
ಬೆಂಗಳೂರು, 20 ಆಗಸ್ಟ್ (ಹಿ.ಸ.)
ಆ್ಯಂಕರ್:
ರಾಜ್ಯಾದ್ಯಂತ ಆಹಾರದ ಗುಣಮಟ್ಟ ಮತ್ತು ಸುರಕ್ಷತೆ ಖಚಿತಪಡಿಸಿಕೊಳ್ಳಲು ಆಹಾರ ಸುರಕ್ಷತಾ ಇಲಾಖೆ ಕಠಿಣ ಕ್ರಮ ಮುಂದುವರಿಸಿದೆ. ಇದರ ಭಾಗವಾಗಿ ರಾಜ್ಯದ 36 ರೈಲು ನಿಲ್ದಾಣಗಳು ಹಾಗೂ 112 ಆಹಾರ ಮಳಿಗೆಗಳಲ್ಲಿ ದಿಢೀರ್ ತಪಾಸಣೆ ನಡೆಸಲಾಗಿದೆ.
ಬೆಂಗಳೂರು, ಮೈಸೂರು, ಹುಬ್ಬಳ್ಳಿ ಮತ್ತು ಮಂಗಳೂರು ಸೇರಿದಂತೆ ಪ್ರಮುಖ ರೈಲು ನಿಲ್ದಾಣಗಳಲ್ಲಿನ ಆಹಾರ ಮಳಿಗೆಗಳಲ್ಲಿ ಪರಿಶೀಲನೆ ನಡೆಸಿದ ವೇಳೆ ಹಲವು ಗಂಭೀರ ಲೋಪಗಳು ಪತ್ತೆಯಾಗಿವೆ. ಮೈಸೂರಿನ ಹೋಟೆಲ್‌ವೊಂದರಲ್ಲಿ ಪ್ಲಾಸ್ಟಿಕ್ ಬಳಸಿ ಇಡ್ಲಿ ತಯಾರಿಸುತ್ತಿರುವುದು ಕಂಡುಬಂದಿದ್ದು, ಅವಧಿ ಮೀರಿದ ಆಹಾರ ಪದಾರ್ಥಗಳನ್ನು ಮಾರಾಟ ಮಾಡುತ್ತಿರುವುದು ಹಾಗೂ ತರಕಾರಿ ಮತ್ತು ಹಣ್ಣುಗಳಲ್ಲಿ ಶಿಲೀಂಧ್ರ ಬೆಳೆದಿರುವುದು ಪತ್ತೆಯಾಗಿದೆ.
ಇದಲ್ಲದೆ, ಜಿಲೇಬಿಯಲ್ಲಿ ಅನುಮತಿಯಿಲ್ಲದೆ ಹಳದಿ ಬಣ್ಣ ಹಾಗೂ ಕೋವಾ ಪೇಡಾದಲ್ಲಿ ಅಸುರಕ್ಷಿತ ಗುಲಾಬಿ ಬಣ್ಣ ಬಳಸಿರುವುದು ತಪಾಸಣೆ ವೇಳೆ ಬೆಳಕಿಗೆ ಬಂದಿದೆ. ಹಾವೇರಿಯ ಕೆಲ ಮಳಿಗೆಗಳಲ್ಲಿ ಅವಧಿ ಮೀರಿದ ಮೊಸರು ಮತ್ತು ಹಾಲನ್ನು ಸಂಗ್ರಹಿಸಿರುವುದು ಅಧಿಕಾರಿಗಳ ಗಮನಕ್ಕೆ ಬಂದಿದೆ.
ಬೆಂಗಳೂರು ನಗರದ ಪ್ರಮುಖ ರೈಲು ನಿಲ್ದಾಣಗಳಲ್ಲಿನ ಮಳಿಗೆಗಳು ತುಲನಾತ್ಮಕವಾಗಿ ಉತ್ತಮ ಗುಣಮಟ್ಟ ಕಾಯ್ದುಕೊಂಡಿರುವುದು ಕಂಡುಬಂದಿದೆ. ಪ್ರಯಾಣಿಕರ ಆರೋಗ್ಯದೊಂದಿಗೆ ಚೆಲ್ಲಾಟವಾಡುವ ಮಳಿಗೆಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು. ಆಹಾರ ಸುರಕ್ಷತೆ ಖಚಿತಪಡಿಸಿಕೊಳ್ಳಲು ಮುಂದಿನ ದಿನಗಳಲ್ಲಿಯೂ ದಿಢೀರ್ ತಪಾಸಣೆ ಮುಂದುವರಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
----------------
ಹಿಂದೂಸ್ತಾನ್ ಸಮಾಚಾರ್ / BHARGAVI G R