
ಬೆಂಗಳೂರು, 20 ಆಗಸ್ಟ್ (ಹಿ.ಸ.)
ಆ್ಯಂಕರ್:
ಬೆಂಗಳೂರಿನ ಸಾರ್ವಜನಿಕ ಗೋಡೆಗಳ ಮೇಲೆ ಅನಧಿಕೃತವಾಗಿ ಶುಭಾಶಯ ಕೋರುವ ಪೋಸ್ಟರ್‌ಗಳನ್ನು ಅಂಟಿಸಿದ ಆರೋಪದಡಿ ವ್ಯಕ್ತಿಯೊಬ್ಬನ ವಿರುದ್ಧ ವಿದ್ಯಾರಣ್ಯಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವಿದ್ಯಾರಣ್ಯಪುರ ಉಪವಿಭಾಗ ವಲಯ-1ರ ಸಹಾಯಕ ಕಾರ್ಯಪಾಲಕ ಗೋವಿಂದಪ್ಪ ಬಜಂತ್ರಿ ಅವರು ಆಗಸ್ಟ್ 19ರಂದು ನೀಡಿದ ಲಿಖಿತ ದೂರಿನ ಆಧಾರದ ಮೇಲೆ ಪೊಲೀಸರು ಈ ಕ್ರಮ ಕೈಗೊಂಡಿದ್ದಾರೆ.
ವಾರ್ಡ್ ಸಂಖ್ಯೆ 10ರ ವ್ಯಾಪ್ತಿಯಲ್ಲಿ ಯಾವುದೇ ಪೂರ್ವಾನುಮತಿ ಪಡೆಯದೆ ಸಾರ್ವಜನಿಕ ಗೋಡೆಗಳಿಗೆ ಪೇಪರ್ ಪೋಸ್ಟರ್‌ಗಳನ್ನು ಅಂಟಿಸಲಾಗಿದ್ದು, ಇದರಿಂದ ಸಾರ್ವಜನಿಕ ಸ್ಥಳಗಳ ಸೌಂದರ್ಯ ಹಾಳಾಗುವುದರ ಜೊತೆಗೆ ಪಾಲಿಕೆ ಸಿಬ್ಬಂದಿ ಅನಗತ್ಯವಾಗಿ ತೆರವು ಕಾರ್ಯಾಚರಣೆ ನಡೆಸಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
ಈ ಸಂಬಂಧ ಶಿವಕುಮಾರ್ ಎಂಬಾತನನ್ನು ಆರೋಪಿಯನ್ನಾಗಿ ಹೆಸರಿಸಲಾಗಿದ್ದು, ಕರ್ನಾಟಕ ಮುಕ್ತ ಸ್ಥಳಗಳ ವಿರೂಪಗೊಳಿಸುವಿಕೆ ತಡೆ ಕಾಯ್ದೆ-1951 ಹಾಗೂ 1981ರ ಸೆಕ್ಷನ್ 3 ಮತ್ತು 6ರ ಅಡಿಯಲ್ಲಿ ಕ್ರೈಂ ನಂ. 325/2026ರಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ. ವಿದ್ಯಾರಣ್ಯಪುರ ಠಾಣೆ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.
ಸಾರ್ವಜನಿಕ ಸ್ಥಳಗಳಲ್ಲಿ ಅನುಮತಿಯಿಲ್ಲದೆ ಪೋಸ್ಟರ್ ಹಾಗೂ ಬ್ಯಾನರ್‌ಗಳನ್ನು ಅಂಟಿಸಿ ವಿರೂಪಗೊಳಿಸುವವರಿಗೆ ಈ ಪ್ರಕರಣ ಎಚ್ಚರಿಕೆಯ ಸಂದೇಶವಾಗಿದೆ.
----------------
ಹಿಂದೂಸ್ತಾನ್ ಸಮಾಚಾರ್ / BHARGAVI G R