ಮಕ್ಕಳೊಂದಿಗೆ ಬಿಸಿಯೂಟ ಸವಿದ ಜಿಪಂ ಸಿಇಒ ರಿಷಿ ಆನಂದ
ವಿಜಯಪುರ, 21 ಆಗಸ್ಟ್ (ಹಿ.ಸ.) ಆ್ಯಂಕರ್ : ವಿಜಯಪುರ ಜಿಲ್ಲಾ ಪಂಚಾಯತಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಿಷಿ ಆನಂದ ಅವರು ಶುಕ್ರವಾರ ವಿಜಯಪುರ ತಾಲೂಕಿನ ಹಿಟ್ಟಿನಹಳ್ಳಿ ಹಾಗೂ ಬಬಲೇಶ್ವರ ತಾಲೂಕಿನ ಹೊನಗನಹಳ್ಳಿ, ಕಾರಜೊಳ ಮತ್ತು ಕಾಖಂಡಕಿ ಗ್ರಾಮ ಪಂಚಾಯಿತಿಗಳಿಗೆ ಕ್ಷೇತ್ರ ಭೇಟಿ ನೀಡಿ ವಿವಿಧ ಅಭಿವೃದ
ಊಟ


ವಿಜಯಪುರ, 21 ಆಗಸ್ಟ್ (ಹಿ.ಸ.)

ಆ್ಯಂಕರ್ : ವಿಜಯಪುರ ಜಿಲ್ಲಾ ಪಂಚಾಯತಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಿಷಿ ಆನಂದ ಅವರು ಶುಕ್ರವಾರ ವಿಜಯಪುರ ತಾಲೂಕಿನ ಹಿಟ್ಟಿನಹಳ್ಳಿ ಹಾಗೂ ಬಬಲೇಶ್ವರ ತಾಲೂಕಿನ ಹೊನಗನಹಳ್ಳಿ, ಕಾರಜೊಳ ಮತ್ತು ಕಾಖಂಡಕಿ ಗ್ರಾಮ ಪಂಚಾಯಿತಿಗಳಿಗೆ ಕ್ಷೇತ್ರ ಭೇಟಿ ನೀಡಿ ವಿವಿಧ ಅಭಿವೃದ್ಧಿ ಕಾಮಗಾರಿಗಳ ಪರಿಶೀಲನೆ ನಡೆಸಿದರು.

ಕ್ಷೇತ್ರ ಭೇಟಿಯ ವೇಳೆ ಕಾಖಂಡಕಿ ಎಲ್.ಟಿ. ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆಗೆ ಭೇಟಿ ನೀಡಿದ ಸಿಇಒ ರಿಷಿ ಆನಂದ ಅವರು, ವಿದ್ಯಾರ್ಥಿಗಳೊಂದಿಗೆ ಕುಳಿತು ಬಿಸಿಯೂಟ ಸವಿದು ಗಮನ ಸೆಳೆದರು. ಉನ್ನತ ಹುದ್ದೆಯಲ್ಲಿದ್ದರೂ ಯಾವುದೇ ಅಂತರವಿಲ್ಲದೆ ಮಕ್ಕಳೊಂದಿಗೆ ಸರಳವಾಗಿ ಬೆರೆತು ಊಟ ಮಾಡುವ ಮೂಲಕ ತಮ್ಮ ಸರಳತೆ ಹಾಗೂ ಮಾನವೀಯತೆಯನ್ನು ಪ್ರದರ್ಶಿಸಿದರು. ಸಿಇಒ ಅವರ ಈ ನಡೆ ಸ್ಥಳೀಯರು ಹಾಗೂ ಶಾಲಾ ಶಿಕ್ಷಕರ ಮೆಚ್ಚುಗೆಗೆ ಪಾತ್ರವಾಯಿತು.

ಬಿಸಿಯೂಟದ ಬಳಿಕ ವಿದ್ಯಾರ್ಥಿಗಳೊಂದಿಗೆ ಆತ್ಮೀಯವಾಗಿ ಸಂವಾದ ನಡೆಸಿದ ಅವರು, ಶಿಕ್ಷಣದ ಮಹತ್ವ, ಶಿಸ್ತು, ಪರಿಶ್ರಮ ಹಾಗೂ ಉತ್ತಮ ಭವಿಷ್ಯ ರೂಪಿಸಿಕೊಳ್ಳುವ ಕುರಿತು ಮಕ್ಕಳಿಗೆ ಪ್ರೇರಣಾದಾಯಕ ಮಾತುಗಳನ್ನು ಹೇಳಿದರು. ಶಾಲೆಯ ಅಡುಗೆ ಕೋಣೆ, ಆವರಣ ಹಾಗೂ ತರಗತಿ ಕೊಠಡಿಗಳನ್ನು ಪರಿಶೀಲಿಸಿದ ಅವರು, ಶಾಲೆಯನ್ನು ಸ್ವಚ್ಛವಾಗಿ ಮತ್ತು ಅಚ್ಚುಕಟ್ಟಾಗಿ ನಿರ್ವಹಿಸುತ್ತಿರುವುದಕ್ಕೆ ಮುಖ್ಯೋಪಾಧ್ಯಾಯರು, ಶಿಕ್ಷಕರು ಹಾಗೂ ಸಿಬ್ಬಂದಿಗೆ ಮೆಚ್ಚುಗೆ ವ್ಯಕ್ತಪಡಿಸಿದರು.

ಗ್ರಾಮಸ್ಥರೊಂದಿಗೆ ನೇರ ಸಂವಾದ

ಕಾಖಂಡಕಿ ಗ್ರಾಮದಲ್ಲಿ ಸಾರ್ವಜನಿಕರೊಂದಿಗೆ ಸಂವಾದ ನಡೆಸಿದ ಸಿಇಒ ರಿಷಿ ಆನಂದ ಅವರು, ವಿಬಿ–ಜಿ ರಾಮ್–ಜಿ ಯೋಜನೆಯ ಉದ್ದೇಶ ಹಾಗೂ ಗ್ರಾಮೀಣ ಕುಟುಂಬಗಳಿಗೆ ಯೋಜನೆಯಿಂದ ದೊರೆಯುವ ಉದ್ಯೋಗಾವಕಾಶಗಳ ಕುರಿತು ಮಾಹಿತಿ ನೀಡಿದರು. ಯೋಜನೆಯು ಗ್ರಾಮೀಣ ಕುಟುಂಬಗಳಿಗೆ ಉದ್ಯೋಗ ಕಲ್ಪಿಸುವುದರ ಜೊತೆಗೆ ಅವರ ಆರ್ಥಿಕ ಸಬಲೀಕರಣಕ್ಕೆ ಸಹಕಾರಿಯಾಗಲಿದೆ ಎಂದು ತಿಳಿಸಿದರು.

ಅರ್ಹ ಕುಟುಂಬಗಳು ಯೋಜನೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಸಕ್ರಿಯವಾಗಿ ಭಾಗವಹಿಸಿ ಲಭ್ಯವಿರುವ ಉದ್ಯೋಗಾವಕಾಶವನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದು ಕರೆ ನೀಡಿದರು. ಯೋಜನೆಯಡಿ ದೊರೆಯುವ ಕೂಲಿ ಹಣವನ್ನು ಕುಟುಂಬದ ಅಗತ್ಯ ಹಾಗೂ ಉತ್ತಮ ಉದ್ದೇಶಗಳಿಗೆ ಬಳಸಿಕೊಂಡು ಆರ್ಥಿಕ ಸ್ಥಿರತೆ ಸಾಧಿಸುವಂತೆ ಕೂಲಿಕಾರರಿಗೆ ಕಿವಿಮಾತು ಹೇಳಿದರು.

ಅಭಿವೃದ್ಧಿ ಕಾಮಗಾರಿಗಳ ಪರಿಶೀಲನೆ

ಹಿಟ್ಟಿನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ವಿಬಿ–ಜಿ ರಾಮ್–ಜಿ ಯೋಜನೆಯಡಿ ಕೈಗೊಳ್ಳಲಾಗುತ್ತಿರುವ ಹಳ್ಳ ಹಾಗೂ ಕೆರೆ ಪುನಶ್ಚೇತನ ಕಾಮಗಾರಿಗಳನ್ನು ವೀಕ್ಷಿಸಿದ ಸಿಇಒ ಅವರು, ಕಾಮಗಾರಿಗಳ ಪ್ರಗತಿ, ಸ್ಥಳೀಯ ವ್ಯವಸ್ಥೆಗಳು ಹಾಗೂ ಅನುಷ್ಠಾನದ ಗುಣಮಟ್ಟವನ್ನು ಪರಿಶೀಲಿಸಿದರು.

ಬಳಿಕ ಹೊನಗನಹಳ್ಳಿ, ಕಾರಜೊಳ ಹಾಗೂ ಕಾಖಂಡಕಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳನ್ನು ವೀಕ್ಷಿಸಿದರು. ಕಾರಜೊಳ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಕಾಲುವೆ ಕಾಮಗಾರಿಯನ್ನು ಪರಿಶೀಲಿಸಿದ ಅವರು, ಸದರಿ ಕಾಮಗಾರಿಯನ್ನು ವಿಬಿ–ಜಿ ರಾಮ್–ಜಿ ಯೋಜನೆಯಡಿ ಅನುಷ್ಠಾನಗೊಳಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಕಾಮಗಾರಿಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಕೂಲಿಕಾರರನ್ನು ತೊಡಗಿಸಿಕೊಳ್ಳುವ ಮೂಲಕ ಅರ್ಹ ಕುಟುಂಬಗಳಿಗೆ ನಿರಂತರ ಉದ್ಯೋಗ ಒದಗಿಸಬೇಕು. ಯೋಜನೆಯಡಿ ಲಭ್ಯವಿರುವ ಉದ್ಯೋಗದ ಅವಕಾಶಗಳು ಅರ್ಹ ಕುಟುಂಬಗಳಿಗೆ ಪರಿಣಾಮಕಾರಿಯಾಗಿ ತಲುಪುವಂತೆ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.

ಶಾಶ್ವತ ಆಸ್ತಿ ಸೃಜಿಸುವ ಕಾಮಗಾರಿಗಳಿಗೆ ಆದ್ಯತೆ

ವಿಬಿ–ಜಿ ರಾಮ್–ಜಿ ಯೋಜನೆಯಡಿ ಕೈಗೊಳ್ಳುವ ಕಾಮಗಾರಿಗಳ ಗುಣಮಟ್ಟ ಹಾಗೂ ನಿಗದಿತ ಮಾನದಂಡಗಳ ಪಾಲನೆಗೆ ಹೆಚ್ಚಿನ ಆದ್ಯತೆ ನೀಡಬೇಕು ಎಂದು ಸಿಇಒ ರಿಷಿ ಆನಂದ ಸೂಚಿಸಿದರು. ಯೋಜನೆಯ ಉದ್ದೇಶಕ್ಕೆ ಅನುಗುಣವಾಗಿ ಕಾಮಗಾರಿಗಳನ್ನು ಕೈಗೊಳ್ಳಬೇಕು. ಕೆರೆ ಅಭಿವೃದ್ಧಿ, ಪುನಶ್ಚೇತನ ಸೇರಿದಂತೆ ಗ್ರಾಮೀಣ ಪ್ರದೇಶದಲ್ಲಿ ದೀರ್ಘಕಾಲಿಕ ಪ್ರಯೋಜನ ನೀಡುವ ಶಾಶ್ವತ ಆಸ್ತಿಗಳನ್ನು ಸೃಜಿಸುವ ಕಾಮಗಾರಿಗಳಿಗೆ ಹೆಚ್ಚಿನ ಆದ್ಯತೆ ನೀಡಬೇಕು ಎಂದು ತಿಳಿಸಿದರು.

ಕಾಮಗಾರಿ ಸ್ಥಳಗಳಲ್ಲಿ ಕೂಲಿಕಾರರಿಗೆ ಅಗತ್ಯ ಆರೋಗ್ಯ ತಪಾಸಣೆ, ಕುಡಿಯುವ ನೀರು, ನೆರಳಿನ ವ್ಯವಸ್ಥೆ ಸೇರಿದಂತೆ ಮೂಲಭೂತ ಸೌಲಭ್ಯಗಳನ್ನು ಕಡ್ಡಾಯವಾಗಿ ಕಲ್ಪಿಸಬೇಕು. ಕೂಲಿಕಾರರ ಆರೋಗ್ಯ ಮತ್ತು ಸುರಕ್ಷತೆಯಲ್ಲಿ ಯಾವುದೇ ರೀತಿಯ ನಿರ್ಲಕ್ಷ್ಯ ತೋರಬಾರದು ಎಂದು ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು.

ನಿಗದಿತ ಗುರಿಗೆ ಅನುಗುಣವಾಗಿ ಮಾನವ ದಿನಗಳ ಸೃಜನೆ ಮಾಡಬೇಕು. ಹೆಚ್ಚಿನ ಸಂಖ್ಯೆಯಲ್ಲಿ ಕೂಲಿಕಾರರನ್ನು ಕಾಮಗಾರಿಗಳಲ್ಲಿ ತೊಡಗಿಸಿಕೊಳ್ಳುವ ಮೂಲಕ ಅರ್ಹ ಕುಟುಂಬಗಳಿಗೆ ನಿರಂತರ ಉದ್ಯೋಗ ಒದಗಿಸುವ ವ್ಯವಸ್ಥೆ ಕಲ್ಪಿಸಬೇಕು ಎಂದು ಸೂಚಿಸಿದರು.

ಫೇಸ್ ಅಥೆಂಟಿಕೇಷನ್ ಕಡ್ಡಾಯ

ಕೂಲಿಕಾರರ ಹಾಜರಾತಿ ಹಾಗೂ ಕಾಮಗಾರಿಗಳಲ್ಲಿ ಪಾರದರ್ಶಕತೆ ಖಚಿತಪಡಿಸುವ ನಿಟ್ಟಿನಲ್ಲಿ ಕೂಲಿಕಾರರ ಫೇಸ್ ಅಥೆಂಟಿಕೇಷನ್ ಪ್ರಕ್ರಿಯೆಯನ್ನು ಕಡ್ಡಾಯವಾಗಿ ಪೂರ್ಣಗೊಳಿಸಬೇಕು ಎಂದು ಸಿಇಒ ಸೂಚಿಸಿದರು. ಯೋಜನೆಯ ಅನುಷ್ಠಾನದಲ್ಲಿ ಯಾವುದೇ ರೀತಿಯ ಲೋಪಗಳಿಗೆ ಅವಕಾಶ ನೀಡಬಾರದು. ಅರ್ಹ ಕುಟುಂಬಗಳಿಗೆ ಯೋಜನೆಯ ಪ್ರಯೋಜನ ಸಮರ್ಪಕವಾಗಿ ತಲುಪುವಂತೆ ಅಧಿಕಾರಿಗಳು ಹಾಗೂ ಗ್ರಾಮ ಪಂಚಾಯಿತಿಗಳು ಜವಾಬ್ದಾರಿಯಿಂದ ಕಾರ್ಯನಿರ್ವಹಿಸಬೇಕು ಎಂದು ನಿರ್ದೇಶನ ನೀಡಿದರು.

ಕ್ಷೇತ್ರ ಭೇಟಿಯ ವೇಳೆ ಕೂಲಿಕಾರರ ಸಮಸ್ಯೆಗಳನ್ನು ಸ್ಥಳದಲ್ಲಿಯೇ ಆಲಿಸಿದ ರಿಷಿ ಆನಂದ ಅವರು, ಅವರ ಅಹವಾಲುಗಳು ಹಾಗೂ ಅಗತ್ಯ ಸೌಲಭ್ಯಗಳ ಕುರಿತು ಮಾಹಿತಿ ಪಡೆದುಕೊಂಡರು. ಗ್ರಾಮೀಣ ಕುಟುಂಬಗಳಿಗೆ ಉದ್ಯೋಗದ ಜೊತೆಗೆ ಆರ್ಥಿಕ ಸಬಲೀಕರಣಕ್ಕೆ ವಿಬಿ–ಜಿ ರಾಮ್–ಜಿ ಯೋಜನೆ ಪ್ರಮುಖ ಅವಕಾಶವಾಗಿದ್ದು, ಅರ್ಹರು ಹೆಚ್ಚಿನ ಸಂಖ್ಯೆಯಲ್ಲಿ ಯೋಜನೆಯಲ್ಲಿ ಭಾಗವಹಿಸಿ ಸದ್ಬಳಕೆ ಮಾಡಿಕೊಳ್ಳಬೇಕು ಎಂದು ತಿಳಿಸಿದರು.

ಜನಸ್ನೇಹಿ ಆಡಳಿತಕ್ಕೆ ಮಾದರಿ

ಅಭಿವೃದ್ಧಿ ಕಾಮಗಾರಿಗಳ ಪರಿಶೀಲನೆಗೆ ಮಾತ್ರ ಸೀಮಿತವಾಗದೆ, ವಿದ್ಯಾರ್ಥಿಗಳೊಂದಿಗೆ ಬೆರೆತು ಬಿಸಿಯೂಟ ಸವಿದು, ಸಾರ್ವಜನಿಕರೊಂದಿಗೆ ನೇರವಾಗಿ ಸಂವಾದ ನಡೆಸಿ, ಕೂಲಿಕಾರರ ಸಮಸ್ಯೆಗಳನ್ನು ಆಲಿಸುವ ಮೂಲಕ ಸಿಇಒ ರಿಷಿ ಆನಂದ ಅವರು ಜನಸ್ನೇಹಿ ಆಡಳಿತದ ಮಾದರಿಯನ್ನು ಪ್ರದರ್ಶಿಸಿದರು.

ವಿದ್ಯಾರ್ಥಿಗಳೊಂದಿಗೆ ಬಿಸಿಯೂಟ ಸವಿದ ಸರಳತೆ, ಗ್ರಾಮಸ್ಥರೊಂದಿಗೆ ನಡೆಸಿದ ಮುಕ್ತ ಸಂವಾದ ಹಾಗೂ ಕಾಮಗಾರಿ ಸ್ಥಳಗಳಲ್ಲಿ ಕೂಲಿಕಾರರ ಆರೋಗ್ಯ, ಸುರಕ್ಷತೆ ಮತ್ತು ಉದ್ಯೋಗಕ್ಕೆ ಆದ್ಯತೆ ನೀಡಿದ ನಡೆ ಸಾರ್ವಜನಿಕರ ಗಮನ ಸೆಳೆಯಿತು. ಅಧಿಕಾರಿಗಳು ಕ್ಷೇತ್ರ ಮಟ್ಟದಲ್ಲಿ ಜನರೊಂದಿಗೆ ನೇರ ಸಂಪರ್ಕ ಹೊಂದಿ ಕಾರ್ಯನಿರ್ವಹಿಸಿದಾಗ ಸರ್ಕಾರದ ಯೋಜನೆಗಳ ಪರಿಣಾಮಕಾರಿ ಅನುಷ್ಠಾನ ಸಾಧ್ಯವಾಗುತ್ತದೆ ಎಂಬ ಸಂದೇಶವನ್ನು ಅವರ ಕ್ಷೇತ್ರ ಭೇಟಿ ಸಾರಿತು.

ಈ ಸಂದರ್ಭದಲ್ಲಿ ಹಿಟ್ಟಿನಹಳ್ಳಿ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ರಾಜಶೇಖರ ಬಿರಾದಾರ, ಕಾಖಂಡಕಿ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಸುರೇಶ ಕಳ್ಳಮನಿ, ತಾಂತ್ರಿಕ ಸಿಬ್ಬಂದಿ, ಗ್ರಾಮ ಕಾಯಕ ಮಿತ್ರ ಹಾಗೂ ಗ್ರಾಮ ಪಂಚಾಯಿತಿ ಸಿಬ್ಬಂದಿ ಉಪಸ್ಥಿತರಿದ್ದರು.

---------------

ಹಿಂದೂಸ್ತಾನ್ ಸಮಾಚಾರ್ / jyothi deshpande


 rajesh pande