಲು ಹೊತ್ತಿನಲ್ಲಿಯೇ ಓಡಾಡಲು ಕಷ್ಟವಾಗುತ್ತಿದೆ. ರಾತ್ರಿ ಸಮಯದಲ್ಲಂತೂ ಈ ರಸ್ತೆಯಲ್ಲಿ ಅಪ್ಪಿತಪ್ಪಿಯೂ ಸಂಚರಿಸುವಂತಿಲ್ಲ. ಯಾವುದೇ ಅನಾಹುತ ಸಂಭವಿಸುವ ಮುನ್ನ ಸಂಬಂಧಪಟ್ಟ ಅಧಿಕಾರಿಗಳು ಕೂಡಲೇ ಗಮನಹರಿಸಿ ಚರಂಡಿಗೆ ಮುಚ್ಚಳ ಅಳವಡಿಸಬೇಕು” ಎಂದು ಆಗ್ರಹಿಸಿದ್ದಾರೆ.
ತೆರೆದ ಚರಂಡಿಯಿಂದ ಈಗಾಗಲೇ ಸಾರ್ವಜನಿಕರಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದ್ದು, ಮಕ್ಕಳು, ವೃದ್ಧರು ಹಾಗೂ ದ್ವಿಚಕ್ರ ವಾಹನ ಸವಾರರು ಹೆಚ್ಚಿನ ಅಪಾಯ ಎದುರಿಸುವಂತಾಗಿದೆ. ಆದ್ದರಿಂದ ಸಂಬಂಧಪಟ್ಟ ನಗರಸಭೆ ಅಥವಾ ಸ್ಥಳೀಯ ಆಡಳಿತ ತಕ್ಷಣ ಸ್ಥಳ ಪರಿಶೀಲನೆ ನಡೆಸಿ, ಚರಂಡಿಗೆ ಗಟ್ಟಿಯಾದ ಮುಚ್ಚಳ ಅಳವಡಿಸುವ ಜೊತೆಗೆ ಅಗತ್ಯವಿದ್ದಲ್ಲಿ ಎಚ್ಚರಿಕೆ ಫಲಕ ಹಾಗೂ ರಾತ್ರಿ ವೇಳೆ ಗೋಚರಿಸುವ ಸುರಕ್ಷತಾ ವ್ಯವಸ್ಥೆ ಕಲ್ಪಿಸಬೇಕು ಎಂದು ನಿವಾಸಿಗಳು ಒತ್ತಾಯಿಸಿದ್ದಾರೆ.
ಅನಾಹುತ ಸಂಭವಿಸುವ ಮುನ್ನವೇ ಅಧಿಕಾರಿಗಳು ಎಚ್ಚೆತ್ತುಕೊಂಡು ಸಮಸ್ಯೆ ಬಗೆಹರಿಸಬೇಕಾಗಿದೆ ಎಂಬುದು ಸ್ಥಳೀಯರ ಆಗ್ರಹವಾಗಿದೆ.
---------------
ಹಿಂದೂಸ್ತಾನ್ ಸಮಾಚಾರ್ / jyothi deshpande