
ಬೆಂಗಳೂರು, 20 ಆಗಸ್ಟ್ (ಹಿ.ಸ.)
ಆ್ಯಂಕರ್:
ಬಹುನಿರೀಕ್ಷಿತ ಬೆಂಗಳೂರು–ಚೆನ್ನೈ ಎಕ್ಸ್‌ಪ್ರೆಸ್‌ವೇ ನಿರ್ಮಾಣಕ್ಕೆ ತಮಿಳುನಾಡು ಭಾಗದ ಗುತ್ತಿಗೆ ವಿವಾದ ಹಾಗೂ ಇಲಾಖೆಗಳ ನಡುವಿನ ಸಮನ್ವಯದ ಕೊರತೆ ಹಿನ್ನಡೆಯಾಗಿದೆ. ಸಂಸತ್ತಿನಲ್ಲಿ ಬೆಂಗಳೂರು ಕೇಂದ್ರ ಲೋಕಸಭಾ ಕ್ಷೇತ್ರದ ಸಂಸದ ಪಿ.ಸಿ. ಮೋಹನ್ ಕೇಳಿದ ಪ್ರಶ್ನೆಗೆ ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ನೀಡಿದ ಲಿಖಿತ ಉತ್ತರದಲ್ಲಿ ಈ ಮಾಹಿತಿ ಬಹಿರಂಗವಾಗಿದೆ.
ತಮಿಳುನಾಡಿನ ಅರಕ್ಕೋಣಂ ಮತ್ತು ಕಾಂಚೀಪುರಂ ಭಾಗದಲ್ಲಿ ಕಾಮಗಾರಿ ಕೈಗೊಂಡಿದ್ದ ಗುತ್ತಿಗೆ ಸಂಸ್ಥೆ ಆರ್ಥಿಕ ಸಂಕಷ್ಟದ ಕಾರಣ 2025ರ ಮೇ ತಿಂಗಳಲ್ಲಿ ಕಾಮಗಾರಿ ಸ್ಥಗಿತಗೊಳಿಸಿದ್ದು, ಈವರೆಗೆ ಶೇ.53ರಷ್ಟು ಕೆಲಸ ಮಾತ್ರ ಪೂರ್ಣಗೊಂಡಿದೆ. ಗುತ್ತಿಗೆ ರದ್ದುಪಡಿಸಲು ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಮುಂದಾದಾಗ ಗುತ್ತಿಗೆದಾರರು ಮದ್ರಾಸ್ ಹೈಕೋರ್ಟ್ ಮೊರೆ ಹೋಗಿದ್ದಾರೆ. ನ್ಯಾಯಾಲಯದ ಯಥಾಸ್ಥಿತಿ ಆದೇಶದಿಂದ ಕಾಮಗಾರಿ ಸದ್ಯ ಸ್ಥಗಿತಗೊಂಡಿದ್ದು, ಸಾಲ ನೀಡಿದ ಬ್ಯಾಂಕುಗಳು ಹೊಸ ಗುತ್ತಿಗೆದಾರರನ್ನು ನೇಮಿಸುವ ಪ್ರಕ್ರಿಯೆ ನಡೆಸುತ್ತಿವೆ.
ಇದಲ್ಲದೆ, ಹೈಟೆನ್ಷನ್ ವಿದ್ಯುತ್ ಮಾರ್ಗಗಳು ಹಾಗೂ ವಿದ್ಯುತ್ ಗೋಪುರಗಳ ಸ್ಥಳಾಂತರಕ್ಕೆ ತಮಿಳುನಾಡು ಟ್ರಾನ್ಸ್‌ಮಿಷನ್ ಕಾರ್ಪೊರೇಷನ್‌ನಿಂದ ಅಗತ್ಯ ಅನುಮೋದನೆ ದೊರೆಯದಿರುವುದು ಕೂಡ ಕಾಮಗಾರಿಗೆ ಅಡ್ಡಿಯಾಗಿದೆ. ಸಮಸ್ಯೆ ಪರಿಹಾರಕ್ಕಾಗಿ ತಮಿಳುನಾಡು ಸರ್ಕಾರದೊಂದಿಗೆ ನಿರಂತರ ಮಾತುಕತೆ ನಡೆಸಲಾಗುತ್ತಿದೆ ಎಂದು ಸಚಿವರು ತಿಳಿಸಿದ್ದಾರೆ.
ಕರ್ನಾಟಕ ವ್ಯಾಪ್ತಿಯ ಬೆಂಗಳೂರು–ಮಾಲೂರು, ಮಾಲೂರು–ಬಂಗಾರಪೇಟೆ ಹಾಗೂ ಬಂಗಾರಪೇಟೆ–ಬೇತಮಂಗಲ ಹಂತಗಳ ಕಾಮಗಾರಿ ಶೇ.100ರಷ್ಟು ಪೂರ್ಣಗೊಂಡಿದ್ದು, ವಾಹನ ಸಂಚಾರಕ್ಕೆ ಮುಕ್ತವಾಗಿದೆ. ಬೈರೆಡ್ಡಿಪಲ್ಲಿ–ಬಂಗಾರುಪಾಳ್ಯಂ ಹಂತ ಶೇ.93ರಷ್ಟು ಪೂರ್ಣಗೊಂಡಿದ್ದು, ಅಕ್ಟೋಬರ್ 30, 2026ರೊಳಗೆ ಮುಗಿಸುವ ಗುರಿ ಹೊಂದಲಾಗಿದೆ.
ಗುಡಿಪಾಲ–ವಾಲಾಜಾಪೇಟೆ ಹಂತ ಶೇ.99 ಹಾಗೂ ವಾಲಾಜಾಪೇಟೆ–ಅರಕ್ಕೋಣಂ ಹಂತ ಶೇ.98ರಷ್ಟು ಪೂರ್ಣಗೊಂಡಿದ್ದು, ಆಗಸ್ಟ್ 31ರೊಳಗೆ ಪೂರ್ಣಗೊಳಿಸುವ ಗುರಿಯಿದೆ. ಕಾಂಚೀಪುರಂ–ಶ್ರೀಪೆರುಂಬುದೂರು ಹಂತ ಶೇ.90ರಷ್ಟು ಪೂರ್ಣಗೊಂಡಿದ್ದು, ಅಕ್ಟೋಬರ್ 31ರೊಳಗೆ ಕಾಮಗಾರಿ ಮುಗಿಸುವ ಗುರಿ ನಿಗದಿಪಡಿಸಲಾಗಿದೆ.
ಕೇಂದ್ರ ಸರ್ಕಾರದ ಶೇ.100ರಷ್ಟು ಅನುದಾನದಲ್ಲಿ ನಿರ್ಮಾಣವಾಗುತ್ತಿರುವ ಈ ಎಕ್ಸ್‌ಪ್ರೆಸ್‌ವೇ ಪೂರ್ಣಗೊಂಡ ಬಳಿಕ ಬೆಂಗಳೂರು–ಚೆನ್ನೈ ನಡುವಿನ ಪ್ರಯಾಣದ ಸಮಯ ಗಣನೀಯವಾಗಿ ಕಡಿಮೆಯಾಗಲಿದೆ. ಆದರೆ ತಮಿಳುನಾಡು ಭಾಗದ ಕಾನೂನು ಮತ್ತು ಗುತ್ತಿಗೆ ಸಂಬಂಧಿತ ತೊಡಕುಗಳು ನಿಗದಿತ ಅವಧಿಯಲ್ಲಿ ಬಗೆಹರಿಯುತ್ತವೆಯೇ ಎಂಬುದು ಸದ್ಯದ ಪ್ರಶ್ನೆಯಾಗಿದೆ.
----------------
ಹಿಂದೂಸ್ತಾನ್ ಸಮಾಚಾರ್ / BHARGAVI G R