
ವಿಜಯಪುರ, 21 ಆಗಸ್ಟ್ (ಹಿ.ಸ.)
ಆ್ಯಂಕರ್ : ಯುವಜನರ ಶಕ್ತಿ, ಪ್ರತಿಭೆ ಹಾಗೂ ನಾಯಕತ್ವವನ್ನು ಸಮಾಜದ ಅಭಿವೃದ್ಧಿಯೊಂದಿಗೆ ಜೋಡಿಸುವ ಉದ್ದೇಶದಿಂದ ಸರ್ಕಾರ ಜಾರಿಗೊಳಿಸಿರುವ ‘ಭಾರತ್ ಜೋಡೋ ಯುವ ಸಂಘ’ ಯೋಜನೆಯ ಕುರಿತು ಯುವಕರಲ್ಲಿ ಜಾಗೃತಿ ಮೂಡಿಸುವ ಕಾರ್ಯಕ್ಕೆ ವಿಜಯಪುರ ಜಿಲ್ಲಾ ಪಂಚಾಯತಿ ಮುಂದಾಗಿದೆ.
ಈ ಹಿನ್ನೆಲೆಯಲ್ಲಿ ವಿಜಯಪುರ ಜಿಲ್ಲಾ ಪಂಚಾಯತಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಿಷಿ ಆನಂದ ಅವರು ಶುಕ್ರವಾರ ತಿಕೋಟಾ ತಾಲೂಕಿನ ತೊರವಿ ಗ್ರಾಮ ಪಂಚಾಯಿತಿಯ ಗ್ರಂಥಾಲಯಕ್ಕೆ ಭೇಟಿ ನೀಡಿ, ಯುವಕರೊಂದಿಗೆ ಸಂವಾದ ನಡೆಸಿದರು. ಈ ಸಂದರ್ಭದಲ್ಲಿ ‘ಭಾರತ್ ಜೋಡೋ ಯುವ ಸಂಘ’ ಯೋಜನೆಯಡಿ ಖುದ್ದಾಗಿ ಎರಡು ಯುವ ಸಂಘಗಳನ್ನು ನೋಂದಣಿ ಮಾಡಿಸುವ ಮೂಲಕ ಯುವಜನರ ಸಂಘಟಿತ ಚಟುವಟಿಕೆಗಳಿಗೆ ಉತ್ತೇಜನ ನೀಡಿದರು.
ಯುವಕರನ್ನು ಸಮಾಜಮುಖಿ ಕಾರ್ಯಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳುವಂತೆ ಮಾಡುವ ನಿಟ್ಟಿನಲ್ಲಿ ಯೋಜನೆಯ ಉದ್ದೇಶ ಹಾಗೂ ನೋಂದಣಿ ಪ್ರಕ್ರಿಯೆ ಕುರಿತು ಸಿಇಒ ರಿಷಿ ಆನಂದ ಅವರು ಯುವಕರಿಗೆ ಮಾಹಿತಿ ನೀಡಿದರು. ಗ್ರಾಮೀಣ ಭಾಗದ ಯುವಕರು ತಮ್ಮ ಪ್ರತಿಭೆ ಹಾಗೂ ಸಾಮರ್ಥ್ಯವನ್ನು ಸಮಾಜದ ಒಳಿತಿಗಾಗಿ ಬಳಸಿಕೊಳ್ಳಲು ಇಂತಹ ಸಂಘಟನೆಗಳು ಉತ್ತಮ ವೇದಿಕೆಯಾಗಲಿವೆ ಎಂದು ಅವರು ತಿಳಿಸಿದರು.
ಸಮಾಜಮುಖಿ ಚಟುವಟಿಕೆಗಳಿಗೆ ಒತ್ತು
‘ಭಾರತ್ ಜೋಡೋ ಯುವ ಸಂಘ’ ಯೋಜನೆಯಡಿ ಯುವಕರು ಸಾಮಾಜಿಕ ಸಾಮರಸ್ಯ, ಕ್ರೀಡೆ, ಆರೋಗ್ಯ, ಪರಿಸರ ಸಂರಕ್ಷಣೆ, ಸ್ವಚ್ಛತೆ, ಕೌಶಲ್ಯಾಭಿವೃದ್ಧಿ ಹಾಗೂ ಸಮುದಾಯ ಅಭಿವೃದ್ಧಿ ಸೇರಿದಂತೆ ವಿವಿಧ ಸಮಾಜಮುಖಿ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳಬಹುದಾಗಿದೆ.
ಯುವಕರಲ್ಲಿ ನಾಯಕತ್ವದ ಗುಣ ಬೆಳೆಸುವುದು, ಅವರಲ್ಲಿ ಸಾಮಾಜಿಕ ಜವಾಬ್ದಾರಿಯ ಮನೋಭಾವ ಮೂಡಿಸುವುದು ಹಾಗೂ ಗ್ರಾಮೀಣ ಪ್ರದೇಶಗಳ ಅಭಿವೃದ್ಧಿಯಲ್ಲಿ ಅವರನ್ನು ಪಾಲುದಾರರನ್ನಾಗಿ ಮಾಡುವುದು ಯೋಜನೆಯ ಪ್ರಮುಖ ಉದ್ದೇಶವಾಗಿದೆ. ಸಂಘಟಿತವಾಗಿ ಕಾರ್ಯನಿರ್ವಹಿಸುವ ಮೂಲಕ ತಮ್ಮ ಗ್ರಾಮ ಹಾಗೂ ಸಮಾಜದ ಅಭಿವೃದ್ಧಿಗೆ ಯುವಕರು ಮಹತ್ವದ ಕೊಡುಗೆ ನೀಡಬಹುದಾಗಿದೆ.
ಹೆಚ್ಚಿನ ಸಂಖ್ಯೆಯಲ್ಲಿ ನೋಂದಣಿಗೆ ಕರೆ
ಯುವಕರು ಹೆಚ್ಚಿನ ಸಂಖ್ಯೆಯಲ್ಲಿ ‘ಭಾರತ್ ಜೋಡೋ ಯುವ ಸಂಘ’ದಲ್ಲಿ ನೋಂದಣಿಯಾಗುವಂತೆ ಸಿಇಒ ರಿಷಿ ಆನಂದ ಅವರು ಕರೆ ನೀಡಿದರು. ಯುವಶಕ್ತಿ ಸಮಾಜದ ಬದಲಾವಣೆಯ ಪ್ರಮುಖ ಶಕ್ತಿಯಾಗಿದ್ದು, ಯುವಕರು ಸಕಾರಾತ್ಮಕ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡರೆ ಗ್ರಾಮೀಣಾಭಿವೃದ್ಧಿಗೆ ಮತ್ತಷ್ಟು ವೇಗ ದೊರೆಯಲಿದೆ ಎಂದು ಅವರು ಹೇಳಿದರು.
ಸಾಮಾಜಿಕ ಸೌಹಾರ್ದತೆ, ಸ್ವಚ್ಛತೆ, ಆರೋಗ್ಯ, ಪರಿಸರ ರಕ್ಷಣೆ ಹಾಗೂ ಕೌಶಲ್ಯಾಭಿವೃದ್ಧಿಯಂತಹ ಕ್ಷೇತ್ರಗಳಲ್ಲಿ ಯುವಕರು ಸ್ವಯಂಪ್ರೇರಣೆಯಿಂದ ಭಾಗವಹಿಸುವ ಮೂಲಕ ಸಶಕ್ತ, ಸೌಹಾರ್ದಯುತ ಹಾಗೂ ಅಭಿವೃದ್ಧಿಶೀಲ ಕರ್ನಾಟಕ ನಿರ್ಮಾಣದಲ್ಲಿ ತಮ್ಮ ಪಾತ್ರವನ್ನು ವಹಿಸಬೇಕು ಎಂದು ಅವರು ಸಲಹೆ ನೀಡಿದರು.
ತೊರವಿ ಗ್ರಾಮ ಪಂಚಾಯತಿ ಗ್ರಂಥಾಲಯದಲ್ಲಿ ನಡೆದ ಈ ಭೇಟಿ ಸಂದರ್ಭದಲ್ಲಿ ಯುವಕರು ಹಾಗೂ ಗ್ರಾಮ ಪಂಚಾಯತಿ ಸಿಬ್ಬಂದಿ ಉಪಸ್ಥಿತರಿದ್ದರು.
“ಯುವಶಕ್ತಿ ಒಂದಾದರೆ – ಸಮಾಜದ ಅಭಿವೃದ್ಧಿಗೆ ಹೊಸ ದಿಕ್ಕು” ಎಂಬ ಆಶಯದೊಂದಿಗೆ ‘ಭಾರತ್ ಜೋಡೋ ಯುವ ಸಂಘ’ ಯೋಜನೆಯ ಮೂಲಕ ಜಿಲ್ಲೆಯಾದ್ಯಂತ ಯುವಜನರನ್ನು ಸಮಾಜಮುಖಿ ಕಾರ್ಯಗಳಿಗೆ ಒಗ್ಗೂಡಿಸುವ ಪ್ರಯತ್ನ ಮುಂದುವರಿದಿದೆ.
---------------
ಹಿಂದೂಸ್ತಾನ್ ಸಮಾಚಾರ್ / jyothi deshpande