


ಬಳ್ಳಾರಿ, 21 ಆಗಸ್ಟ್ (ಹಿ.ಸ.)
ಆ್ಯಂಕರ್: ಜಿಲ್ಲೆಯಲ್ಲಿ ತಾಯಿ ಮತ್ತು ಶಿಶು ಮರಣ ಪ್ರಮಾಣವನ್ನು ಶೂನ್ಯಕ್ಕೆ ಇಳಿಸಲು ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಬೇಕು ಹಾಗೂ ತೊಡಕಿನ ಗರ್ಭಿಣಿಯರ (ಹೈ ರಿಸ್ಕ್ ಪ್ರೆಗ್ನೆನ್ಸಿ) ಆರೋಗ್ಯ ತಪಾಸಣೆ ಮತ್ತು ಸೂಕ್ತ ಚಿಕಿತ್ಸೆಗೆ ಹೆಚ್ಚಿನ ಆದ್ಯತೆ ನೀಡಬೇಕು ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ. ಅಲಕಾನಂದ ಡಿ. ಮಳಗಿ ಅವರು ಅಧಿಕಾರಿಗಳಿಗೆ ಮತ್ತು ವೈದ್ಯರಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳ ಸಭಾಂಗಣದಲ್ಲಿ ಆರೋಗ್ಯ ಇಲಾಖೆ, ಬಿಎಂಸಿಆರ್ಸಿ, ಜಿಲ್ಲಾ ಆಸ್ಪತ್ರೆ, ಸಮುದಾಯ ಆರೋಗ್ಯ ಕೇಂದ್ರ ಹಾಗೂ ಪ್ರಾಥಮಿಕ ಆರೋಗ್ಯ ಕೇಂದ್ರಗಳ ತಜ್ಞ ವೈದ್ಯರು ಮತ್ತು ವೈದ್ಯಾಧಿಕಾರಿಗಳೊಂದಿಗೆ ಹಮ್ಮಿಕೊಂಡಿದ್ದ ‘ತಾಯಿ ಮತ್ತು ಶಿಶು ಮರಣ ಪರಿಶೀಲನಾ ಸಭೆ'ಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಕ್ಷೇತ್ರ ಮಟ್ಟದಲ್ಲಿ ಗರ್ಭಧಾರಣೆಯಾದ 12 ವಾರಗಳ ಒಳಗೆ ಕಡ್ಡಾಯವಾಗಿ ಗರ್ಭಿಣಿಯರ ನೋಂದಣಿ ಮಾಡಬೇಕು. ರಕ್ತಹೀನತೆ ತಡೆಗಟ್ಟಲು ಐರನ್ ಮತ್ತು ಕ್ಯಾಲ್ಸಿಯಂ ಮಾತ್ರೆಗಳನ್ನು ನಿರಂತರವಾಗಿ ಒದಗಿಸಿ, ಅವುಗಳನ್ನು ಸೇವಿಸುವಂತೆ ನಿಗಾ ವಹಿಸಬೇಕು. ಪೌಷ್ಟಿಕ ಆಹಾರದ ಬಗ್ಗೆ ಮಾಹಿತಿ ನೀಡಬೇಕು ಎಂದು ಸೂಚಿಸಿದರು.
ರಕ್ತದೊತ್ತಡ, ಮಧುಮೇಹ, ಎಚ್ಐವಿ, ಹೆಚ್ಬಿಎಸ್ಎಜಿ ಪರೀಕ್ಷೆಗಳು ಹಾಗೂ ವೈದ್ಯರ ಸಲಹೆಯಂತೆ ಸ್ಕಾö್ಯನಿಂಗ್ ಮಾಡಿಸಿ, ಭ್ರೂಣದ ಬೆಳವಣಿಗೆ ಮತ್ತು ಸಂಭಾವ್ಯ ನ್ಯೂನತೆಗಳನ್ನು ಮುಂಚಿತವಾಗಿಯೇ ಪತ್ತೆಹಚ್ಚಬೇಕು ಎಂದು ನಿರ್ದೇಶನ ನೀಡಿದರು.
ಗಂಭೀರ ಆರೋಗ್ಯ ಸಮಸ್ಯೆಗಳಿರುವ ಗರ್ಭಿಣಿಯರ ಕುಟುಂಬಸ್ಥರನ್ನು ವಿಶ್ವಾಸಕ್ಕೆ ತೆಗೆದುಕೊಂಡು, ಮೇಲ್ಮಟ್ಟದ ಆಸ್ಪತ್ರೆಗೆ ಕಳುಹಿಸುವ ಮುನ್ನ ಮಾಹಿತಿ ನೀಡಿ, ಆಂಬ್ಯುಲೆನ್ಸ್ ಮೂಲಕ ಸಕಾಲದಲ್ಲಿ ರವಾನಿಸಬೇಕು ಎಂದು ಒತ್ತಿ ಹೇಳಿದರು.
*ಬಾಲ್ಯವಿವಾಹ ತಡೆ ಹಾಗೂ ಜನನಿ ಸುರಕ್ಷಾ ಯೋಜನೆ ಅನುಷ್ಠಾನ:*
ಜಿಲ್ಲಾ ಆರ್ಸಿಎಚ್ ಅಧಿಕಾರಿ ಡಾ. ಹನುಮಂತಪ್ಪ ಅವರು ಮಾತನಾಡಿ, ಜಿಲ್ಲೆಯಲ್ಲಿ ಬಾಲ್ಯವಿವಾಹ ತಡೆಗಟ್ಟಲು ನಿರಂತರ ಜಾಗೃತಿ ಮೂಡಿಸಬೇಕು ಮತ್ತು ಹೆಣ್ಣುಮಕ್ಕಳು 20 ವರ್ಷದ ನಂತರ ಗರ್ಭಧರಿಸುವಂತೆ ಅರಿವು ಮೂಡಿಸಬೇಕು ಎಂದರು.
ಮಕ್ಕಳ ನಡುವಿನ ಅಂತರ ಕಾಪಾಡಲು ಹೆರಿಗೆಯಾದ ತಕ್ಷಣವೇ 3 ರಿಂದ 4 ವರ್ಷಗಳವರೆಗೆ ‘ಪಿಪಿಐಯುಸಿಡಿ' (ವಂಕಿ) ಅಳವಡಿಸಿಕೊಳ್ಳಲು ಪ್ರೇರೇಪಿಸಬೇಕು. ಆಸ್ಪತ್ರೆಯಲ್ಲಿ ಸಹಜ ಹೆರಿಗೆಯಾದರೆ ಕನಿಷ್ಠ 48 ಗಂಟೆ ಹಾಗೂ ಸಿಜೇರಿಯನ್ ಆದಲ್ಲಿ ಒಂದು ವಾರ ಕಡ್ಡಾಯವಾಗಿ ದಾಖಲಿಸಿಕೊಂಡು ತಾಯಿ-ಮಗುವಿನ ಆರೈಕೆ ಮಾಡಬೇಕು. ಎದೆಹಾಲು ಉಣಿಸುವುದು, ಲಸಿಕೆ ಹಾಗೂ ಮಗುವನ್ನು ಬೆಚ್ಚಗಿಡಲು ‘ಕಾಂಗರೂ ಮದರ್ ಕೇರ್' ಬಗ್ಗೆ ತಾಯಂದಿರಿಗೆ ತಿಳಿವಳಿಕೆ ನೀಡಬೇಕು ಎಂದು ತಿಳಿಸಿದರು.
‘ಜನನಿ ಶಿಶು ಸುರಕ್ಷಾ ಕಾರ್ಯಕ್ರಮ'ದಡಿ ಉಚಿತ ಊಟ, ಔಷಧಿ, ರಕ್ತ, ಪರೀಕ್ಷೆಗಳು ಮತ್ತು ‘ನಗು ಮಗು' ವಾಹನದ ಸೌಲಭ್ಯ ಸಿಗುವಂತೆ ನೋಡಿಕೊಳ್ಳಬೇಕು ಹಾಗೂ ‘ಜನನಿ ಸುರಕ್ಷಾ ಯೋಜನೆ'ಯ ಪ್ರೋತ್ಸಾಹ ಧನ ಫಲಾನುಭವಿಗಳ ಬ್ಯಾಂಕ್ ಖಾತೆಗೆ ನೇರವಾಗಿ ಜಮೆಯಾಗುವುದನ್ನು ಖಚಿತಪಡಿಸಿಕೊಳ್ಳಬೇಕು ಎಂದು ಸೂಚಿಸಿದರು.
ಸಭೆಯಲ್ಲಿ ಮಕ್ಕಳ ವಿಭಾಗದ ಮುಖ್ಯಸ್ಥರಾದ ಡಾ. ವಿಶ್ವನಾಥ್, ಡಾ. ಬಾಲವೆಂಕಟೇಶ್ವರ, ಸ್ತ್ರೀ ರೋಗ ಹಾಗೂ ಪ್ರಸೂತಿ ತಜ್ಞರಾದ ಡಾ. ಉಷಾ, ಡಾ. ವೀಣಾ, ಮಕ್ಕಳ ಶಸ್ತçಚಿಕಿತ್ಸಕ ಡಾ. ದಿವಾಕರ್ ರೆಡ್ಡಿ, ಆರ್ಸಿಎಚ್ ಮೇಲ್ವಿಚಾರಕರು, ತಾಲ್ಲೂಕು ಆರೋಗ್ಯಾಧಿಕಾರಿಗಳು ಹಾಗೂ ಆಶಾ ಕಾರ್ಯಕರ್ತೆಯರು ಭಾಗವಹಿಸಿದ್ದರು.
---------------
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್