
ಬಾಗಲಕೋಟೆ, 20 ಆಗಸ್ಟ್ (ಹಿ.ಸ.)
ಆ್ಯಂಕರ್ : ಪಕ್ವಾನ್ ಗ್ರೂಪ್ ವತಿಯಿಂದ ನಗರದ ಕಲಾಭಿಮಾನಿಗಳಿಗೆ ವಿಶೇಷ ಹಾಸ್ಯ ಸಂಗೀತ ನಾಟಕದ ರಸದೌತಣ ನೀಡಲು ಸಿದ್ಧತೆ ನಡೆಸಲಾಗಿದೆ. ಬಾಗಲಕೋಟೆ ನಗರದ ನವನಗರದಲ್ಲಿರುವ ಕಲಾ ಭವನದಲ್ಲಿ ಆಗಸ್ಟ್ 23ರಂದು ಸಂಜೆ 6.30ಕ್ಕೆ ‘ಕೊಳಲು ಡಾಟ್ ಕಾಮ್ (ಡಿ)’ ಎಂಬ ಹಾಸ್ಯ ಸಂಗೀತ ನಾಟಕ ಪ್ರದರ್ಶನಗೊಳ್ಳಲಿದೆ.
ಖ್ಯಾತ ಕೊಳಲು ವಾದಕ ಹಾಗೂ ಕಲಾವಿದ ಪಂಡಿತ್ ಪ್ರವೀಣ ಗೋಡಖಿಂಡಿ ಅವರು ರಚಿಸಿ, ಅಭಿನಯಿಸಿರುವ ಈ ಹಾಸ್ಯ ಸಂಗೀತ ನಾಟಕವು ಪ್ರೇಕ್ಷಕರಿಗೆ ಸಂಗೀತ, ಹಾಸ್ಯ ಹಾಗೂ ಮನರಂಜನೆಯ ವಿಭಿನ್ನ ಅನುಭವ ನೀಡಲಿದೆ. ಸಂಗೀತದ ಸೊಗಡು, ಹಾಸ್ಯದ ಲವಲವಿಕೆ ಹಾಗೂ ನಾಟಕೀಯ ನಿರೂಪಣೆಯನ್ನು ಒಗ್ಗೂಡಿಸಿರುವ ಈ ಕಾರ್ಯಕ್ರಮ ವಿಶೇಷ ಆಕರ್ಷಣೆಯಾಗಲಿದೆ.
ಸಂಗೀತ ಕ್ಷೇತ್ರದಲ್ಲಿ ತಮ್ಮದೇ ಆದ ಛಾಪು ಮೂಡಿಸಿರುವ ಪಂಡಿತ್ ಪ್ರವೀಣ ಗೋಡಖಿಂಡಿ ಅವರ ರಚನೆ ಮತ್ತು ನಟನೆ ಈ ನಾಟಕದ ಪ್ರಮುಖ ವಿಶೇಷತೆಯಾಗಿದೆ. ಸಂಗೀತಾಭಿಮಾನಿಗಳು ಹಾಗೂ ನಾಟಕ ಪ್ರಿಯರು ಒಂದೇ ವೇದಿಕೆಯಲ್ಲಿ ಸಂಗೀತ ಮತ್ತು ಹಾಸ್ಯದ ಅಪೂರ್ವ ಸಂಯೋಜನೆಯನ್ನು ಆಸ್ವಾದಿಸಲು ಈ ಕಾರ್ಯಕ್ರಮ ಅವಕಾಶ ಕಲ್ಪಿಸಲಿದೆ.
ಬಾಗಲಕೋಟೆ ನಗರ ಹಾಗೂ ಸುತ್ತಮುತ್ತಲಿನ ಕಲಾಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಕಾರ್ಯಕ್ರಮದಲ್ಲಿ ಭಾಗವಹಿಸಿ ನಾಟಕವನ್ನು ವೀಕ್ಷಿಸುವಂತೆ ಪಕ್ವಾನ್ ಗ್ರೂಪ್ ಮನವಿ ಮಾಡಿದೆ.
ಈ ಕುರಿತು ಪಕ್ವಾನ್ ಗ್ರೂಪ್ನ ಸದಸ್ಯ ಪ್ರಕಾಶ್ ಹಿರೇಮನಿ ಅವರು ಮಾಹಿತಿ ನೀಡಿ, ಆ.23ರಂದು ಸಂಜೆ 6.30ಕ್ಕೆ ನವನಗರದ ಕಲಾ ಭವನದಲ್ಲಿ ‘ಕೊಳಲು ಡಾಟ್ ಕಾಮ್ (ಡಿ)’ ಹಾಸ್ಯ ಸಂಗೀತ ನಾಟಕ ಪ್ರದರ್ಶನ ನಡೆಯಲಿದ್ದು, ಸಾರ್ವಜನಿಕರು ಹಾಗೂ ಕಲಾಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಕಾರ್ಯಕ್ರಮದ ಸವಿಯನ್ನು ಸವಿಯಬೇಕು ಎಂದು ತಿಳಿಸಿದ್ದಾರೆ.
---------------
ಹಿಂದೂಸ್ತಾನ್ ಸಮಾಚಾರ್ / jyothi deshpande