
ಬಳ್ಳಾರಿ, 21 ಆಗಸ್ಟ್ (ಹಿ.ಸ.)
ಆ್ಯಂಕರ್ : ಎಐಸಿಸಿ ಅಧ್ಯಕ್ಷ, ರಾಜ್ಯಸಭೆ ಪ್ರತಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರು ಭಾಷಣ ಮಾಡಿದ ಸ್ಥಳವನ್ನು ಶುಚಿಗೊಳಿಸಿ ಹೋಮ ಹವನ ನಡೆಸಿ ಅಸ್ಪೃಶ್ಯತೆ ಆಚರಿಸಿದ ಜಾತಿವಾದಿಗಳ ಮೇಲೆ 1989 ರ ಅಟ್ರಾಸಿಟಿ ಕಾಯ್ದೆ ಅಡಿಯಲ್ಲಿ ಪ್ರಕರಣವನ್ನು ದಾಖಲಿಸಿ ಉಗ್ರವಾದ ಕ್ರಮ ಕೈಗೊಳ್ಳಲು
ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿಯ ಡಿಜಿ ಸಾಗರ್ ಬಣ ಆಗ್ರಹಿಸಿದೆ.
ನಗರದಲ್ಲಿ ಶುಕ್ರವಾರ ನಡೆದ ಪ್ರತಿಭಟನೆಯ ನೇತೃತ್ವವಹಿಸಿದ್ದ ಎ. ಮಾನಯ್ಯ ಅವರು, ದೇಶಕ್ಕೆ ಸ್ವತಂತ್ರ ಬಂದು 80 ವರ್ಷ ಕಳೆದರೂ ಜಾತಿ ಪದ್ಧತಿ ನಿರ್ಮೂಲನೆಯಾಗಿಲ್ಲ. ರಾಜ್ಯಸಭೆ ಪ್ರತಿಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರು ಭಾಷಣ ಮಾಡಿದ ಸ್ಥಳವನ್ನು ಶುಚಿಗೊಳಿಸಿ ಹೋಮ ಹವನ ನಡೆಸಿ ದೇಶದಲ್ಲಿ ಜಾತಿ ಪದ್ಧತಿ ಇನ್ನೂ ಜೀವಂತವಾಗಿದೆ ಎನ್ನುವ ವಿಷಯವನ್ನು ದೇಶಕ್ಕೇ ದೇಶದ್ರೋಹಿಗಳು ತೋರಿಸಿದ್ದಾರೆ. ಅವರನ್ನು ಸರ್ಕಾರ ತಕ್ಷಣವೇ ಬಂಧಿಸಿ, ಶಿಕ್ಷೆಗೆ ಗುರಿಪಡಿಸಬೇಕು ಎಂದು ಆಗ್ರಹಿಸಿದರು.
ಡಾ. ರಾಜಕುಮಾರ್ ರಸ್ತೆಯ ನಾರಾಯಣರಾವ್ ಪಾರ್ಕ್ನಿಂದ ಪ್ರಾರಂಭವಾದ ಪ್ರತಿಭಟನಾ ಮೆರವಣಿಗೆಯು ಜಿಲ್ಲಾಡಳಿತ ಭವನದವರೆಗೆ ಆಗಮಿಸಿ, ಅಪರ ಜಿಲ್ಲಾಧಿಕಾರಿ ಮೊಹಮ್ಮದ್ ಜುಬೇರ್ ಅವರಿಗೆ ಮನವಿ ಸಲ್ಲಿಸುವ ಮೂಲಕ ಸಮಾರೋಪಗೊಂಡಿತು. ಪ್ರತಿಭಟನೆಯಲ್ಲಿ ಮಲ್ಲಿಕಾರ್ಜುನ ಖರ್ಗೆ ಅವರ ಅಭಿಮಾನಿಗಳು ಮತ್ತು ಕಾಂಗ್ರೆಸ್ ಕಾರ್ಯಕರ್ತರು ದೊಡ್ಡ ಸಂಖ್ಯೆಯಲ್ಲಿ ಸೇರಿದ್ದರು.
---------------
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್