ವಿಜಯಪುರ ಜಿಲ್ಲೆಯನ್ನು 371(ಜೆ) ಮೀಸಲಾತಿಗೆ ಸೇರ್ಪಡೆಗೊಳಿಸಲು ಆಗ್ರಹಿಸಿ ಆಲಮೇಲದಲ್ಲಿ ಹೋರಾಟ
ವಿಜಯಪುರ, 20 ಆಗಸ್ಟ್ (ಹಿ.ಸ.) ಆ್ಯಂಕರ್ : ವಿಜಯಪುರ ಜಿಲ್ಲೆಯನ್ನು 371(ಜೆ) ವಿಶೇಷ ಮೀಸಲಾತಿ ವ್ಯಾಪ್ತಿಗೆ ಸೇರ್ಪಡೆಗೊಳಿಸಬೇಕು ಎಂದು ಆಗ್ರಹಿಸಿ ವಿಜಯಪುರ ಜಿಲ್ಲಾ 371(ಜೆ) ಹೋರಾಟ ಸಮಿತಿ ಹಾಗೂ ಕರ್ನಾಟಕ ರಾಜ್ಯ ಅಂಗವಿಕಲರ ಹಾಗೂ ಪಾಲಕರ ಒಕ್ಕೂಟದ ನೇತೃತ್ವದಲ್ಲಿ ಆಲಮೇಲ ತಾಲೂಕು ಕೇಂದ್ರದಲ್ಲಿ ಹೋರಾಟ
371


ವಿಜಯಪುರ, 20 ಆಗಸ್ಟ್ (ಹಿ.ಸ.)

ಆ್ಯಂಕರ್ : ವಿಜಯಪುರ ಜಿಲ್ಲೆಯನ್ನು 371(ಜೆ) ವಿಶೇಷ ಮೀಸಲಾತಿ ವ್ಯಾಪ್ತಿಗೆ ಸೇರ್ಪಡೆಗೊಳಿಸಬೇಕು ಎಂದು ಆಗ್ರಹಿಸಿ ವಿಜಯಪುರ ಜಿಲ್ಲಾ 371(ಜೆ) ಹೋರಾಟ ಸಮಿತಿ ಹಾಗೂ ಕರ್ನಾಟಕ ರಾಜ್ಯ ಅಂಗವಿಕಲರ ಹಾಗೂ ಪಾಲಕರ ಒಕ್ಕೂಟದ ನೇತೃತ್ವದಲ್ಲಿ ಆಲಮೇಲ ತಾಲೂಕು ಕೇಂದ್ರದಲ್ಲಿ ಹೋರಾಟ ನಡೆಸಿ, ತಹಶೀಲ್ದಾರ್ ಅವರ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಯಿತು.

ಈ ಸಂದರ್ಭದಲ್ಲಿ ಮಾತನಾಡಿದ 371(ಜೆ) ಹೋರಾಟ ಸಮಿತಿಯ ಮುಖಂಡ ವಿನೋದ ಖೇಡ, ವಿಜಯಪುರ ಜಿಲ್ಲೆಯನ್ನು 371(ಜೆ) ಮೀಸಲಾತಿ ವ್ಯಾಪ್ತಿಯಿಂದ ಹೊರಗಿಟ್ಟಿರುವುದರಿಂದ ಜಿಲ್ಲೆಯ ವಿದ್ಯಾರ್ಥಿಗಳು ಹಾಗೂ ನಿರುದ್ಯೋಗಿ ಯುವಜನರು ಶಿಕ್ಷಣ ಮತ್ತು ಸರ್ಕಾರಿ ಉದ್ಯೋಗ ಕ್ಷೇತ್ರದಲ್ಲಿ ಅನ್ಯಾಯಕ್ಕೆ ಒಳಗಾಗುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಜಿಲ್ಲೆಯ ಜನರಿಗೆ ಆಗುತ್ತಿರುವ ಅನ್ಯಾಯವನ್ನು ಸರಿಪಡಿಸಲು ರಾಜ್ಯ ಸರ್ಕಾರ ಕೂಡಲೇ ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿ ವಿಜಯಪುರ ಜಿಲ್ಲೆಯನ್ನು 371(ಜೆ) ಮೀಸಲಾತಿ ವ್ಯಾಪ್ತಿಗೆ ಸೇರ್ಪಡೆಗೊಳಿಸಲು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ಹೋರಾಟಗಾರರಾದ ಮಲ್ಲನಗೌಡ ಪಾಟೀಲ (ಬರಟಗಿ) ಹಾಗೂ ಅನಿಲ ಇಕ್ಕಡೆ ಮಾತನಾಡಿ, 371(ಜೆ) ಮೀಸಲಾತಿ ಸೌಲಭ್ಯದಿಂದ ವಿಜಯಪುರ ಜಿಲ್ಲೆಯನ್ನು ಹೊರಗಿಟ್ಟಿರುವುದು ಜಿಲ್ಲೆಯ ಶೈಕ್ಷಣಿಕ, ಉದ್ಯೋಗ ಹಾಗೂ ಸಮಗ್ರ ಅಭಿವೃದ್ಧಿಯ ಮೇಲೆ ಪ್ರತಿಕೂಲ ಪರಿಣಾಮ ಬೀರಿದೆ. ಜಿಲ್ಲೆಯಲ್ಲೇ ಶಿಕ್ಷಣ ಪಡೆದ ಅನೇಕ ಯುವಕರಿಗೆ ಸೂಕ್ತ ಉದ್ಯೋಗಾವಕಾಶಗಳು ದೊರೆಯದೆ ಮಹಾರಾಷ್ಟ್ರ, ಗೋವಾ ಸೇರಿದಂತೆ ಹೊರ ರಾಜ್ಯಗಳಿಗೆ ವಲಸೆ ಹೋಗುವ ಪರಿಸ್ಥಿತಿ ನಿರ್ಮಾಣವಾಗಿದೆ.

ಹೀಗಾಗಿ ವಿಜಯಪುರ ಜಿಲ್ಲೆಯನ್ನು ಕೂಡಲೇ 371(ಜೆ) ಮೀಸಲಾತಿ ವ್ಯಾಪ್ತಿಗೆ ಸೇರಿಸಿ ಜಿಲ್ಲೆಯ ಯುವಜನರಿಗೆ ಉದ್ಯೋಗ ಮತ್ತು ಶಿಕ್ಷಣದಲ್ಲಿ ಸಮಾನ ಅವಕಾಶ ಕಲ್ಪಿಸಬೇಕು ಎಂದು ಆಗ್ರಹಿಸಿದರು.

ಹೋರಾಟಗಾರ ಲಾಯಪ್ಪ ಇಂಗಳೆ ಮಾತನಾಡಿ, ಹೈದರಾಬಾದ್ ವಿಮೋಚನಾ ಚಳವಳಿಗೆ ನೇತೃತ್ವ ವಹಿಸಿದ್ದ ಸಿಂದಗಿಯ ಸ್ವಾಮಿ ರಾಮಾನಂದ ತೀರ್ಥರ ತವರು ಜಿಲ್ಲೆ ವಿಜಯಪುರವನ್ನು 371(ಜೆ) ಮೀಸಲಾತಿ ವ್ಯಾಪ್ತಿಯಿಂದ ಹೊರಗಿಟ್ಟಿರುವುದಕ್ಕೆ ಕಾರಣವೇನು ಎಂದು ಪ್ರಶ್ನಿಸಿದರು.

ಹೈಕೋರ್ಟ್, ಸಾರಿಗೆ, ಪುರಾತತ್ವ ಇಲಾಖೆ, ಕರ್ನಾಟಕ ಆಡಳಿತ ನ್ಯಾಯಮಂಡಳಿ ಹಾಗೂ ಕೃಷ್ಣಾ ಕಾಡಾ ಸೇರಿದಂತೆ ಕಲ್ಯಾಣ ಕರ್ನಾಟಕ ಭಾಗದ ವಿವಿಧ ಆಡಳಿತಾತ್ಮಕ ಮತ್ತು ಅಭಿವೃದ್ಧಿ ವ್ಯವಸ್ಥೆಗಳೊಂದಿಗೆ ವಿಜಯಪುರ ಜಿಲ್ಲೆ ನಿಕಟವಾಗಿ ಸಂಪರ್ಕ ಹೊಂದಿದೆ. ಹೈದರಾಬಾದ್ ನಿಜಾಮರ ಆಡಳಿತಕ್ಕೆ ಒಳಪಟ್ಟಿದ್ದ ವಿಜಯಪುರ ಜಿಲ್ಲೆಗೂ 371(ಜೆ) ವಿಶೇಷ ಮೀಸಲಾತಿ ಸೌಲಭ್ಯ ನೀಡುವ ಮೂಲಕ ನ್ಯಾಯ ಒದಗಿಸಬೇಕು ಎಂದು ಒತ್ತಾಯಿಸಿದರು.

ಕರ್ನಾಟಕ ರಾಜ್ಯ ಅಂಗವಿಕಲರ ಹಾಗೂ ಪಾಲಕರ ಒಕ್ಕೂಟದ ಮುಖಂಡ ಅಶೋಕ ವಾಲಿಕಾರ ಹಾಗೂ ತಾಲೂಕು ಅಧ್ಯಕ್ಷ ಸಿದ್ದರಾಮ ಕಲ್ಲೂರ ಮಾತನಾಡಿ, ವಿಜಯಪುರ ಜಿಲ್ಲೆಯ ವಿದ್ಯಾರ್ಥಿಗಳಿಗೆ ಶಿಕ್ಷಣದಲ್ಲಿ ಹಾಗೂ ಯುವಕರಿಗೆ ಸರ್ಕಾರಿ ಉದ್ಯೋಗದಲ್ಲಿ ಆಗುತ್ತಿರುವ ಅನ್ಯಾಯವನ್ನು ತಡೆಗಟ್ಟಲು ಜಿಲ್ಲೆಯ ಸಚಿವರು, ಶಾಸಕರು ಹಾಗೂ ಜನಪ್ರತಿನಿಧಿಗಳು ಪಕ್ಷಾತೀತವಾಗಿ ಧ್ವನಿ ಎತ್ತಬೇಕು. ರಾಜ್ಯ ಸರ್ಕಾರದ ಮೇಲೆ ಒತ್ತಡ ತಂದು ವಿಜಯಪುರ ಜಿಲ್ಲೆಗೆ 371(ಜೆ) ಮೀಸಲಾತಿ ಸೌಲಭ್ಯ ಕಲ್ಪಿಸಲು ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ವಿಜಯಪುರ ಜಿಲ್ಲೆಯನ್ನು 371(ಜೆ) ವ್ಯಾಪ್ತಿಗೆ ಸೇರಿಸುವ ಬೇಡಿಕೆ ಹಲವು ವರ್ಷಗಳಿಂದ ಜಿಲ್ಲೆಯ ವಿವಿಧ ಸಂಘಟನೆಗಳು ಹಾಗೂ ಹೋರಾಟಗಾರರಿಂದ ವ್ಯಕ್ತವಾಗುತ್ತಿದ್ದು, ಈ ಬೇಡಿಕೆಯನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.

ಈ ಸಂದರ್ಭದಲ್ಲಿ ವಿಜಯಪುರ ಜಿಲ್ಲಾ 371(ಜೆ) ಹೋರಾಟ ಸಮಿತಿಯ ಎನ್. ಸುರೇಶಕುಮಾರ, ಕರ್ನಾಟಕ ರಾಜ್ಯ ಅಂಗವಿಕಲರ ಹಾಗೂ ಪಾಲಕರ ಒಕ್ಕೂಟದ ನಿಂಗರಾಜ ಬಿಸನಾಳ, ಬಂದೇನವಾಜ ಕಲ್ಲೂರ, ಸಾಯಬಣ್ಣ ಪೂಜಾರಿ ಸೇರಿದಂತೆ ಹಲವು ಹೋರಾಟಗಾರರು ಹಾಗೂ ಮುಖಂಡರು ಉಪಸ್ಥಿತರಿದ್ದರು.

ಆಲಮೇಲ ತಾಲೂಕು ಕೇಂದ್ರದಲ್ಲಿ ನಡೆದ ಹೋರಾಟದ ಬಳಿಕ ಪ್ರತಿಭಟನಾಕಾರರು ತಹಶೀಲ್ದಾರ್ ಅವರನ್ನು ಭೇಟಿ ಮಾಡಿ ಮುಖ್ಯಮಂತ್ರಿಗಳಿಗೆ ಸಲ್ಲಿಸುವ ಮನವಿಯನ್ನು ಹಸ್ತಾಂತರಿಸಿದರು. ವಿಜಯಪುರ ಜಿಲ್ಲೆಯ ವಿದ್ಯಾರ್ಥಿಗಳು, ಯುವಕರು ಹಾಗೂ ವಿವಿಧ ವರ್ಗಗಳ ಹಿತದೃಷ್ಟಿಯಿಂದ 371(ಜೆ) ಮೀಸಲಾತಿ ಸೌಲಭ್ಯವನ್ನು ಜಿಲ್ಲೆಗೆ ವಿಸ್ತರಿಸಲು ಸರ್ಕಾರ ತಕ್ಷಣ ಕ್ರಮ ಕೈಗೊಳ್ಳಬೇಕು ಎಂದು ಮನವಿಯಲ್ಲಿ ಒತ್ತಾಯಿಸಲಾಗಿದೆ.

---------------

ಹಿಂದೂಸ್ತಾನ್ ಸಮಾಚಾರ್ / jyothi deshpande


 rajesh pande