
ಬೆಂಗಳೂರು, 21 ಆಗಸ್ಟ್ (ಹಿ.ಸ.):
ಆ್ಯಂಕರ್:ಭ್ರಷ್ಟಾಚಾರದ ಆರೋಪ ಎದುರಿಸುತ್ತಿರುವ ಸಚಿವ ಬಿ. ನಾಗೇಂದ್ರ ಅವರ ರಾಜೀನಾಮೆಗೆ ಆಗ್ರಹಿಸಿ ಬಿಜೆಪಿ ಶಾಸಕರು ಕಪ್ಪು ಟಿ-ಶರ್ಟ್ ಧರಿಸಿ ವಿಧಾನಸೌಧದತ್ತ ಪಾದಯಾತ್ರೆ ನಡೆಸುತ್ತಿದ್ದ ಸಂದರ್ಭದಲ್ಲಿ, ಅವರನ್ನು ವಿಧಾನಸೌಧದೊಳಗೆ ಪ್ರವೇಶಿಸದಂತೆ ಪೊಲೀಸರು ತಡೆಯಲು ಪ್ರಯತ್ನಿಸಿರುವುದು ಖಂಡನೀಯ ಎಂದು ಪ್ರತಿಪಕ್ಷ ನಾಯಕ ಆರ್. ಅಶೋಕ ಹೇಳಿದ್ದಾರೆ.
ಒಬ್ಬ ಸಚಿವರನ್ನು ರಕ್ಷಿಸಲು ಕಾಂಗ್ರೆಸ್ ಸರ್ಕಾರ ಜನರ ಧ್ವನಿಯಾಗಿರುವ ಪ್ರತಿಪಕ್ಷದ ಪ್ರತಿಭಟನೆಯನ್ನೇ ಹತ್ತಿಕ್ಕಲು ಮುಂದಾಗಿದೆ. ಭ್ರಷ್ಟಾಚಾರದ ವಿರುದ್ಧ ಧ್ವನಿ ಎತ್ತುವುದೂ ಕಾಂಗ್ರೆಸ್ ಸರ್ಕಾರದ ಕಣ್ಣಿಗೆ ಅಪರಾಧವೇ ಎಂದು ಅವರು ಪ್ರಶ್ನಿಸಿದ್ದಾರೆ.
ವಾಲ್ಮೀಕಿ ಅಭಿವೃದ್ಧಿ ನಿಗಮದ ಬಹುಕೋಟಿ ಅಕ್ರಮದ ಗಂಭೀರ ಆರೋಪಗಳಿಗೆ ಉತ್ತರ ನೀಡುವ ಬದಲು ಪ್ರತಿಭಟನಾನಿರತ ಬಿಜೆಪಿ ಶಾಸಕರನ್ನು ತಡೆಯುವ ಮೂಲಕ ಕಾಂಗ್ರೆಸ್ ಸರ್ಕಾರ ತನ್ನ ದುರಾಡಳಿತವನ್ನು ಮತ್ತಷ್ಟು ಬಹಿರಂಗಪಡಿಸಿದೆ ಎಂದು ಅಶೋಕ ಆರೋಪಿಸಿದ್ದಾರೆ.
ಬಿ. ನಾಗೇಂದ್ರ ಅವರ ರಾಜೀನಾಮೆ ಪಡೆಯುವವರೆಗೆ, ಜನರ ಹಣಕ್ಕೆ ನ್ಯಾಯ ಸಿಗುವವರೆಗೆ ಹಾಗೂ ಅಕ್ರಮದ ಸಂಪೂರ್ಣ ತನಿಖೆ ನಡೆಯುವವರೆಗೆ ಬಿಜೆಪಿ ಹೋರಾಟ ನಿಲ್ಲುವುದಿಲ್ಲ. ಕಾಂಗ್ರೆಸ್ ಸರ್ಕಾರ ಎಷ್ಟೇ ಪೊಲೀಸ್ ಬಲ ಬಳಸಿದರೂ ಜನರ ಪರ ಬಿಜೆಪಿ ನಡೆಸುತ್ತಿರುವ ಹೋರಾಟವನ್ನು ತಡೆಯಲು ಸಾಧ್ಯವಿಲ್ಲ ಎಂದು ಅವರು ಎಕ್ಸ್‌ನಲ್ಲಿ ತಿಳಿಸಿದ್ದಾರೆ.
---------------
ಹಿಂದೂಸ್ತಾನ್ ಸಮಾಚಾರ್ / Rakesh.M.B.