
ಹಾಸನ, 20 ಆಗಸ್ಟ್ (ಹಿ.ಸ.):
ಆ್ಯಂಕರ್:
‘ಉಳುವವನೇ ಭೂಮಿಯ ಒಡೆಯ’ ಎಂಬ ಕ್ರಾಂತಿಕಾರಿ ಕಾಯ್ದೆಯನ್ನು ಜಾರಿಗೆ ತಂದು, ಲಕ್ಷಾಂತರ ಬಡ ರೈತರಿಗೆ ಭೂಮಿಯ ಒಡೆತನದ ಹಕ್ಕು ನೀಡಿದವರು ಡಿ. ದೇವರಾಜ ಅರಸು ಎಂದು ಜಿಲ್ಲಾಧಿಕಾರಿ ಕೆ.ಎಸ್. ಲತಾಕುಮಾರಿ ತಿಳಿಸಿದ್ದಾರೆ.
ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ವತಿಯಿಂದ ಹಾಸನಾಂಬ ಕಲಾಕ್ಷೇತ್ರದಲ್ಲಿ ಆಯೋಜಿಸಿದ್ದ ಸಾಮಾಜಿಕ ಕ್ರಾಂತಿಯ ನೇತಾರ, ಪರಿವರ್ತನೆಯ ಹರಿಕಾರ ಹಾಗೂ ಕರ್ನಾಟಕ ಸರ್ಕಾರದ ಮಾಜಿ ಮುಖ್ಯಮಂತ್ರಿ ಡಿ. ದೇವರಾಜ ಅರಸು ಅವರ 111ನೇ ಜನ್ಮ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಬಡವರು ಮತ್ತು ಶೋಷಿತರ ಬಾಳಿಗೆ ಬೆಳಕಾದ ಮಹಾನ್ ನಾಯಕ ಡಿ. ದೇವರಾಜ ಅರಸು ಅವರನ್ನು ಸ್ಮರಿಸುವುದು ನಮ್ಮೆಲ್ಲರ ಹೆಮ್ಮೆಯ ವಿಷಯವಾಗಿದೆ. ಅರಸು ಅವರು ಕೇವಲ ನಾಯಕರಾಗಿರಲಿಲ್ಲ, ಶೋಷಿತರ ಧ್ವನಿಯಾಗಿದ್ದರು. ಅವರ ಆದರ್ಶಗಳು ಹಾಗೂ ಸಾಮಾಜಿಕ ನ್ಯಾಯದ ಹಾದಿಯನ್ನು ಮುಂದುವರಿಸಿಕೊಂಡು ಹೋಗುವುದು ನಮ್ಮೆಲ್ಲರ ಕರ್ತವ್ಯವಾಗಿದೆ ಎಂದು ಹೇಳಿದರು.
ಭಾರತ್ ಜೋಡೋ ಯುವ ಸಂಘದಲ್ಲಿ ಪ್ರತಿಯೊಬ್ಬರೂ ಆಡಳಿತದ ಹಾದಿಯಲ್ಲಿ ಮುನ್ನುಗ್ಗಬೇಕು. ಯುವಜನತೆ ಆಧುನಿಕ ಸಮಾಜದಲ್ಲಿ ಸಬಲೀಕರಣ ಹೊಂದಬೇಕು. ಸಾಮಾಜಿಕವಾಗಿ ಯುವಕರು ಸಂಘಟಿತರಾಗಿ, ಹಕ್ಕು ಪಡೆಯಲು ಹಾಗೂ ನ್ಯಾಯಕ್ಕಾಗಿ ಹೋರಾಟ ಮಾಡಲು ಸಿದ್ಧರಾಗಬೇಕು ಎಂದು ತಿಳಿಸಿದರು. 16 ವರ್ಷ ಮೇಲ್ಪಟ್ಟ ಹಾಗೂ 35 ವರ್ಷದೊಳಗಿನ ಯುವಕ-ಯುವತಿಯರು ಭಾರತ್ ಜೋಡೋ ಯುವ ಸಂಘದಲ್ಲಿ ನೋಂದಣಿ ಮಾಡಿಕೊಳ್ಳಬೇಕು ಎಂದು ಹೇಳಿದರು.
ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪಟೇಲ್ ಶಿವಪ್ಪ ಮಾತನಾಡಿ, ಆರ್ಥಿಕವಾಗಿ, ಸಾಮಾಜಿಕವಾಗಿ, ಶೈಕ್ಷಣಿಕವಾಗಿ ಹಾಗೂ ರಾಜಕೀಯವಾಗಿ ಹಿಂದುಳಿದ ವರ್ಗಗಳಿಗೆ ಅವಕಾಶ ಕಲ್ಪಿಸಿದವರು ಡಿ. ದೇವರಾಜ ಅರಸು ಎಂದು ತಿಳಿಸಿದರು. ವಿದ್ಯಾಭ್ಯಾಸಕ್ಕೆ ಶಕ್ತಿ ನೀಡಿ, ವಿದ್ಯೆ ಕಲಿಯಲು ಯಾವುದೇ ರೀತಿಯ ಜಾತಿ ಭೇದಭಾವ ಇರಬಾರದು ಎಂಬ ಸಂದೇಶವನ್ನು ಸಮಾಜಕ್ಕೆ ನೀಡಿದರು. ಅರಸು ಅವರ ಜಯಂತಿಯನ್ನು ಪ್ರತಿ ಗ್ರಾಮ, ಪಂಚಾಯಿತಿ ಹಾಗೂ ನಗರಗಳಲ್ಲೂ ಆಚರಿಸಬೇಕು ಎಂದು ಹೇಳಿದರು.
ಗ್ರಾಮೀಣ ಬದುಕಿನ ವಾಸ್ತವತೆ, ರೈತರ ಸಂಕಷ್ಟ, ಬಡತನ, ಸಾಮಾಜಿಕ ಅಸಮಾನತೆ ಹಾಗೂ ಅವಕಾಶಗಳ ಕೊರತೆಯನ್ನು ಹತ್ತಿರದಿಂದ ಕಂಡು ಬೆಳೆದ ಅವರ ವ್ಯಕ್ತಿತ್ವ ವಿಶೇಷವಾಗಿತ್ತು ಎಂದು ತಿಳಿಸಿದರು.
ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಶುಭಂ ಶುಕ್ಲಾ ಮಾತನಾಡಿ, ರೈತನಿಗೆ ಭೂಮಿ ಕೇವಲ ಆಸ್ತಿಯಲ್ಲ, ಅದು ಜೀವನೋಪಾಯದ ಆಧಾರ, ಆತ್ಮಗೌರವದ ಸಂಕೇತ ಹಾಗೂ ಸಮಾಜದಲ್ಲಿ ತನ್ನ ಸ್ಥಾನವನ್ನು ಕಟ್ಟಿಕೊಳ್ಳುವ ಪ್ರಮುಖ ಸಾಧನ ಎಂಬುದನ್ನು ಅರಿತುಕೊಂಡವರೇ ದೇವರಾಜ ಅರಸು ಎಂದರು.
ಸಾಮಾಜಿಕ ನ್ಯಾಯದ ಪರಿಕಲ್ಪನೆಯಲ್ಲಿ ಹಿಂದುಳಿದ ವರ್ಗಗಳ ಸಬಲೀಕರಣಕ್ಕೆ ಅವರು ವಿಶೇಷ ಸ್ಥಾನ ನೀಡಿದರು. ಅವರ ಆಡಳಿತ ಸಾಮಾಜಿಕ ನ್ಯಾಯಕ್ಕೆ ಮಾತ್ರ ಸೀಮಿತವಾಗಿರದೆ, ಗ್ರಾಮೀಣಾಭಿವೃದ್ಧಿ, ಬಡವರ ಕಲ್ಯಾಣ, ಉದ್ಯೋಗಾವಕಾಶ, ಶಿಕ್ಷಣ ಹಾಗೂ ಆರ್ಥಿಕ ಸಬಲೀಕರಣಕ್ಕೂ ಮಹತ್ವ ನೀಡಿತ್ತು ಎಂದು ಹೇಳಿದರು.
ಮೈಸೂರು ರಾಜ್ಯಕ್ಕೆ ಕರ್ನಾಟಕ ಎಂಬ ಹೆಸರು ಬಂದದ್ದು ಕನ್ನಡ ನಾಡಿನ ಇತಿಹಾಸದಲ್ಲಿ ಮಹತ್ವದ ಘಟ್ಟವಾಗಿದ್ದು, ಇಂತಹ ಸಾಧನೆಗೂ ದೇವರಾಜ ಅರಸು ಅವರ ಹೆಸರು ವಾಸಿಯಾಗಿದೆ ಎಂದು ತಿಳಿಸಿದರು.
ತುಮಕೂರು ವಿಶ್ವವಿದ್ಯಾನಿಲಯದ ಕುಲಸಚಿವ ಡಾ. ಮೋಹನ್ ಚಂದ್ರಗುತ್ತಿ ಮಾತನಾಡಿ, ದೇವರಾಜ ಅರಸು ಅವರು ಬಡ ಕುಟುಂಬದಿಂದ ಬಂದು ಹೋರಾಟಗಾರರಾಗಿ ಸಮಾಜದಲ್ಲಿ ಪ್ರಾಮುಖ್ಯತೆ ಪಡೆದರು. ಮಕ್ಕಳ ಜೀವನಕ್ಕೆ ಆದರ್ಶ ದೀಪವಾಗಿ, ವಿದ್ಯಾಭ್ಯಾಸವನ್ನು ಮುಖ್ಯ ಗುರಿಯನ್ನಾಗಿಸಿಕೊಂಡು ಸಮಾಜಕ್ಕೆ ಶಿಕ್ಷಣದ ಮಹತ್ವವನ್ನು ತಿಳಿಸಿಕೊಟ್ಟರು ಎಂದರು.
ದೇವರಾಜ ಅರಸು ಅವರು ಕೇವಲ ರಾಜಕಾರಣಿಯಾಗಿರಲಿಲ್ಲ. ಸಾಮಾಜಿಕ ಸಮಾನತೆ ತರಲು ಶ್ರಮಿಸಿದ ಮಹಾನ್ ಸಮಾಜ ಸುಧಾರಕರಾಗಿದ್ದರು. ‘ಉಳುವವನೇ ಭೂಮಿಯ ಒಡೆಯ’ ಎಂಬ ಕಾನೂನಿನ ಮೂಲಕ ಸಾವಿರಾರು ಭೂಹೀನ ರೈತರಿಗೆ ಜಮೀನು ಸಿಗುವಂತೆ ಮಾಡಿದರು. ಜೀತ ಪದ್ಧತಿ ಹಾಗೂ ಮಲಹೊರುವ ಪದ್ಧತಿ ನಿರ್ಮೂಲನೆ ಮೂಲಕ ಸಾಮಾಜಿಕ ಪರಿವರ್ತನೆಗೆ ಶ್ರಮಿಸಿದರು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಉಪವಿಭಾಗಾಧಿಕಾರಿ ಜಗದೀಶ್ ಗಂಗಣ್ಣನವರ್, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿ ಕುಮಾರ್ ಎಂ., ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ರಂಜಿತ್ ಜಿ.ಆರ್. ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.
---------------
ಹಿಂದೂಸ್ತಾನ್ ಸಮಾಚಾರ್ / Rakesh.M.B.