ಕುಡಿಯುವ ನೀರು ಪೂರೈಸುವ ಪಂಪ್ ದುರಸ್ತಿಗೆ ಹಲಗಲಿ–ಮೆಳ್ಳಿಗೇರಿ ಗ್ರಾಮಸ್ಥರ ಆಗ್ರಹ
ಬಾಗಲಕೋಟೆ, 21 ಆಗಸ್ಟ್ (ಹಿ.ಸ.) ಆ್ಯಂಕರ್ : ಬಾಗಲಕೋಟೆ ಜಿಲ್ಲೆಯ ಮುಧೋಳ ತಾಲೂಕಿನ ಮಾಚಕನೂರ ಬಹುಹಳ್ಳಿ ಕುಡಿಯುವ ನೀರಿನ ಯೋಜನೆಯ ಪಂಪ್ಗಳಲ್ಲಿ ದೋಷ ಕಾಣಿಸಿಕೊಂಡಿರುವ ಹಿನ್ನೆಲೆಯಲ್ಲಿ ಹಲಗಲಿ ಹಾಗೂ ಮೆಳ್ಳಿಗೇರಿ ಗ್ರಾಮಗಳಲ್ಲಿ ಕುಡಿಯುವ ನೀರಿಗೆ ತೀವ್ರ ತತ್ವಾರ ಎದುರಾಗಿದೆ. ನೀರು ಪೂರೈಕೆ ಸ್ಥಗಿತಗೊಂಡು
ನೀಟ್7


ಬಾಗಲಕೋಟೆ, 21 ಆಗಸ್ಟ್ (ಹಿ.ಸ.)

ಆ್ಯಂಕರ್ : ಬಾಗಲಕೋಟೆ ಜಿಲ್ಲೆಯ ಮುಧೋಳ ತಾಲೂಕಿನ ಮಾಚಕನೂರ ಬಹುಹಳ್ಳಿ ಕುಡಿಯುವ ನೀರಿನ ಯೋಜನೆಯ ಪಂಪ್ಗಳಲ್ಲಿ ದೋಷ ಕಾಣಿಸಿಕೊಂಡಿರುವ ಹಿನ್ನೆಲೆಯಲ್ಲಿ ಹಲಗಲಿ ಹಾಗೂ ಮೆಳ್ಳಿಗೇರಿ ಗ್ರಾಮಗಳಲ್ಲಿ ಕುಡಿಯುವ ನೀರಿಗೆ ತೀವ್ರ ತತ್ವಾರ ಎದುರಾಗಿದೆ. ನೀರು ಪೂರೈಕೆ ಸ್ಥಗಿತಗೊಂಡು ಬರೋಬ್ಬರಿ ಒಂದು ತಿಂಗಳು ಕಳೆದರೂ ಪಂಪ್ಗಳ ದುರಸ್ತಿ ಕಾರ್ಯ ಪೂರ್ಣಗೊಳ್ಳದಿರುವುದರಿಂದ ಗ್ರಾಮಸ್ಥರು ಹನಿ ನೀರಿಗಾಗಿ ಪರದಾಡುವಂತಾಗಿದೆ.

ಬಹುಹಳ್ಳಿ ಕುಡಿಯುವ ನೀರಿನ ಯೋಜನೆಯನ್ನೇ ಸಂಪೂರ್ಣವಾಗಿ ಅವಲಂಬಿಸಿರುವ ಹಲಗಲಿ ಮತ್ತು ಮೆಳ್ಳಿಗೇರಿ ಗ್ರಾಮಗಳಿಗೆ ಸದ್ಯ ಪರ್ಯಾಯ ಕುಡಿಯುವ ನೀರಿನ ಮೂಲಗಳಿಲ್ಲ. ಪರಿಣಾಮ, ದಿನನಿತ್ಯದ ಅಗತ್ಯಗಳಿಗೆ ಗ್ರಾಮಸ್ಥರು ಕೆರೆಯ ನೀರನ್ನು ಬಳಸಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಆದರೆ ಕುಡಿಯಲು ಯೋಗ್ಯವಾದ ನೀರಿಗಾಗಿ ಗ್ರಾಮಸ್ಥರು ತಮ್ಮ ದಿನನಿತ್ಯದ ಕೆಲಸ ಕಾರ್ಯಗಳನ್ನು ಬದಿಗೊತ್ತಿ, ಬೈಕ್ಗಳಲ್ಲಿ ಕೊಡಗಳನ್ನು ಹೊತ್ತು ಹೊಲ-ಗದ್ದೆಗಳಲ್ಲಿರುವ ಬೋರ್ವೆಲ್ಗಳಿಗೆ ತೆರಳಿ ನೀರು ತರುವಂತಾಗಿದೆ.

ಬೆಳಗ್ಗೆ ಎದ್ದ ತಕ್ಷಣವೇ ನೀರಿನ ಹುಡುಕಾಟ ಆರಂಭವಾಗುತ್ತಿದ್ದು, ಗ್ರಾಮದ ಪುರುಷರು ಹಾಗೂ ಯುವಕರು ಬೈಕ್ಗಳಿಗೆ ಕೊಡಗಳನ್ನು ಕಟ್ಟಿಕೊಂಡು ದೂರದ ಜಮೀನುಗಳತ್ತ ತೆರಳುತ್ತಿರುವ ದೃಶ್ಯ ಸಾಮಾನ್ಯವಾಗಿದೆ. ಇದರಿಂದ ಗ್ರಾಮಸ್ಥರು ತೀವ್ರ ಅಸಮಾಧಾನ ವ್ಯಕ್ತಪಡಿಸುತ್ತಿದ್ದು, ಕುಡಿಯುವ ನೀರಿನಂತಹ ಮೂಲಭೂತ ಸೌಲಭ್ಯಕ್ಕೂ ಪರದಾಡುವ ಸ್ಥಿತಿ ಬಂದಿರುವುದು ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಸಾಕ್ಷಿಯಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಒಂದು ತಿಂಗಳಾದರೂ ದುರಸ್ತಿ ಆಗಿಲ್ಲ

ಮಾಚಕನೂರ ಬಹುಹಳ್ಳಿ ಕುಡಿಯುವ ನೀರಿನ ಯೋಜನೆಯಿಂದ ಸುಮಾರು ಏಳು ಗ್ರಾಮಗಳಿಗೆ ನೀರು ಪೂರೈಕೆ ಮಾಡಲಾಗುತ್ತಿದೆ. ನಿರಂತರ ನೀರು ಪೂರೈಕೆಗೆ ಎರಡು ಪಂಪ್ಗಳನ್ನು ಅಳವಡಿಸಲಾಗಿದೆ. ಆದರೆ ಈ ಬಾರಿ ಎರಡೂ ಪಂಪ್ಗಳು ಏಕಕಾಲದಲ್ಲಿ ದುರಸ್ತಿಗೆ ಬಂದಿರುವುದರಿಂದ ಇಡೀ ನೀರು ಪೂರೈಕೆ ವ್ಯವಸ್ಥೆಯೇ ಸ್ಥಗಿತಗೊಂಡಿದೆ.

ಪಂಪ್ಗಳು ಕೆಟ್ಟು ಒಂದು ವಾರ ಕಳೆದಿದ್ದರೂ ಇನ್ನೂ ದುರಸ್ತಿ ಕಾರ್ಯ ಪೂರ್ಣಗೊಂಡಿಲ್ಲ. ಅಧಿಕಾರಿಗಳಿಗೆ ಹಲವು ಬಾರಿ ಮನವಿ ಮಾಡಿದರೂ ಸಮಸ್ಯೆಗೆ ಸಮರ್ಪಕವಾಗಿ ಸ್ಪಂದಿಸುತ್ತಿಲ್ಲ ಎಂದು ಗ್ರಾಮದ ಯುವಕ ಗಂಗಾಧರ ಹುಟ್ಟೂರು ಅಲ್ಲು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಪರ್ಯಾಯ ನೀರಿನ ಮೂಲವಿಲ್ಲ

ಬಹುಹಳ್ಳಿ ಕುಡಿಯುವ ನೀರಿನ ಯೋಜನೆ ಜಾರಿಯಾದ ಬಳಿಕ ಹಲಗಲಿ ಹಾಗೂ ಮೆಳ್ಳಿಗೇರಿ ಗ್ರಾಮಗಳ ಬಹುತೇಕ ಕುಡಿಯುವ ನೀರಿನ ಅವಶ್ಯಕತೆ ಇದೇ ಯೋಜನೆಯ ಮೂಲಕ ಪೂರೈಕೆಯಾಗುತ್ತಿದೆ. ಹೀಗಾಗಿ ಯೋಜನೆಯ ಪಂಪ್ಗಳು ಸ್ಥಗಿತಗೊಂಡಾಗ ಪರ್ಯಾಯ ವ್ಯವಸ್ಥೆ ಇಲ್ಲದೆ ಗ್ರಾಮಸ್ಥರು ಸಂಕಷ್ಟಕ್ಕೆ ಸಿಲುಕಿದ್ದಾರೆ.

ಮನೆ ಬಳಕೆಯ ನೀರು, ಕುಡಿಯುವ ನೀರು ಹಾಗೂ ಇತರ ಅಗತ್ಯಗಳಿಗೆ ಪ್ರತ್ಯೇಕವಾಗಿ ನೀರು ಸಂಗ್ರಹಿಸಿಕೊಳ್ಳಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಮಹಿಳೆಯರು, ವೃದ್ಧರು ಹಾಗೂ ಮಕ್ಕಳಿಗೆ ನೀರು ತರುವ ಕಾರ್ಯ ಮತ್ತಷ್ಟು ಕಷ್ಟಕರವಾಗಿದೆ. ಗ್ರಾಮದಲ್ಲಿ ನೀರಿನ ಸಮಸ್ಯೆ ದಿನದಿಂದ ದಿನಕ್ಕೆ ಗಂಭೀರವಾಗುತ್ತಿದ್ದರೂ ಸಂಬಂಧಪಟ್ಟವರು ತಕ್ಷಣ ಕ್ರಮ ಕೈಗೊಳ್ಳಬೇಕೆಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.

ಕೆರೆಯ ನೀರೇ ಸದ್ಯ ಆಧಾರ

ಹಲಗಲಿ ಗ್ರಾಮದ ಐತಿಹಾಸಿಕ ಕೆರೆಯಲ್ಲಿ ಮಳೆ ನೀರು ಸಂಗ್ರಹವಾಗಿರುವುದರಿಂದ ಮನೆ ಬಳಕೆಯ ಕೆಲವು ಅಗತ್ಯಗಳಿಗೆ ಹಾಗೂ ಜಾನುವಾರುಗಳಿಗೆ ಕೆರೆಯ ನೀರನ್ನು ಬಳಸಲಾಗುತ್ತಿದೆ. ಇದರಿಂದ ಜಾನುವಾರುಗಳಿಗೆ ನೀರಿನ ಸಮಸ್ಯೆ ತುಸು ಕಡಿಮೆಯಾಗಿದ್ದರೂ, ಕುಡಿಯುವ ನೀರಿನ ಸಮಸ್ಯೆ ಮಾತ್ರ ಗ್ರಾಮಸ್ಥರನ್ನು ಕಾಡುತ್ತಿದೆ.

ಬೋರ್ವೆಲ್ಗಳಿರುವ ಜಮೀನುಗಳಿಗೆ ತೆರಳಿ ಕುಡಿಯುವ ನೀರು ತರಬೇಕಾದ ಅನಿವಾರ್ಯತೆ ಎದುರಾಗಿದ್ದು, ಪ್ರತಿದಿನವೂ ಇದೇ ಕೆಲಸದಲ್ಲಿ ಸಮಯ ಕಳೆಯುವಂತಾಗಿದೆ.

ಶೀಘ್ರ ನೀರು ಪೂರೈಕೆ ಪುನರಾರಂಭದ ಭರವಸೆ

ಈ ಕುರಿತು ಅಧಿಕಾರಿಗಳನ್ನು ಸಂಪರ್ಕಿಸಿದಾಗ ಬಹುಹಳ್ಳಿ ಕುಡಿಯುವ ನೀರಿನ ಯೋಜನೆಯ ಮೋಟಾರ್ ಪಂಪ್ಗಳು ದುರಸ್ತಿಗೊಂಡಿರುವ ಕಾರಣ ನೀರು ಪೂರೈಕೆ ಸ್ಥಗಿತಗೊಂಡಿದೆ. ಪಂಪ್ಗಳ ದುರಸ್ತಿ ಕಾರ್ಯ ಕೈಗೊಳ್ಳಲಾಗಿದ್ದು, ಶೀಘ್ರವೇ ನೀರು ಪೂರೈಕೆಯನ್ನು ಯಥಾಸ್ಥಿತಿಗೆ ತರಲಾಗುವುದು ಎಂದು ತಿಳಿಸಿದ್ದಾರೆ.

ಆದರೆ ಪಂಪ್ಗಳು ದುರಸ್ತಿಯಾಗುವವರೆಗೆ ಗ್ರಾಮಸ್ಥರಿಗೆ ಪರ್ಯಾಯವಾಗಿ ಟ್ಯಾಂಕರ್ ಮೂಲಕವಾದರೂ ಕುಡಿಯುವ ನೀರು ಪೂರೈಸಬೇಕು. ಸಮಸ್ಯೆ ಬಗೆಹರಿಯುವವರೆಗೆ ತಾತ್ಕಾಲಿಕ ನೀರಿನ ವ್ಯವಸ್ಥೆ ಕಲ್ಪಿಸುವಂತೆ ಗ್ರಾಮಸ್ಥರು ಆಗ್ರಹಿಸಿದ್ದಾರೆ.

ಮಾದರಿ ಗ್ರಾಮವಾಗಿದ್ದ ಹಲಗಲಿ

ಬಹುಹಳ್ಳಿ ಕುಡಿಯುವ ನೀರಿನ ಯೋಜನೆಯ ನೀರನ್ನು ಜೆಜೆಎಂ ನಳಗಳಿಗೆ ಸಂಪರ್ಕ ಕಲ್ಪಿಸಿ, ಪ್ರತಿಯೊಂದು ನಳಕ್ಕೂ ಮೀಟರ್ ಅಳವಡಿಸುವ ಮೂಲಕ ಮಿತ ನೀರಿನ ಬಳಕೆಗೆ ಒತ್ತು ನೀಡಿದ್ದ ಹಲಗಲಿ ಗ್ರಾಮ ಹಿಂದೆ ರಾಜ್ಯಕ್ಕೆ ಮಾದರಿಯಾಗಿತ್ತು. ನೀರಿನ ಸಂರಕ್ಷಣೆ ಹಾಗೂ ಸಮರ್ಪಕ ಬಳಕೆಯಲ್ಲಿ ಗಮನ ಸೆಳೆದಿದ್ದ ಗ್ರಾಮ ಇದೀಗ ಅಧಿಕಾರಿಗಳ ನಿರ್ಲಕ್ಷ್ಯದಿಂದ ಕುಡಿಯುವ ನೀರಿಗಾಗಿ ಪರದಾಡುವ ಸ್ಥಿತಿ ಎದುರಿಸಿರುವುದು ವಿಪರ್ಯಾಸವಾಗಿದೆ.

ಮೂಲಸೌಕರ್ಯಗಳ ನಿರ್ವಹಣೆಯಲ್ಲಿ ಅಧಿಕಾರಿಗಳು ಮುನ್ನೆಚ್ಚರಿಕೆ ವಹಿಸಿ, ಪಂಪ್ಗಳಿಗೆ ಪರ್ಯಾಯ ವ್ಯವಸ್ಥೆ ಕಲ್ಪಿಸಿದ್ದರೆ ಇಂತಹ ಪರಿಸ್ಥಿತಿ ಎದುರಾಗುತ್ತಿರಲಿಲ್ಲ. ಇನ್ನಾದರೂ ಸಂಬಂಧಪಟ್ಟ ಅಧಿಕಾರಿಗಳು ತುರ್ತು ಕ್ರಮ ಕೈಗೊಂಡು ಪಂಪ್ಗಳ ದುರಸ್ತಿ ಪೂರ್ಣಗೊಳಿಸಿ, ಎರಡೂ ಗ್ರಾಮಗಳಿಗೆ ಸಮರ್ಪಕವಾಗಿ ಕುಡಿಯುವ ನೀರು ಪೂರೈಸಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.

---------------

ಹಿಂದೂಸ್ತಾನ್ ಸಮಾಚಾರ್ / jyothi deshpande


 rajesh pande