ಪೊಲೀಸ್ ಮತ್ತು ಸಾರ್ವಜನಿಕರ ನಡುವೆ ವಿಶ್ವಾಸ ವೃದ್ಧಿಗೆ ತೆರೆದ ಮನೆ ಕಾರ್ಯಕ್ರಮ
ಬಾಗಲಕೋಟೆ, 20 ಆಗಸ್ಟ್ (ಹಿ.ಸ.) ಆ್ಯಂಕರ್ : ಸಾರ್ವಜನಿಕರು ಮತ್ತು ಪೊಲೀಸ್ ಇಲಾಖೆಯ ನಡುವಿನ ಬಾಂಧವ್ಯ ಹಾಗೂ ಪರಸ್ಪರ ವಿಶ್ವಾಸವನ್ನು ಮತ್ತಷ್ಟು ಬಲಪಡಿಸುವ ಉದ್ದೇಶದಿಂದ ಬಾಗಲಕೋಟೆ ನಗರ ಪೊಲೀಸ್ ಠಾಣೆಯಲ್ಲಿ ‘ತೆರೆದ ಮನೆ’ ಕಾರ್ಯಕ್ರಮವನ್ನು ಆಯೋಜಿಸಲಾಯಿತು. ಬಸವೇಶ್ವರ ವಿದ್ಯಾವರ್ಧಕ ಸಂಘದ ಹೋಮಿಯೋಪತಿ
ಪೋಲಿಸ್


ಬಾಗಲಕೋಟೆ, 20 ಆಗಸ್ಟ್ (ಹಿ.ಸ.)

ಆ್ಯಂಕರ್ : ಸಾರ್ವಜನಿಕರು ಮತ್ತು ಪೊಲೀಸ್ ಇಲಾಖೆಯ ನಡುವಿನ ಬಾಂಧವ್ಯ ಹಾಗೂ ಪರಸ್ಪರ ವಿಶ್ವಾಸವನ್ನು ಮತ್ತಷ್ಟು ಬಲಪಡಿಸುವ ಉದ್ದೇಶದಿಂದ ಬಾಗಲಕೋಟೆ ನಗರ ಪೊಲೀಸ್ ಠಾಣೆಯಲ್ಲಿ ‘ತೆರೆದ ಮನೆ’ ಕಾರ್ಯಕ್ರಮವನ್ನು ಆಯೋಜಿಸಲಾಯಿತು.

ಬಸವೇಶ್ವರ ವಿದ್ಯಾವರ್ಧಕ ಸಂಘದ ಹೋಮಿಯೋಪತಿ ಮಹಾವಿದ್ಯಾಲಯದ ವಿದ್ಯಾರ್ಥಿಗಳು ಹಾಗೂ ಬೋಧಕ ಸಿಬ್ಬಂದಿಯನ್ನು ಪೊಲೀಸ್ ಠಾಣೆಗೆ ಆಹ್ವಾನಿಸಿ, ಪೊಲೀಸ್ ಇಲಾಖೆಯ ದೈನಂದಿನ ಕಾರ್ಯವೈಖರಿ, ಸಾರ್ವಜನಿಕರಿಗೆ ಲಭ್ಯವಿರುವ ವಿವಿಧ ಸೇವೆಗಳು, ಠಾಣೆಯ ಆಡಳಿತಾತ್ಮಕ ವ್ಯವಸ್ಥೆ ಹಾಗೂ ತನಿಖಾ ಕಾರ್ಯಗಳ ಕುರಿತು ಸಮಗ್ರ ಮಾಹಿತಿ ಅನ್ನು ಶಹರ ಠಾಣೆ ಅಧಿಕಾರಿ ಸಂಗಮೇಶ ಹಿರೇಹೊನ್ನೂರು ನೀಡಿದರು.

ಕಾರ್ಯಕ್ರಮದ ಅಂಗವಾಗಿ ವಿದ್ಯಾರ್ಥಿಗಳಿಗೆ ಪೊಲೀಸ್ ಠಾಣೆಯ ವಿವಿಧ ವಿಭಾಗಗಳನ್ನು ಪರಿಚಯಿಸಲಾಯಿತು. ಠಾಣೆಯಲ್ಲಿ ಸಾರ್ವಜನಿಕರಿಂದ ದೂರುಗಳನ್ನು ಸ್ವೀಕರಿಸುವ ವಿಧಾನ, ದೂರುಗಳ ದಾಖಲಾತಿ, ಪ್ರಕರಣಗಳ ತನಿಖೆ, ಸಾಕ್ಷ್ಯಾಧಾರಗಳ ಸಂಗ್ರಹ ಹಾಗೂ ತನಿಖಾ ಪ್ರಕ್ರಿಯೆಯ ವಿವಿಧ ಹಂತಗಳ ಕುರಿತು ಅಧಿಕಾರಿಗಳು ವಿವರಿಸಿದರು. ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವಲ್ಲಿ ಪೊಲೀಸ್ ಇಲಾಖೆಯ ಜವಾಬ್ದಾರಿ ಹಾಗೂ ಸಾರ್ವಜನಿಕರ ಸಹಕಾರದ ಮಹತ್ವವನ್ನು ಅವರು ತಿಳಿಸಿದರು.

ಮಹಿಳೆಯರು ಮತ್ತು ಮಕ್ಕಳ ಸುರಕ್ಷತೆ ಹಾಗೂ ರಕ್ಷಣೆಗೆ ಪೊಲೀಸ್ ಇಲಾಖೆ ಕೈಗೊಳ್ಳುವ ಕ್ರಮಗಳ ಕುರಿತು ವಿದ್ಯಾರ್ಥಿಗಳಿಗೆ ಜಾಗೃತಿ ಮೂಡಿಸಲಾಯಿತು. ಮಹಿಳೆಯರು ಅಥವಾ ಮಕ್ಕಳು ಯಾವುದೇ ರೀತಿಯ ತೊಂದರೆಗೆ ಒಳಗಾದ ಸಂದರ್ಭದಲ್ಲಿ ಪೊಲೀಸ್ ಇಲಾಖೆಯನ್ನು ಸಂಪರ್ಕಿಸುವುದು, ತುರ್ತು ಸಂದರ್ಭಗಳಲ್ಲಿ ನೆರವು ಪಡೆಯುವುದು ಹಾಗೂ ಕಾನೂನುಬದ್ಧವಾಗಿ ದೂರು ಸಲ್ಲಿಸುವ ಕುರಿತು ಮಾಹಿತಿ ನೀಡಲಾಯಿತು.

ಇದೇ ವೇಳೆ ರಸ್ತೆ ಸುರಕ್ಷತೆ ಮತ್ತು ಸಂಚಾರ ನಿಯಮಗಳ ಪಾಲನೆಯ ಅಗತ್ಯತೆಯನ್ನೂ ವಿವರಿಸಲಾಯಿತು.

ವಾಹನ ಚಲಾಯಿಸುವಾಗ ಹೆಲ್ಮೆಟ್ ಹಾಗೂ ಸೀಟ್ಬೆಲ್ಟ್ ಧರಿಸುವುದು, ಸಂಚಾರ ನಿಯಮಗಳನ್ನು ಪಾಲಿಸುವುದು, ಅಪ್ರಾಪ್ತರು ವಾಹನ ಚಲಾಯಿಸದಂತೆ ನೋಡಿಕೊಳ್ಳುವುದು ಸೇರಿದಂತೆ ರಸ್ತೆ ಅಪಘಾತಗಳನ್ನು ತಡೆಗಟ್ಟಲು ಸಾರ್ವಜನಿಕರು ವಹಿಸಬೇಕಾದ ಜವಾಬ್ದಾರಿಗಳ ಕುರಿತು ತಿಳಿಸಲಾಯಿತು.

ಪ್ರಸ್ತುತ ದಿನಗಳಲ್ಲಿ ಹೆಚ್ಚುತ್ತಿರುವ ಸೈಬರ್ ಅಪರಾಧಗಳ ಕುರಿತು ವಿದ್ಯಾರ್ಥಿಗಳಿಗೆ ವಿಶೇಷವಾಗಿ ಮಾಹಿತಿ ನೀಡಲಾಯಿತು.

ಅಪರಿಚಿತ ಲಿಂಕ್ಗಳನ್ನು ತೆರೆಯದಿರುವುದು, ವೈಯಕ್ತಿಕ ಮಾಹಿತಿ, ಬ್ಯಾಂಕ್ ಖಾತೆ ವಿವರಗಳು, ಒಟಿಪಿ ಹಾಗೂ ಪಾಸ್ವರ್ಡ್ಗಳನ್ನು ಯಾರೊಂದಿಗೂ ಹಂಚಿಕೊಳ್ಳದಿರುವುದು, ಆನ್ಲೈನ್ ವಂಚನೆಗೆ ಒಳಗಾದ ಸಂದರ್ಭದಲ್ಲಿ ತಕ್ಷಣ ಪೊಲೀಸ್ ಇಲಾಖೆಗೆ ಮಾಹಿತಿ ನೀಡುವುದು ಸೇರಿದಂತೆ ಸೈಬರ್ ಸುರಕ್ಷತಾ ಕ್ರಮಗಳ ಬಗ್ಗೆ ಜಾಗೃತಿ ಮೂಡಿಸಲಾಯಿತು.

ಮಾದಕ ವಸ್ತುಗಳ ಸೇವನೆಯಿಂದ ಉಂಟಾಗುವ ಸಾಮಾಜಿಕ, ಆರೋಗ್ಯ ಹಾಗೂ ಕಾನೂನು ಪರಿಣಾಮಗಳ ಬಗ್ಗೆಯೂ ವಿದ್ಯಾರ್ಥಿಗಳಿಗೆ ತಿಳಿಸಲಾಯಿತು. ಯುವಜನರು ಮಾದಕ ವಸ್ತುಗಳಿಂದ ದೂರವಿದ್ದು, ಆರೋಗ್ಯಕರ ಜೀವನಶೈಲಿಯನ್ನು ಅಳವಡಿಸಿಕೊಳ್ಳಬೇಕು. ಮಾದಕ ವಸ್ತುಗಳ ಅಕ್ರಮ ಮಾರಾಟ ಅಥವಾ ಬಳಕೆಯ ಮಾಹಿತಿ ದೊರೆತಲ್ಲಿ ಸಂಬಂಧಪಟ್ಟ ಇಲಾಖೆಗೆ ಮಾಹಿತಿ ನೀಡುವ ಮೂಲಕ ಸಮಾಜದ ಸುರಕ್ಷತೆಯಲ್ಲಿ ಸಾರ್ವಜನಿಕರೂ ಪಾಲುದಾರರಾಗಬೇಕು ಎಂದು ತಿಳಿಸಲಾಯಿತು.

‘ತೆರೆದ ಮನೆ’ ಕಾರ್ಯಕ್ರಮದ ಮೂಲಕ ಪೊಲೀಸ್ ಠಾಣೆಯ ಕಾರ್ಯವಿಧಾನವನ್ನು ನೇರವಾಗಿ ಅರಿಯಲು ವಿದ್ಯಾರ್ಥಿಗಳಿಗೆ ಅವಕಾಶ ದೊರೆಯಿತು. ಪೊಲೀಸ್ ಇಲಾಖೆ ಕೇವಲ ಅಪರಾಧ ನಿಯಂತ್ರಣಕ್ಕೆ ಸೀಮಿತವಾಗಿರದೆ, ಸಾರ್ವಜನಿಕರ ಸುರಕ್ಷತೆ, ಕಾನೂನು ಅರಿವು, ಮಹಿಳಾ ಮತ್ತು ಮಕ್ಕಳ ರಕ್ಷಣೆ, ಸಂಚಾರ ನಿಯಂತ್ರಣ ಹಾಗೂ ಸೈಬರ್ ಅಪರಾಧ ತಡೆ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸುತ್ತಿದೆ ಎಂಬುದನ್ನು ವಿದ್ಯಾರ್ಥಿಗಳಿಗೆ ಮನವರಿಕೆ ಮಾಡಿಕೊಡಲಾಯಿತು.

ಪೊಲೀಸ್ ಠಾಣೆಯ ಕಾರ್ಯವೈಖರಿಯನ್ನು ಹತ್ತಿರದಿಂದ ವೀಕ್ಷಿಸಿದ ವಿದ್ಯಾರ್ಥಿಗಳು ವಿವಿಧ ವಿಷಯಗಳ ಕುರಿತು ಅಧಿಕಾರಿಗಳೊಂದಿಗೆ ಸಂವಾದ ನಡೆಸಿ, ತಮ್ಮ ಪ್ರಶ್ನೆಗಳಿಗೆ ಉತ್ತರ ಪಡೆದುಕೊಂಡರು. ಇಂತಹ ಕಾರ್ಯಕ್ರಮಗಳು ಪೊಲೀಸ್ ಇಲಾಖೆಯ ಬಗ್ಗೆ ಸಾರ್ವಜನಿಕರಲ್ಲಿ ಇರುವ ಅರಿವನ್ನು ಹೆಚ್ಚಿಸುವುದರ ಜೊತೆಗೆ, ಪೊಲೀಸ್–ಸಾರ್ವಜನಿಕರ ನಡುವಿನ ವಿಶ್ವಾಸದ ಸೇತುವೆಯನ್ನು ಮತ್ತಷ್ಟು ಗಟ್ಟಿಗೊಳಿಸಲು ಸಹಕಾರಿಯಾಗಲಿವೆ ಎಂದು ತಿಳಿಸಲಾಯಿತು.

---------------

ಹಿಂದೂಸ್ತಾನ್ ಸಮಾಚಾರ್ / jyothi deshpande


 rajesh pande