ಎರಡನೇ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ: ತುಮಕೂರಿನಲ್ಲಿ ನಿರ್ಮಾಣದ ಪ್ರಸ್ತಾವನೆ ಇಲ್ಲ:ಎಂ.ಬಿ.ಪಾಟೀಲ
ಬೆಂಗಳೂರು, 20 ಆಗಸ್ಟ್ (ಹಿ.ಸ.): ಆ್ಯಂಕರ್: ಬೆಂಗಳೂರಿನ ಎರಡನೇ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ನಿರ್ಮಾಣಕ್ಕೆ ಸೂಕ್ತ ಜಾಗದ ಹುಡುಕಾಟ ಪ್ರಕ್ರಿಯೆ ತೀವ್ರಗೊಂಡಿದೆ. ಈ ಕುರಿತು ವಿಧಾನಸಭೆಯಲ್ಲಿ ಶಾಸಕ ಜ್ಯೋತಿ ಗಣೇಶ್ ಜಿ.ಬಿ. ಅವರ ಪ್ರಶ್ನೆಗೆ ಉತ್ತರಿಸಿರುವ ಬೃಹತ್ ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ
Banglore second airport


ಬೆಂಗಳೂರು, 20 ಆಗಸ್ಟ್ (ಹಿ.ಸ.):

ಆ್ಯಂಕರ್:

ಬೆಂಗಳೂರಿನ ಎರಡನೇ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ನಿರ್ಮಾಣಕ್ಕೆ ಸೂಕ್ತ ಜಾಗದ ಹುಡುಕಾಟ ಪ್ರಕ್ರಿಯೆ ತೀವ್ರಗೊಂಡಿದೆ. ಈ ಕುರಿತು ವಿಧಾನಸಭೆಯಲ್ಲಿ ಶಾಸಕ ಜ್ಯೋತಿ ಗಣೇಶ್ ಜಿ.ಬಿ. ಅವರ ಪ್ರಶ್ನೆಗೆ ಉತ್ತರಿಸಿರುವ ಬೃಹತ್ ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ್, ತುಮಕೂರಿನಲ್ಲಿ ಎರಡನೇ ವಿಮಾನ ನಿಲ್ದಾಣ ನಿರ್ಮಿಸುವ ಯಾವುದೇ ಪ್ರಸ್ತಾವನೆ ಸದ್ಯಕ್ಕೆ ಸರ್ಕಾರದ ಮುಂದೆ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ತುಮಕೂರಿನಲ್ಲಿ ವಿಮಾನ ನಿಲ್ದಾಣ ನಿರ್ಮಿಸುವಂತೆ ಉಪಮುಖ್ಯಮಂತ್ರಿ ಜಿ. ಪರಮೇಶ್ವರ್ ಹಾಗೂ ಕೇಂದ್ರ ಸಚಿವ ವಿ. ಸೋಮಣ್ಣ ಸೇರಿದಂತೆ ಹಲವರು ಬೇಡಿಕೆ ಹಾಗೂ ಒತ್ತಾಯ ಮಂಡಿಸಿದ್ದರು. ಆದರೆ, ಕೇಂದ್ರ ಸರ್ಕಾರದ ‘ಗ್ರೀನ್‌ಫೀಲ್ಡ್ ವಿಮಾನ ನಿಲ್ದಾಣ ನೀತಿ-2008’ರ ನಿಯಮಗಳ ಪ್ರಕಾರ, ಈಗಾಗಲೇ ಕಾರ್ಯಾಚರಣೆಯಲ್ಲಿರುವ ವಿಮಾನ ನಿಲ್ದಾಣದ 150 ಕಿಲೋಮೀಟರ್ ವ್ಯಾಪ್ತಿಯೊಳಗೆ ಮತ್ತೊಂದು ಹೊಸ ವಿಮಾನ ನಿಲ್ದಾಣಕ್ಕೆ ಸಾಮಾನ್ಯವಾಗಿ ಅನುಮತಿ ದೊರೆಯುವುದಿಲ್ಲ. ಈ ನಿಯಮವೇ ತುಮಕೂರಿನಲ್ಲಿ ವಿಮಾನ ನಿಲ್ದಾಣ ನಿರ್ಮಾಣಕ್ಕೆ ಪ್ರಮುಖ ಅಡ್ಡಿಯಾಗಿದೆ ಎಂದು ಸಚಿವರು ತಿಳಿಸಿದ್ದಾರೆ.

ತುಮಕೂರು ಹೆಸರು ಕೈಬಿಡಲಾಗಿದೆ

ಬೆಂಗಳೂರಿನ ಎರಡನೇ ವಿಮಾನ ನಿಲ್ದಾಣಕ್ಕಾಗಿ ರಾಜ್ಯ ಸರ್ಕಾರ ಮೂರು ಸಂಭಾವ್ಯ ಸ್ಥಳಗಳನ್ನು ಗುರುತಿಸಿ ಮುಂದುವರಿದಿದೆ. ತಾಂತ್ರಿಕ ಸಂಸ್ಥೆಯೊಂದನ್ನು ಸಹ ನೇಮಿಸಲಾಗಿದ್ದು, ಬೆಂಗಳೂರು ದಕ್ಷಿಣ ಜಿಲ್ಲೆಯ ಕನಕಪುರ ರಸ್ತೆಯಲ್ಲಿರುವ ಸೋಮನಹಳ್ಳಿ, ಅದೇ ರಸ್ತೆಯ ಚೂಡಹಳ್ಳಿ ಹಾಗೂ ನೆಲಮಂಗಲ ಸಮೀಪದ ಗೂಡಮಾರನಹಳ್ಳಿಯನ್ನು ಸಂಭಾವ್ಯ ತಾಣಗಳಾಗಿ ಪರಿಶೀಲಿಸಲಾಗುತ್ತಿದೆ.

ಇದರೊಂದಿಗೆ ಬೆಂಗಳೂರು ದಕ್ಷಿಣದ ಹರೋಹಳ್ಳಿ ಪ್ರದೇಶದಲ್ಲಿಯೂ ಸೂಕ್ತ ಜಾಗದ ಲಭ್ಯತೆ ಕುರಿತು ಪರಿಶೀಲನೆ ಹಾಗೂ ತಪಾಸಣೆ ಕಾರ್ಯಗಳು ಮುಂದುವರಿದಿವೆ ಎಂದು ಸರ್ಕಾರ ಅಧಿಕೃತ ಮಾಹಿತಿ ನೀಡಿದೆ.

ಹೀಗಾಗಿ ಬೆಂಗಳೂರಿನ ಎರಡನೇ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಸಂಭಾವ್ಯ ತಾಣಗಳ ಪಟ್ಟಿಯಿಂದ ಸದ್ಯಕ್ಕೆ ತುಮಕೂರು ಹೊರಗುಳಿದಿದ್ದು, ಬೆಂಗಳೂರು ಸುತ್ತಮುತ್ತಲಿನ ಪ್ರದೇಶಗಳಲ್ಲೇ ಜಾಗದ ಆಯ್ಕೆ ಪ್ರಕ್ರಿಯೆ ಮುಂದುವರಿದಿದೆ.

--

ಹಿಂದೂಸ್ತಾನ್ ಸಮಾಚಾರ್ / BHARGAVI G R


 rajesh pande