
ಬಳ್ಳಾರಿ, 20 ಆಗಸ್ಟ್ (ಹಿ.ಸ.)
ಆ್ಯಂಕರ್ : ಬಳ್ಳಾರಿ - ವಿಜಯನಗರ ಜಿಲ್ಲೆಯ ಕಲ್ಯಾಣ ಕರ್ನಾಟಕ ಸಾರಿಗೆ ವಿಭಾಗಗಳ ಬಸ್ಸುಗಳ ಸ್ಥಿತಿಗತಿಯು ಸಂಪೂರ್ಣ ಹದಗೆಟ್ಟಿದ್ದು, ಈ ಅವಳಿ ಜಿಲ್ಲೆಗಳಿಗೆ ನೂತನ ಬಸ್ಸುಗಳನ್ನು ನೀಡಬೇಕು ಎಂದು ವಿಧಾನಪರಿಷತ್ ಸದಸ್ಯ ವೈ.ಎಂ. ಸತೀಶ್ ಅವರು ಸಾರಿಗೆ ಸಚಿವ ಬಿ.ಎಸ್. ಸುರೇಶ್ ಅವರಲ್ಲಿ ಕೇಳಿದ್ದಾರೆ.
ಬಳ್ಳಾರಿ - ವಿಜಯನಗರ ಜಿಲ್ಲೆಯ ಸ್ಥಳೀಯ ಸಂಸ್ಥೆಯ ಪ್ರತಿನಿಧಿ, ವಿಧಾನಪರಿಷತ್ ಸದಸ್ಯರಾಗಿರುವ ವೈ.ಎಂ. ಸತೀಶ್ ಅವರು ಕೇಳಿದ ಪ್ರಶ್ನೆಗೆ ವಿಧಾನ ಪರಿಷತ್ತಿನಲ್ಲಿ ಸಾರಿಗೆ ಸಚಿವ ಬಿ.ಎಸ್. ಸುರೇಶ್ ಅವರು, 2025-26ರ ಆರ್ಥಿಕ ಸಾಲಿನ ಲೆಕ್ಕಾಚಾರದಲ್ಲಿ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮಕ್ಕೆ 152 ಕೋಟಿ ರೂಪಾಯಿ ವೆಚ್ಚದಲ್ಲಿ 400 ಬಸ್ಸುಗಳನ್ನು ಖರೀದಿಸಲಾಗುತ್ತಿದೆ. ಈ ಬಸ್ಸುಗಳಲ್ಲಿ ಬಳ್ಳಾರಿ ಮತ್ತು ವಿಜಯನಗರ ಜಿಲ್ಲೆಗಳಿಗೆ ತಲಾ 35 ರಿಂದ 40 ಬಸ್ಸುಗಳನ್ನು ಅಗತ್ಯಕ್ಕೆ ಅನುಗುಣವಾಗಿ ಮತ್ತು ಆದ್ಯತೆಯ ಮೇರೆಗೆ ಹಂಚಿಕೆ ಮಾಡಲಾಗುತ್ತದೆ ಎಂದು ಉತ್ತರಿಸಿದ್ದಾರೆ.
2025-26ರ ಸಾಲಿನ ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿಯಿಂದ 45 ಕೋಟಿ ರೂಪಾಯಿ ವೆಚ್ಚದಲ್ಲಿ 119 ಬಸ್ಗಳನ್ನು, 2026 - 27ರ ಅನುದಾನದಲ್ಲಿ 30.78 ಕೋಟಿ ರೂಪಾಯಿ ವೆಚ್ಚದಲ್ಲಿ 81 ಬಸ್ಸುಗಳನ್ನು ಹಾಗೂ ಕರ್ನಾಟಕ ಸರ್ಕಾರದ ಪೂರಕ ಅಂದಾಜು - 1ರ ಆಯವ್ಯಯದಲ್ಲಿ ಕರ್ನಾಟಕ ರಾಜ್ಯ ಸರ್ಕರದಿಂದ 76 ಕೋಟಿ ರೂಪಾಯಿಗಳಿಂದ 200 ಬಸ್ಗಳನ್ನು ಖರೀದಿಸುವ ಪ್ರಸ್ತಾವನೆಗೆ ಆಗಸ್ಟ್ 13 ರಂದು ಸಚಿವ ಸಂಪುಟದ ಅನುಮೋದನೆ ಸಿಕ್ಕಿದೆ. ಶೀಘ್ರದಲ್ಲಿಯೇ ಟೆಂಡರ್ ಪ್ರಕ್ರಿಯೆ ಪ್ರಾರಂಭವಾಗಲಿದೆ ಎಂದು ತಿಳಿಸಿದ್ದಾರೆ.
---------------
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್