
ಕೊಪ್ಪಳ, 21 ಆಗಸ್ಟ್ (ಹಿ.ಸ.)
ಆ್ಯಂಕರ್ : ಕೊಪ್ಪಳ ತೋಟಗಾರಿಕೆ ಇಲಾಖೆಯಿಂದ ಆ. 15 ರಿಂದ ಆ. 20ರವರೆಗೆ ಆರು ದಿನಗಳ ಕಾಲ ನಡೆದ 10ನೇ ವರ್ಷದ ‘ಸಸ್ಯಸಂತೆ ಮತ್ತು ತೋಟಗಾರಿಕೆ ಅಭಿಯಾನ–2026’ಕ್ಕೆ ಸಾರ್ವಜನಿಕರು ಹಾಗೂ ರೈತರ ಅಭೂತಪೂರ್ವ ಬೆಂಬಲದೊಂದಿಗೆ ಯಶಸ್ವಿಯಾಗಿ ಮುಕ್ತಾಯಗೊಂಡಿದೆ. ಒಟ್ಟಾರೆ 12,000ಕ್ಕೂ ಹೆಚ್ಚು ರೈತರು ಮತ್ತು ಸಾರ್ವಜನಿಕರು ಪಾಲ್ಗೊಂಡ ಈ ಮೇಳದಲ್ಲಿ 55 ಲಕ್ಷಕ್ಕೂ ಅಧಿಕ ಸಸಿಗಳು ಮತ್ತು ಪರಿಕರಗಳ ಬೇಡಿಕೆಯ ಬೃಹತ್ ವಹಿವಾಟು ನಡೆದಿದೆ.
ಕಡಿಮೆ ಖರ್ಚು, ಕಡಿಮೆ ನಿರ್ವಹಣೆ ಮತ್ತು ನಿರಂತರ ಆದಾಯ ಹಾಗೂ ಬದುವಿನಲ್ಲಿ ತೋಟಗಾರಿಕೆ ಬೆಳೆಗಳು, ಒಣ ಬೇಸಾಯ, ಬರ ನಿರ್ವಹಣೆ ಮತ್ತು ಮಳೆ ನೀರು ಕೊಯ್ಲು ಪರಿಕಲ್ಪನೆಯೊಂದಿಗೆ ಈ ಅಭಿಯಾನವನ್ನು ಆಯೋಜಿಸಲಾಗಿತ್ತು.
*ವಿದೇಶಿ ಹಣ್ಣಿನ ಸಸಿಗಳಿಗೆ ಭಾರಿ ಬೇಡಿಕೆ:* ಅತ್ಯಂತ ದುಬಾರಿ ಮಿಯಾಜಾಕಿ ಮಾವಿನ 2,000ಕ್ಕೂ ಅಧಿಕ ಗಿಡಗಳಿಗೆ ಮತ್ತು 2,000ಕ್ಕೂ ಹೆಚ್ಚು ಅವಕಾಡೋ ಗಿಡಗಳಿಗೆ ಮುಂಗಡ ನೋಂದಣಿ ಆಗಿದೆ.
ಮೆಕಡೋಮಿಯಾ, ಮ್ಯಾಂಗೋಸ್ಟಿನ್, ಲಿಚ್ಚಿ, ವಿದೇಶಿ ಹಲಸು ಹಾಗೂ ಚೆರ್ರಿ ಸೇರಿದಂತೆ 5,000ಕ್ಕೂ ಅಧಿಕ ವಿದೇಶಿ ಹಣ್ಣಿನ ಸಸಿಗಳ ಖರೀದಿಗೆ ಬೇಡಿಕೆ ವ್ಯಕ್ತವಾಗಿದೆ.
*ತೋಟಗಾರಿಕೆ ವಿಸ್ತರಣೆ ಮತ್ತು ಮಾರಾಟದ ಪ್ರಮುಖ ಅಂಶಗಳು:*
*ಪ್ರದೇಶ ವಿಸ್ತರಣೆ:* ಈ ವರ್ಷ 3,000 ಎಕರೆಗೂ ಹೆಚ್ಚಿನ ಪ್ರದೇಶದಲ್ಲಿ ತೋಟಗಾರಿಕೆ ಬೆಳೆಗಳನ್ನು ಬೆಳೆಯಲು ರೈತರು ಮುಂಗಡ ನೋಂದಣಿ ಮಾಡಿಕೊಂಡಿದ್ದಾರೆ.
*ಹೈಬ್ರಿಡ್ ತೆಂಗು:* ಕೋಲಂಗಟ್ ಆರೇಂಜ್, ಚೌಘಾಟ್ ಗ್ರೀನ್, ಗಂಗಾಬಾಂಡ್ ಮತ್ತು ಟ್ಠಿಡಿ ತಳಿಯ ತೆಂಗಿನ ಸಸಿಗಳನ್ನು 500ಕ್ಕೂ ಅಧಿಕ ಎಕರೆಗಳಲ್ಲಿ ನಾಟಿ ಮಾಡಲು ಬೇಡಿಕೆ ಬಂದಿದೆ.
*ಮಾರಾಟ ಹಾಗೂ ಮುಂಗಡ ಬುಕಿಂಗ್:* ಇಲಾಖಾ ಸಸ್ಯಾಗಾರದಿಂದ ಕೇಸರ್ ಮಾವು, ಲಿಂಬೆ, ತೆಂಗು, ತರಕಾರಿ ಹಾಗೂ ಅಲಂಕಾರಿಕ ಗಿಡಗಳು ಸೇರಿ ಒಟ್ಟು 3.50 ಲಕ್ಷಕ್ಕೂ ಹೆಚ್ಚು ಸಸಿಗಳು ಮಾರಾಟವಾಗಿದ್ದು, 4.50 ಲಕ್ಷ ಸಸಿಗಳಿಗೆ ಮುಂಗಡ ಬೇಡಿಕೆ ಬಂದಿದೆ.
*ಸಾವಯವ ಪರಿಕರಗಳು:* 100 ಟನ್ ಎರೆಹುಳು ಗೊಬ್ಬರ, 5,000 ಲೀಟರ್ ಎರೆಜಲ, 5,000 ಕೆ.ಜಿ. ಬೇವಿನ ಪುಡಿ ಹಾಗೂ 500 ಕೆ.ಜಿ. ಜೈವಿಕ ಪರಿಕರಗಳ ಮಾರಾಟವಾಗಿದೆ.
ಕಾರ್ಯಕ್ರಮದಲ್ಲಿ ಮಾದರಿ ಕೈತೋಟ, ತಾರಸಿ ತೋಟ, ಹೈಡ್ರೋಪೋನಿಕ್ಸ್, ವರ್ಟಿಕಲ್ ಗಾರ್ಡನ್ ಹಾಗೂ ಬೋರ್ವೆಲ್ ರೀಚಾರ್ಜ್ ಪ್ರಾತ್ಯಕ್ಷಿಕೆಗಳನ್ನು ಪ್ರದರ್ಶಿಸಲಾಯಿತು. ಜೊತೆಗೆ, 300ಕ್ಕೂ ಹೆಚ್ಚು ರೈತರು ತಾಳೆಬೆಳೆ ಬೆಳೆಯಲು ಆಸಕ್ತಿ ತೋರಿದ್ದು, ಗಿಣಗೇರಾ ಪ್ರಯೋಗಾಲಯದಿಂದ ಮಣ್ಣು-ನೀರು ಪರೀಕ್ಷೆ ಮಾಹಿತಿ, ರಫ್ತು ಆಧಾರಿತ ಬಾಳೆ ಬೇಸಾಯ ಮತ್ತು ಸಾವಯವ ಹಲಸು ಬೆಳೆಯ ಕುರಿತು ಸಾವಿರಾರು ರೈತರಿಗೆ ತಾಂತ್ರಿಕ ಮಾಹಿತಿ ಹಾಗೂ ಮಾರ್ಗದರ್ಶನ ನೀಡಲಾಯಿತು ಎಂದು ಕೊಪ್ಪಳ ತೋಟಗಾರಿಕೆ ಇಲಾಖೆ ಜಂಟಿ ನಿರ್ದೇಶಕರಾದ ಕೃಷ್ಣ ಸಿ. ಉಕ್ಕುಂದ ಅವರು ತಿಳಿಸಿದ್ದಾರೆ.
---------------
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್