
ಕೋಲಾರ, 21 ಆಗಸ್ಟ್ (ಹಿ.ಸ)
ಆ್ಯಂಕರ್: ರೈತರು ಹಾಗೂ ಹಾಲು ಉತ್ಪಾದಕರ ಪರಿಶ್ರಮ, ಪ್ರಾಮಾಣಿಕತೆ ಮತ್ತು ಸಹಕಾರದಿಂದಾಗಿ ವಿಟ್ಟಪನಹಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘವು ಪ್ರಸಕ್ತ ಸಾಲಿನಲ್ಲಿ ೨ ಕೋಟಿ ರೂಪಾಯಿಗೂ ಅಧಿಕ ವಹಿವಾಟು ನಡೆಸಿ ಗಮನಾರ್ಹ ಸಾಧನೆ ಮಾಡಿದೆ ಎಂದು ಸಂಘದ ಅಧ್ಯಕ್ಷ ವಿ.ಆರ್.ಮಂಜುನಾಥ್ ಹೇಳಿದರು.
ಕೋಲಾರ ತಾಲ್ಲೂಕಿನ ವಿಟ್ಟಪನಹಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘದ ೨೦೨೫-೨೬ನೇ ಸಾಲಿನ ಸರ್ವ ಸದಸ್ಯರ ವಾರ್ಷಿಕ ಮಹಾಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಸಂಘದ ಬೆಳವಣಿಗೆಯಲ್ಲಿ ಹಾಲು ಉತ್ಪಾದಕ ರೈತರ ಪಾತ್ರ ಮಹತ್ವದ್ದಾಗಿದೆ. ಸಂಘವು ಸಾಧಿಸಿರುವ ಪ್ರಗತಿಯ ಸಂಪೂರ್ಣ ಶ್ರೇಯಸ್ಸು ರೈತರು, ಆಡಳಿತ ಮಂಡಳಿ ಹಾಗೂ ಸಿಬ್ಬಂದಿಗೆ ಸಲ್ಲುತ್ತದೆ. ರೈತರ ಹಿತಾಸಕ್ತಿಯನ್ನು ಕಾಪಾಡಿಕೊಂಡು ಸಂಘವನ್ನು ಮತ್ತಷ್ಟು ಬಲಪಡಿಸುವುದು ಆಡಳಿತ ಮಂಡಳಿಯ ಉದ್ದೇಶ ಎಂದರು.
ಹಾಲು ಉತ್ಪಾದಕರಿಗೆ ಅನುಕೂಲವಾಗುವಂತೆ ಸಂಘದಿಂದ ಪಶು ಆಹಾರದ ಮೇಲೆ ಪ್ರತಿ ರೈತರಿಗೆ ೧೦೦ ರೂಪಾಯಿ ರಿಯಾಯಿತಿ ನೀಡಲಾಗುತ್ತಿದೆ. ಜತೆಗೆ ಜೋಳದ ಬಿತ್ತನೆ ಬೀಜ ಹಾಗೂ ಮಿನರಲ್ ಮಿಕ್ಚರ್ಗಳನ್ನು ಒದಗಿಸಲಾಗುತ್ತಿದೆ. ಮುಂಬರುವ ದೀಪಾವಳಿ ಹಬ್ಬದ ಪ್ರಯುಕ್ತ ಅರ್ಹ ಪ್ರತಿಯೊಬ್ಬ ಹಾಲು ಉತ್ಪಾದಕರಿಗೂ ಉಚಿತವಾಗಿ ನಂದಿನಿ ತುಪ್ಪ ವಿತರಿಸಲಾಗುವುದು. ಹಾಲಿನ ಗುಣಮಟ್ಟಕ್ಕೆ ಅನುಗುಣವಾಗಿ ಕೊಬ್ಬಿನಾಂಶದ ಆಧಾರದ ಮೇಲೆ ಪಾರದರ್ಶಕವಾಗಿ ದರ ಪಾವತಿಸಲಾಗುತ್ತಿದೆ. ರೈತರು ಗುಣಮಟ್ಟದ ಹಾಲು ಉತ್ಪಾದನೆಗೆ ಹೆಚ್ಚಿನ ಆದ್ಯತೆ ನೀಡಬೇಕು ಎಂದು ಸಲಹೆ ನೀಡಿದರು.
ಕೋಮುಲ್ ಉಪವ್ಯವಸ್ಥಾಪಕ ಡಾ. ಆರ್.ಮಹೇಶ್ ಮಾತನಾಡಿ, ಹಾಲು ಒಕ್ಕೂಟ ಹಾಗೂ ಸರ್ಕಾರದಿಂದ ದೊರೆಯುವ ಶೇಕಡ ೫೦ರಷ್ಟು ಸಬ್ಸಿಡಿ ಸೇರಿದಂತೆ ವಿವಿಧ ಸಹಾಯಧನ ಹಾಗೂ ತಾಂತ್ರಿಕ ಸೌಲಭ್ಯಗಳನ್ನು ರೈತರು ಸಮರ್ಪಕವಾಗಿ ಬಳಸಿಕೊಳ್ಳಬೇಕು ಎಂದು ತಿಳಿಸಿದರು.
ಪಶುವೈದ್ಯಾಧಿಕಾರಿ ಡಾ.ಅಶ್ವಕ್ ಅಹಮದ್ ಮಾತನಾಡಿ, ಹಾಲಿನ ನೈರ್ಮಲ್ಯ ಕಾಪಾಡುವುದು, ರಾಸುಗಳಲ್ಲಿ ಕಂಡುಬರುವ ರೋಗಗಳನ್ನು ನಿಯಂತ್ರಿಸುವುದು ಹಾಗೂ ವೈಜ್ಞಾನಿಕ ರೀತಿಯಲ್ಲಿ ರಾಸುಗಳ ಪಾಲನೆ ಮತ್ತು ಪೋಷಣೆ ಮಾಡುವುದರಿಂದ ಹಾಲಿನ ಇಳುವರಿ ಹೆಚ್ಚಿಸಬಹುದು ಎಂದು ವಿವರಿಸಿದರು. ಸಂಘದ ವಿಸ್ತರಣಾಧಿಕಾರಿ ಎಸ್.ಶ್ರೀಕಾಂತ್, ೨೦೨೫-೨೬ನೇ ಸಾಲಿನ ಆಡಿಟ್ ವರದಿ ಹಾಗೂ ಜಮಾ-ಖರ್ಚಿನ ಲೆಕ್ಕಪತ್ರವನ್ನು ಸಭೆಯಲ್ಲಿ ಮಂಡಿಸಿದರು.
ಸಂಘದ ಕಾರ್ಯದರ್ಶಿ ವಿ.ಎಂ. ವೆಂಕಟೇಶಪ್ಪ ಮಾತನಾಡಿ, ಪ್ರಸಕ್ತ ಸಾಲಿನಲ್ಲಿ ಸಂಘವು ಶೇಕಡ ೧೦.೮೮ರಷ್ಟು ಲಾಭ ಹಾಗೂ ಶೇಕಡ ೭.೦೮ರಷ್ಟು ನಿವ್ವಳ ಲಾಭ ಗಳಿಸಿದೆ ಎಂದು ತಿಳಿಸಿದರು. ದೀಪಾವಳಿ ಹಬ್ಬದ ಸಂದರ್ಭದಲ್ಲಿ ಅರ್ಹ ಹಾಲು ಉತ್ಪಾದಕರಿಗೆ ಪ್ರತಿ ಲೀಟರ್ ಹಾಲಿಗೆ ೩.೩೭ ರೂಪಾಯಿಯಂತೆ ಬೋನಸ್ ನೀಡಲಾಗುವುದು ಎಂದು ಪ್ರಕಟಿಸಿದರು.
ಸಭೆಯಲ್ಲಿ ಸಂಘದ ಉಪಾಧ್ಯಕ್ಷರು, ಆಡಳಿತ ಮಂಡಳಿಯ ನಿರ್ದೇಶಕರು, ಸಿಬ್ಬಂದಿ ಹಾಗೂ ಹಾಲು ಉತ್ಪಾದಕ ರೈತರು ಭಾಗವಹಿಸಿದ್ದರು.
ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್