
ಬೆಂಗಳೂರು, 21 ಆಗಸ್ಟ್ (ಹಿ.ಸ.):
ಆ್ಯಂಕರ್:ಗೃಹಲಕ್ಷ್ಮಿ ಯೋಜನೆಯ ಫಲಾನುಭವಿಗಳಿಗೆ ಹಲವು ತಿಂಗಳಿಂದ ₹2,000 ಕಂತುಗಳು ಬಾಕಿ ಉಳಿದಿದ್ದು, ಬಾಕಿ ಹಣ ಬಿಡುಗಡೆ ಮಾಡುವ ಬದಲು ಮನೆ-ಮನೆಗೆ ತೆರಳಿ ಬಯೋಮೆಟ್ರಿಕ್ ಹಾಗೂ ಮುಖ ಗುರುತಿನ ಪರಿಶೀಲನೆ ಹೆಸರಿನಲ್ಲಿ ಹೊಸ ಸಮೀಕ್ಷೆ ನಡೆಸಲು ಕಾಂಗ್ರೆಸ್ ಸರ್ಕಾರ ಮುಂದಾಗಿದೆ ಎಂದು ಪ್ರತಿಪಕ್ಷ ನಾಯಕ ಆರ್. ಅಶೋಕ ಆರೋಪಿಸಿದ್ದಾರೆ.
ಸಾಮಾಜಿಕ ಮಾಧ್ಯಮದಲ್ಲಿ ಹೇಳಿಕೆ ಬಿಡುಗಡೆ ಮಾಡಿರುವ ಅವರು, ಗೃಹಲಕ್ಷ್ಮಿಯರು ತಮ್ಮ ಹಕ್ಕಿನ ಹಣಕ್ಕಾಗಿ ಕಚೇರಿಯಿಂದ ಕಚೇರಿಗೆ ಅಲೆಯುವ ಪರಿಸ್ಥಿತಿ ನಿರ್ಮಾಣವಾಗಿದೆ. ಸರ್ಕಾರಕ್ಕೆ ಬಾಕಿ ಕಂತು ಬಿಡುಗಡೆ ಮಾಡುವ ಕಾಳಜಿಗಿಂತ ಫಲಾನುಭವಿಗಳ ಮರುಪರಿಶೀಲನೆ ಹೆಸರಿನಲ್ಲಿ ಕಾಲಹರಣ ಮಾಡುವುದೇ ಮುಖ್ಯವಾಗಿದೆ ಎಂದು ಅವರು ಟೀಕಿಸಿದ್ದಾರೆ.
ಸರ್ಕಾರದ ಲಿಖಿತ ಮಾಹಿತಿಯಂತೆ, ಯೋಜನೆ ಆರಂಭದಿಂದ ಜೂನ್ 2026ರವರೆಗೆ 3,13,297 ಫಲಾನುಭವಿಗಳು ಮೃತಪಟ್ಟಿದ್ದು, ಅವರಲ್ಲಿ 1,10,562 ಮಂದಿಯ ಖಾತೆಗಳಿಗೆ ಮರಣದ ನಂತರವೂ ₹117.31 ಕೋಟಿ ಜಮೆಯಾಗಿದೆ. ಆದರೆ ಸರ್ಕಾರದ ಲೆಕ್ಕಕ್ಕೆ ₹40.07 ಕೋಟಿ ಮಾತ್ರ ವಾಪಸ್ ಬಂದಿರುವುದು ಆಡಳಿತ ವೈಫಲ್ಯಕ್ಕೆ ಸಾಕ್ಷಿಯಾಗಿದೆ ಎಂದು ಅಶೋಕ ಹೇಳಿದ್ದಾರೆ.
ಗೃಹಲಕ್ಷ್ಮಿ ಯೋಜನೆಯಡಿ ಇದುವರೆಗೆ 1,24,48,938 ಫಲಾನುಭವಿಗಳಿಗೆ ₹76,951 ಕೋಟಿ ಪಾವತಿಸಲಾಗಿದೆ ಎಂದು ಸರ್ಕಾರವೇ ತಿಳಿಸಿದೆ. 32 ಕಂತುಗಳವರೆಗೆ ಹಣ ಪಾವತಿಸಿದ ಬಳಿಕವೂ ಬಾಕಿ ಕಂತುಗಳಿಗಾಗಿ ಮಹಿಳೆಯರು ಸರ್ಕಾರದ ಬಾಗಿಲು ತಟ್ಟಬೇಕಾದ ಸ್ಥಿತಿ ನಿರ್ಮಾಣವಾಗಿದೆ ಎಂದು ಅವರು ದೂರಿದ್ದಾರೆ.
ಸಮೀಕ್ಷೆ, ಆ್ಯಪ್, ಜಾಲತಾಣ, ಬಯೋಮೆಟ್ರಿಕ್ ಮತ್ತು ಮುಖ ಗುರುತಿನ ಪರಿಶೀಲನೆಯ ನೆಪದಲ್ಲಿ ಕಾಲಹರಣ ಮಾಡದೆ, ಹಲವು ತಿಂಗಳಿಂದ ಬಾಕಿ ಇರುವ ಗೃಹಲಕ್ಷ್ಮಿ ಕಂತುಗಳನ್ನು ತಕ್ಷಣ ಬಿಡುಗಡೆ ಮಾಡಬೇಕು. ಮೃತರ ಖಾತೆಗಳಿಗೆ ಜಮೆಯಾದ ಹಣವನ್ನು ವಾಪಸ್ ಪಡೆಯುವಲ್ಲಿ ಸರ್ಕಾರದ ವೈಫಲ್ಯಕ್ಕೂ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಉತ್ತರ ನೀಡಬೇಕು ಎಂದು ಆರ್. ಅಶೋಕ ಆಗ್ರಹಿಸಿದ್ದಾರೆ.
“ಮನೆ-ಮನೆಗೆ ಸಮೀಕ್ಷೆಗಿಂತ ಮೊದಲು, ಮನೆ-ಮನೆಗೆ ಬಾಕಿ ಹಣ ತಲುಪಿಸಿ. ರಾಜ್ಯದ ತಾಯಂದಿರು ಕೇಳುತ್ತಿರುವ ‘ನಮ್ಮ ₹2,000 ಎಲ್ಲಿದೆ?’ ಎಂಬ ಪ್ರಶ್ನೆಗೆ ಸರ್ಕಾರ ಉತ್ತರಿಸಲಿ” ಎಂದು ಅವರು ಒತ್ತಾಯಿಸಿದ್ದಾರೆ.
---------------
ಹಿಂದೂಸ್ತಾನ್ ಸಮಾಚಾರ್ / Rakesh.M.B.