
ಕೋಲಾರ, 21 ಆಗಸ್ಟ್ (ಹಿ.ಸ.)
ಆ್ಯಂಕರ್ : ಸಮಾಜದಲ್ಲಿ ಮಾರಕ ರೋಗವೆಂದೇ ಗುರುತಿಸಿರುವ ಗಂಟಲುಮಾರಿ, ಧನುರ್ವಾಯು ರೋಗ ಬಾರದಂತೆ ತಡೆಯಲು ಆರೋಗ್ಯ ಇಲಾಖೆ ಉಚಿತವಾಗಿ ನೀಡುತ್ತಿರುವ ಲಸಿಕೆ ಹಾಕಿಸಿಕೊಳ್ಳಿ, ಆರೋಗ್ಯ ಕಾಪಾಡಿಕೊಳ್ಳಿ ಎಂದು ಪ್ರಾಥಮಿಕ ಆರೋಗ್ಯ ಸುರಕ್ಷಣಾಧಿಕಾರಿ ವಾಣಿ ಕರೆ ನೀಡಿದರು.
ನರಸಾಪುರ ಪ್ರಾಥಮಿಕ ಆರೋಗ್ಯ ಕೇಂದ್ರದ ಆಶ್ರಯದಲ್ಲಿ ತಾಲ್ಲೂಕಿನ ಅರಾಭಿಕೊತ್ತನೂರು ಸರ್ಕಾರಿ ಪ್ರೌಢಶಾಲಾ ೧೦ನೇ ತರಗತಿ ವಿದ್ಯಾರ್ಥಿಗಳಿಗೆ ಧನುರ್ವಾಯು, ಗಂಟಲಮಾರಿ ರೋಗಗಳ ತಡೆಗಾಗಿ ಆರೋಗ್ಯ ಇಲಾಖೆಯಿಂದ ಲಸಿಕೆ ಹಾಕುವ ಅಭಿಯಾನದಲ್ಲಿ ಪಾಲ್ಗೊಂಡು ಮಾತನಾಡಿದರು. ವಿವಿಧ ಲಸಿಕೆಗಳಿಂದ ಅನೇಕ ಮಾರಣಾಂತಿಕ ಕಾಯಿಲೆಗಳಿಂದ ಮುಕ್ತಿ ಸಿಕ್ಕಿದೆ.
ಮಾರಕ ರೋಗಗಳ ತಡೆಗೆ ಅನೇಕ ಲಸಿಕೆಗಳನ್ನು ಪುಟ್ಟ ಮಕ್ಕಳಿರುವಾಗಲಿಂದಲೇ ನೀಡುತ್ತಿದ್ದು, ಇದೀಗ ೧೫ ವರ್ಷ ತುಂಬಿದವರಿಗೆ ಡಿಟಿ ಲಸಿಕೆ ನೀಡುವ ಮೂಲಕ ಗಂಟಲುಮಾರಿ, ಧನುರ್ವಾಯು ರೋಗಗಳು ಬಾರದಂತೆ ತಡೆಯಬಹುದಾಗಿದೆ ಎಂದು ತಿಳಿಸಿದರು.
ಸರ್ಕಾರ ಉಚಿತ ಲಸಿಕೆ ನೀಡಿದೆ, ಪ್ರತಿಯೊಬ್ಬ ೧೫ ವರ್ಷ ತುಂಬಿದ ಯುವಕರೂ ತಪ್ಪದೇ ಲಸಿಕೆ ಹಾಕಿಸಿಕೊಳ್ಳಿ ಎಂದು ತಿಳಿಸಿ, ಈ ಅಭಿಯಾನದಡಿ ಶಾಲೆಗಳಿಗೆ ನಾವೇ ಭೇಟಿ ನೀಡಿ ಲಸಿಕೆ ಹಾಕಲಾಗುತ್ತಿದೆ. ಲಸಿಕೆಯಿಂದ ಅಡ್ಡಪರಿಣಾಮಗಳಿಲ್ಲ, ಭಯ ಪಡದೇ ಲಸಿಕೆ ಹಾಕಿಸಿಕೊಳ್ಳಿ, ಉತ್ತಮ ಆರೋಗ್ಯವಿದ್ದರೆ ಮಾತ್ರ ಉತ್ತಮ ಕಲಿಕೆ ಸಾಧ್ಯ ಎಂಬ ಸತ್ಯ ಅರಿಯಿರಿ, ಸ್ವಚ್ಚತೆಗೆ ಒತ್ತು ನೀಡಿ, ಊಟಕ್ಕೆ ಮುನ್ನಾ, ಶೌಚಕ್ಕೆ ಹೋದ ನಂತರ ಸೋಪಿನಿಂದ ಕೈತೊಳೆಯಬೇಕು ಎಂದು ತಿಳಿಸಿದರು.
ಇದೇ ಸಂದರ್ಭದಲ್ಲಿ ವಿದ್ಯಾರ್ಥಿನಿಯರಿಗೆ ಸ್ವಚ್ಚತೆಯ ಕುರಿತು ಅರಿವು ಮೂಡಿಸಿ, ಯಾವುದೇ ಸೋಂಕು ಬಾರದಿರಲು ಸ್ವಚ್ಚತೆಯೇ ಮೊದಲ ಜಾಗ್ರತೆಯಾಗಿದೆ, ಹದಿಹರೆಯದ ಹೆಣ್ಣು ಮಕ್ಕಳು ಈ ನಿಟ್ಟಿನಲ್ಲಿ ಹೆಚ್ಚಿನ ಜಾಗೃತಿ ವಹಿಸಬೇಕು. ಸಾಮಾನ್ಯವಾಗಿ ಹೆಣ್ಣು ಮಕ್ಕಳಲ್ಲಿ ಉಂಟಾಗುವ ಅನಿಮಿಯಾ ತಡೆಗೆ ಹಾಲು,ಹಣ್ಣು, ಸೊಪ್ಪು,ತರಕಾರಿ ಹೆಚ್ಚು ಸೇವಿಸಿ ಎಂದು ಕಿವಿಮಾತು ಹೇಳಿದ ಅವರು, ರಕ್ತಹೀನತೆಯಿಂದ ಪಾರಾಗದಿದ್ದರೆ ಮುಂದಿನ ನಿಮ್ಮ ವೈವಾಹಿಕ ಜೀವನ ಸಂಕಷ್ಟಕ್ಕೆ ಸಿಲುಕುತ್ತದೆ ಎಂದು ಎಚ್ಚರಿಸಿದರು.
ಪ್ರಭಾರ ಮುಖ್ಯಶಿಕ್ಷಕಿ ತಾಹೇರಾನುಸ್ರತ್ ಮಾತನಾಡಿ, ಸರ್ಕಾರ ಸರ್ಕಾರಿ ಶಾಲಾ ಮಕ್ಕಳಿಗೆ ಬಿಸಿಯೂಟ,ಕ್ಷೀರಭಾಗ್ಯ,ಉಚಿತ ಪಠ್ಯ,ಸಮವಸ್ತçದ ಜತೆಗೆ ಶಾಲೆಗೆ ಬಂದು ನಿಮ್ಮ ಆರೋಗ್ಯ ರಕ್ಷಣೆಗೂ ಒತ್ತು ನೀಡುತ್ತಿದೆ. ಈ ಯೋಜನೆಗಳ ಸದ್ಬಳಕೆ ಮಾಡಿಕೊಳ್ಳಿ, ಉತ್ತಮ ಆರೋಗ್ಯ ಹೊಂದಿ ಶಾಲೆಗೆ ಗೈರಾಗದಿರಿ ಜೀವನದಲ್ಲಿ ಸಾಧಕರಾಗಿ ಹೊರಹೊಮ್ಮಿ ಎಂದು ಹೇಳಿದರು.
ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್