
ಬೆಂಗಳೂರು, 21 ಆಗಸ್ಟ್ (ಹಿ.ಸ.):
ಆ್ಯಂಕರ್:
ರಾಜಧಾನಿಯ ಮೆಜೆಸ್ಟಿಕ್ ರೈಲ್ವೆ ನಿಲ್ದಾಣದಲ್ಲಿ ಭಾಷಾ ವಿವಾದ ಭುಗಿಲೆದ್ದಿದ್ದು, ವಿಚಾರಣಾ ವಿಭಾಗದ ರೈಲ್ವೆ ಸಿಬ್ಬಂದಿಯೊಬ್ಬರು ಪ್ರಯಾಣಿಕರಿಗೆ “ಕನ್ನಡ ಬರುವುದಿಲ್ಲ, ಹಿಂದಿಯಲ್ಲೇ ಮಾತನಾಡಿ” ಎಂದು ಹೇಳಿದ ಘಟನೆ ಆಕ್ರೋಶಕ್ಕೆ ಕಾರಣವಾಗಿದೆ.
ವಿಚಾರಣಾ ವಿಭಾಗಕ್ಕೆ ತೆರಳಿದ ಪ್ರಯಾಣಿಕರು ಕನ್ನಡದಲ್ಲಿ ರೈಲ್ವೆ ಮಾಹಿತಿ ಕೇಳಿದಾಗ, ಸಿಬ್ಬಂದಿ ಕನ್ನಡದಲ್ಲಿ ಉತ್ತರಿಸಲು ನಿರಾಕರಿಸಿ ಹಿಂದಿಯಲ್ಲೇ ಮಾತನಾಡುವಂತೆ ಸೂಚಿಸಿದ್ದಾರೆ ಎನ್ನಲಾಗಿದೆ. ಇದರಿಂದ ಆಕ್ರೋಶಗೊಂಡ ಪ್ರಯಾಣಿಕರು ಸಿಬ್ಬಂದಿಯ ವರ್ತನೆಗೆ ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ.
ಕರ್ನಾಟಕದಲ್ಲಿದ್ದುಕೊಂಡು ಸ್ಥಳೀಯ ಭಾಷೆಯಲ್ಲಿ ಪ್ರಯಾಣಿಕರಿಗೆ ಮಾಹಿತಿ ನೀಡದಿರುವುದು ಸರಿಯಲ್ಲ ಎಂದು ಪ್ರಯಾಣಿಕರು ಆಕ್ಷೇಪ ವ್ಯಕ್ತಪಡಿಸಿ ಸಿಬ್ಬಂದಿಯನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಕೆಲಕಾಲ ನಿಲ್ದಾಣದಲ್ಲಿ ಗದ್ದಲದ ವಾತಾವರಣ ನಿರ್ಮಾಣವಾಗಿದ್ದು, ಬಳಿಕ ಇತರ ಸಿಬ್ಬಂದಿ ಹಾಗೂ ಭದ್ರತಾ ಸಿಬ್ಬಂದಿ ಮಧ್ಯಪ್ರವೇಶಿಸಿ ಪರಿಸ್ಥಿತಿಯನ್ನು ನಿಯಂತ್ರಿಸಿದ್ದಾರೆ.
ಘಟನೆಯ ವಿಡಿಯೋ ಹಾಗೂ ಮಾಹಿತಿ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ರೈಲ್ವೆ ಇಲಾಖೆಯಲ್ಲಿನ ಭಾಷಾ ಧೋರಣೆ ವಿರುದ್ಧ ಕನ್ನಡಪರ ಸಂಘಟನೆಗಳು ಹಾಗೂ ಸಾರ್ವಜನಿಕರಿಂದ ಆಕ್ರೋಶ ವ್ಯಕ್ತವಾಗುತ್ತಿದೆ.
---------------
ಹಿಂದೂಸ್ತಾನ್ ಸಮಾಚಾರ್ / BHARGAVI G R