
ಬೆಂಗಳೂರು, 21 ಆಗಸ್ಟ್ (ಹಿ.ಸ.):
ಆ್ಯಂಕರ್:ಸರ್ಕಾರದ ಹಣಕಾಸು ನಿರ್ವಹಣೆ ಹಾಗೂ ಆದಾಯ ಸಂಗ್ರಹ ಹೆಚ್ಚಳಕ್ಕೆ ಅಗತ್ಯ ಮಾರ್ಗದರ್ಶನ ನೀಡುವಂತೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಲೆಕ್ಕ ಪರಿಶೋಧಕರಿಗೆ ಕರೆ ನೀಡಿದರು.
ಬೆಂಗಳೂರಿನ ಅರಮನೆ ಮೈದಾನದಲ್ಲಿ ಭಾರತೀಯ ಲೆಕ್ಕ ಪರಿಶೋಧಕರ ಸಂಸ್ಥೆ ಶುಕ್ರವಾರ ಆಯೋಜಿಸಿದ್ದ ಸಂವಾದ ಸಮ್ಮೇಳನದಲ್ಲಿ ಮಾತನಾಡಿದ ಅವರು, ಸರ್ಕಾರ ತೆರೆದ ಪುಸ್ತಕದಂತಿದ್ದು, ಆಡಳಿತದಲ್ಲಿನ ತಪ್ಪುಗಳು ಹಾಗೂ ಸಂಪನ್ಮೂಲಗಳ ಸೋರಿಕೆ ತಡೆಗಟ್ಟಲು ಲೆಕ್ಕ ಪರಿಶೋಧಕರ ಸಲಹೆಗಳನ್ನು ಸ್ವಾಗತಿಸುವುದಾಗಿ ಹೇಳಿದರು.
ನಂಬಿಕೆ ಎಂಬುದು ಲೆಕ್ಕ ಪರಿಶೋಧಕರ ರಕ್ತದಲ್ಲೇ ಇದೆ. ಅದನ್ನು ಉಳಿಸಿಕೊಳ್ಳಬೇಕು. ಸರ್ಕಾರದ ಆಸ್ತಿ ಮತ್ತು ಆದಾಯವನ್ನು ರಕ್ಷಿಸುವಲ್ಲಿ ಹಾಗೂ ಸಂಪನ್ಮೂಲ ಕ್ರೋಢೀಕರಣದಲ್ಲಿ ಲೆಕ್ಕ ಪರಿಶೋಧಕರು ಪ್ರಮುಖ ಪಾತ್ರ ವಹಿಸಬೇಕು ಎಂದು ತಿಳಿಸಿದರು.
ಪ್ರಾಮಾಣಿಕ ತೆರಿಗೆ ಪಾವತಿದಾರರಿಗೆ ಅನಗತ್ಯ ಮಾನಸಿಕ ಕಿರುಕುಳ ನೀಡಬಾರದು. ಕರ್ನಾಟಕದಲ್ಲಿ ಶೇ.90ರಷ್ಟು ವ್ಯವಹಾರಗಳು ಅಧಿಕೃತವಾಗಿ ನಡೆಯುತ್ತಿದ್ದು, ಇತರೆ ರಾಜ್ಯಗಳಿಗೆ ಹೋಲಿಸಿದರೆ ರಾಜ್ಯದ ತೆರಿಗೆ ಶಿಸ್ತು ಉತ್ತಮವಾಗಿದೆ ಎಂದು ಹೇಳಿದರು.
ಕರ್ನಾಟಕ ದೇಶದ ಆರ್ಥಿಕ ಶಕ್ತಿಯಾಗಿ ಬೆಳೆಯುತ್ತಿದ್ದು, ಸಾಫ್ಟ್‌ವೇರ್ ರಫ್ತಿನಲ್ಲಿ ರಾಜ್ಯದ ಕೊಡುಗೆ ಶೇ.42ರಷ್ಟಿದೆ. ವಿಶ್ವದ ಪ್ರಮುಖ 500 ಕಂಪನಿಗಳು ಬೆಂಗಳೂರಿನಲ್ಲಿ ಕಾರ್ಯನಿರ್ವಹಿಸುತ್ತಿವೆ. ಹೊಸ ಹೂಡಿಕೆ, ಉದ್ಯಮ, ಉದ್ಯೋಗ ಸೃಷ್ಟಿ, ಸಂಶೋಧನೆ ಮತ್ತು ರಫ್ತಿಗೆ ಕರ್ನಾಟಕ ಅತ್ಯುತ್ತಮ ಕೇಂದ್ರವಾಗಿದೆ ಎಂದರು.
ದಕ್ಷಿಣ ಭಾರತ ದೇಶದ ಆರ್ಥಿಕ ಪ್ರಗತಿಗೆ ಪ್ರಮುಖ ಕೊಡುಗೆ ನೀಡುತ್ತಿದೆ. ಕರ್ನಾಟಕ ಸೇರಿದಂತೆ ದಕ್ಷಿಣ ಭಾರತದ ರಾಜ್ಯಗಳಿಗೆ ನ್ಯಾಯಯುತ ಪಾಲು ದೊರೆಯಬೇಕು. ರಾಜ್ಯ ನೀಡುತ್ತಿರುವ ಕೊಡುಗೆ ಮತ್ತು ಪಡೆಯುತ್ತಿರುವ ಅನುದಾನದ ನಡುವಿನ ವ್ಯತ್ಯಾಸದ ಬಗ್ಗೆ ಕೇಂದ್ರದ ಗಮನಕ್ಕೆ ತಂದಿದ್ದೇವೆ ಎಂದರು.
ಕರ್ನಾಟಕ ದೇಶದಲ್ಲಿ ಎರಡನೇ ಅತಿ ಹೆಚ್ಚು ತೆರಿಗೆ ಪಾವತಿಸುವ ರಾಜ್ಯವಾಗಿದ್ದು, ತಂತ್ರಜ್ಞಾನ, ಮಾಹಿತಿ ತಂತ್ರಜ್ಞಾನ, ಜೈವಿಕ ತಂತ್ರಜ್ಞಾನ ಹಾಗೂ ಅಂತರಿಕ್ಷ ಕ್ಷೇತ್ರ ಸೇರಿದಂತೆ ಹಲವು ವಲಯಗಳಲ್ಲಿ ಮುಂಚೂಣಿಯಲ್ಲಿದೆ ಎಂದು ಹೇಳಿದರು.
ಸಿಎಸ್ಆರ್ ನಿಧಿ ಸದ್ಬಳಕೆಗೆ ಮಾರ್ಗದರ್ಶನ ನೀಡಿ
ಉದ್ಯಮಗಳು ತಮ್ಮ ಸಾಮಾಜಿಕ ಹೊಣೆಗಾರಿಕೆ ನಿಧಿಯನ್ನು ಗ್ರಾಮೀಣ ಪ್ರದೇಶಗಳ ಪ್ರಾಥಮಿಕ ಶಿಕ್ಷಣಕ್ಕೆ ಹೆಚ್ಚು ಬಳಸುವಂತೆ ಲೆಕ್ಕ ಪರಿಶೋಧಕರು ಮಾರ್ಗದರ್ಶನ ನೀಡಬೇಕು. ಜನರು ಶಿಕ್ಷಣ ಹಾಗೂ ಉದ್ಯೋಗಕ್ಕಾಗಿ ನಗರಗಳಿಗೆ ವಲಸೆ ಬರುವುದನ್ನು ತಡೆಯಲು ಗ್ರಾಮೀಣ ಭಾಗದಲ್ಲೇ ಉತ್ತಮ ಅವಕಾಶಗಳನ್ನು ಸೃಷ್ಟಿಸಬೇಕು ಎಂದು ಕರೆ ನೀಡಿದರು.
ಬೆಂಗಳೂರು ಜನಸಂಖ್ಯೆ ಕಳೆದ 25 ವರ್ಷಗಳಲ್ಲಿ ಸುಮಾರು 70 ಲಕ್ಷದಿಂದ 1.40 ಕೋಟಿಗೆ ಏರಿಕೆಯಾಗಿದೆ. ವಾಹನಗಳ ಸಂಖ್ಯೆಯೂ ಹೆಚ್ಚಿದೆ. ನಗರದಲ್ಲಿನ ಸಂಚಾರ ದಟ್ಟಣೆ ನಿವಾರಣೆಗೆ ಸುರಂಗ ರಸ್ತೆ ಸೇರಿದಂತೆ ಹಲವು ಯೋಜನೆಗಳನ್ನು ಕೈಗೊಳ್ಳಲಾಗುತ್ತಿದೆ ಎಂದು ತಿಳಿಸಿದರು.
ಸರ್ಕಾರ ಪ್ರತಿವರ್ಷ ಗ್ಯಾರಂಟಿ ಯೋಜನೆಗಳಿಗೆ ಸುಮಾರು ₹52 ಸಾವಿರ ಕೋಟಿ, ರೈತರ ಪಂಪ್‌ಸೆಟ್‌ಗಳಿಗೆ ಉಚಿತ ವಿದ್ಯುತ್ ಸೇರಿದಂತೆ ವಿವಿಧ ಸಾಮಾಜಿಕ ಭದ್ರತಾ ಯೋಜನೆಗಳಿಗೆ ದೊಡ್ಡ ಮೊತ್ತವನ್ನು ವೆಚ್ಚ ಮಾಡುತ್ತಿದೆ. ವ್ಯಾಪಾರ ಮತ್ತು ಉದ್ಯಮಗಳಿಗೆ ತೊಂದರೆಯಾಗದಂತೆ ಸರ್ಕಾರದ ಆದಾಯ ಹೆಚ್ಚಿಸುವ ಮಾರ್ಗಗಳನ್ನು ಲೆಕ್ಕ ಪರಿಶೋಧಕರು ಸೂಚಿಸಬೇಕು ಎಂದು ಹೇಳಿದರು.
ಭಾರತೀಯ ಲೆಕ್ಕ ಪರಿಶೋಧಕರ ಸಂಸ್ಥೆಗೆ ಅಗತ್ಯವಿರುವ ಜಾಗದ ಕುರಿತು ಮುಂದಿನ ವಾರ ತಮ್ಮನ್ನು ಭೇಟಿ ಮಾಡುವಂತೆ ಸಂಸ್ಥೆಯ ಪ್ರತಿನಿಧಿಗಳಿಗೆ ಸೂಚಿಸಿದ ಮುಖ್ಯಮಂತ್ರಿ, ಬೇಡಿಕೆಯನ್ನು ಪರಿಶೀಲಿಸಿ ಪರಿಹರಿಸುವುದಾಗಿ ಭರವಸೆ ನೀಡಿದರು.
“ದುಡ್ಡು ಮತ್ತು ರಕ್ತ ಎರಡೂ ಹರಿಯುತ್ತಿರಬೇಕು. ರಕ್ತ ಒಂದೇ ಕಡೆ ನಿಂತರೆ ಆರೋಗ್ಯ ಹದಗೆಡುತ್ತದೆ. ಹಣ ಒಂದೇ ಕಡೆ ಸೇರಿದರೂ ಸಮಸ್ಯೆ ಉಂಟಾಗುತ್ತದೆ” ಎಂದು ಸಾಯಿಬಾಬಾ ಅವರ ಮಾತನ್ನು ಸ್ಮರಿಸಿದ ಅವರು, ಆರ್ಥಿಕ ಚಟುವಟಿಕೆ ನಿರಂತರವಾಗಿ ನಡೆಯಬೇಕು ಎಂದು ಹೇಳಿದರು.
---------------
ಹಿಂದೂಸ್ತಾನ್ ಸಮಾಚಾರ್ / Rakesh.M.B.