
ಬೆಂಗಳೂರು, 21 ಆಗಸ್ಟ್ (ಹಿ.ಸ.):
ಆ್ಯಂಕರ್:
ಬೆಂಗಳೂರಿನ ಎಲೆಕ್ಟ್ರಾನಿಕ್ ಸಿಟಿ ಟೋಲ್ ಬಳಿ ಕಾರಿನಲ್ಲಿ ಅಕ್ರಮವಾಗಿ ಸಾಗಿಸುತ್ತಿದ್ದ ಬರೋಬ್ಬರಿ ₹9 ಕೋಟಿ ನಗದನ್ನು ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ.
ಹೊಸೂರು ರಸ್ತೆಯಲ್ಲಿ ತಪಾಸಣೆ ನಡೆಸುತ್ತಿದ್ದ ವೇಳೆ, ಕೆಎಲ್ 20 ಟಿ 8629 ನೋಂದಣಿ ಸಂಖ್ಯೆಯ ಹ್ಯುಂಡೈ ಕ್ರೆಟಾ ಕಾರಿನಲ್ಲಿ ಹಣ ಸಾಗಿಸುತ್ತಿರುವುದು ಪತ್ತೆಯಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಂಧು ಜ್ಯುವೆಲ್ಲರ್ಸ್‌ಗೆ ನಂಟು ಹೊಂದಿದ್ದಾರೆ ಎನ್ನಲಾದ ಸಚಿನ್ ಸೇರಿದಂತೆ ಇಬ್ಬರನ್ನು ಅಧಿಕಾರಿಗಳು ಬಂಧಿಸಿದ್ದಾರೆ.
ಕಾರಿನಲ್ಲಿ ₹9 ಕೋಟಿ ಪತ್ತೆಯಾದ ಬಳಿಕ ಆರೋಪಿಗಳ ಮನೆಗಳ ಮೇಲೂ ದಾಳಿ ನಡೆಸಿದ ಅಧಿಕಾರಿಗಳಿಗೆ ಮತ್ತಷ್ಟು ₹1.30 ಕೋಟಿ ನಗದು ದೊರೆತಿದ್ದು, ಅದನ್ನೂ ಜಪ್ತಿ ಮಾಡಿದ್ದಾರೆ. ಒಟ್ಟಾರೆ ₹10.30 ಕೋಟಿ ನಗದು ವಶಪಡಿಸಿಕೊಳ್ಳಲಾಗಿದೆ.
ನಗದು, ಕಾರು ಹಾಗೂ ಬಂಧಿತ ಆರೋಪಿಗಳನ್ನು ಮುಂದಿನ ತನಿಖೆಗಾಗಿ ಆದಾಯ ತೆರಿಗೆ ಇಲಾಖೆಯ ವಶಕ್ಕೆ ಒಪ್ಪಿಸಲಾಗಿದೆ. ಜ್ಯುವೆಲ್ಲರಿ ವ್ಯಾಪಾರದ ಹೆಸರಿನಲ್ಲಿ ಹವಾಲಾ ಅಥವಾ ಅಕ್ರಮ ಹಣಕಾಸು ವಹಿವಾಟು ನಡೆಸಲಾಗುತ್ತಿತ್ತೇ ಎಂಬ ಬಗ್ಗೆ ತನಿಖೆ ಮುಂದುವರಿದಿದೆ ಎಂದು ತೆರಿಗೆ ಇಲಾಖೆ ಮೂಲಗಳು ತಿಳಿಸಿವೆ.
---------------
ಹಿಂದೂಸ್ತಾನ್ ಸಮಾಚಾರ್ / BHARGAVI G R