
ಬೆಂಗಳೂರು, 21 ಆಗಸ್ಟ್ (ಹಿ.ಸ.)
ಆ್ಯಂಕರ್:
ನಗರದ ಜನನಿಬಿಡ ವಾಣಿಜ್ಯ ಪ್ರದೇಶವಾದ ಚಿಕ್ಕಪೇಟೆಯಲ್ಲಿ ಸುಮಾರು 30 ವರ್ಷ ಹಳೆಯ ಮರವನ್ನು ಜೆಸಿಬಿ ಬಳಸಿ ಕದ್ದು ಪರಾರಿಯಾಗಿರುವ ವಿಚಿತ್ರ ಘಟನೆ ಬೆಳಕಿಗೆ ಬಂದಿದೆ.
ಚಿಕ್ಕಪೇಟೆಯ ಬಿವಿಕೆ ಅಯ್ಯಂಗಾರ್ ರಸ್ತೆಯಲ್ಲಿ ಘಟನೆ ನಡೆದಿದ್ದು, ರಾತ್ರಿ ವೇಳೆ ಕಿಡಿಗೇಡಿಗಳು ಮರವನ್ನು ಬುಡಸಮೇತ ತೆರವುಗೊಳಿಸಿ ಹೊತ್ತೊಯ್ದಿದ್ದಾರೆ ಎನ್ನಲಾಗಿದೆ. ಹಲವು ವರ್ಷಗಳಿಂದ ರಸ್ತೆಯ ಬದಿಯಲ್ಲಿ ಹಸಿರು ನೀಡುತ್ತಿದ್ದ ಮರ ಏಕಾಏಕಿ ನಾಪತ್ತೆಯಾಗಿರುವುದು ಸ್ಥಳೀಯರಲ್ಲಿ ಅಚ್ಚರಿ ಹಾಗೂ ಆಕ್ರೋಶಕ್ಕೆ ಕಾರಣವಾಗಿದೆ.
ಮರವನ್ನು ತೆರವುಗೊಳಿಸುವ ವೇಳೆ ಪಕ್ಕದ ಫುಟ್‌ಪಾತ್‌ಗೂ ಹಾನಿಯಾಗಿದ್ದು, ಕೃತ್ಯವನ್ನು ಪೂರ್ವಯೋಜಿತವಾಗಿ ನಡೆಸಲಾಗಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ. ಮರ ಕಳವು ಮಾಡಿದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಸಾರ್ವಜನಿಕರು ಆಗ್ರಹಿಸಿದ್ದಾರೆ.
ಘಟನೆ ಸಂಬಂಧ ಸಿಟಿ ಮಾರ್ಕೆಟ್ ಪೊಲೀಸ್ ಠಾಣೆಯಲ್ಲಿ ತನಿಖೆ ಮುಂದುವರಿದಿದ್ದು, ಮರವನ್ನು ಯಾರು ಮತ್ತು ಯಾವ ಉದ್ದೇಶಕ್ಕಾಗಿ ತೆರವುಗೊಳಿಸಿದ್ದಾರೆ ಎಂಬುದರ ಕುರಿತು ಪೊಲೀಸರು ಪರಿಶೀಲನೆ ನಡೆಸುತ್ತಿದ್ದಾರೆ.
---------------
ಹಿಂದೂಸ್ತಾನ್ ಸಮಾಚಾರ್ / BHARGAVI G R